Advertisement

ಮ್ಯಾಜಿಕ್ ಮಾಂತ್ರಿಕ ಪುತ್ರ ಮತ್ತು ಹಾಸ್ಯನಟ ತಂದೆಯ ಪರಿಶ್ರಮ: ತಾರಸಿಯಲ್ಲರಳಿದ ತರಕಾರಿ ತೋಟ

09:59 AM Apr 10, 2021 | Team Udayavani |

ಕಟಪಾಡಿ: ಆರೋಗ್ಯಕರವಾದ ತರಕಾರಿಯನ್ನು ನಾವೇ ಬೆಳೆದುಕೊಂಡು ನೆಮ್ಮದಿಯಿಂದ ಊಟ ಮಾಡಬೇಕೆಂಬ ಕನಸು ನನಸು ಮಾಡಿಕೊಳ್ಳಲು ತಾರಸಿ ತೋಟವನ್ನು ಬೆಳೆದ ಪೋರ, ಮ್ಯಾಜಿಕ್ ಮಾಂತ್ರಿಕ ಪ್ರಥಮ್ ಕಾಮತ್ ಮತ್ತು ಈತನ ತಂದೆ ಹಾಸ್ಯನಟ ನಾಗೇಶ್ ಕಾಮತ್ ಕಟಪಾಡಿ ಇದೀಗ ಹೆಮ್ಮೆಯ ಮುಗುಳ್ನಗು ಬೀರುತ್ತಿದ್ದಾರೆ

Advertisement

ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದು ಬೇಸತ್ತ ಕಲಾವಿದ ತಂದೆ ಮತ್ತು ಶಾಲೆಯಿಲ್ಲದೆ  ಬೇಸತ್ತು ಏನಾದರೂ ಸಾಧನೆ ಮಾಡಬೇಕೆಂದು ಹಠಕ್ಕೆ ಬಿದ್ದಿದ್ದ ಚಿತ್ರಕಾರ ಪುತ್ರ ಕೂಡಿಕೊಂಡು  ತಮ್ಮಲ್ಲಿರುವ ತೋಟದಲ್ಲಿ ತರಕಾರಿ ಗಿಡಗಳನ್ನು ನೆಟ್ಟರು. ಆದರೆ ನೆರಳು ಜಾಸ್ತಿ ಇದ್ದ ಕಾರಣ ಯಾವುದೇ ಫಲ ಕೊಡಲಿಲ್ಲ . ಪ್ರಥಮ್‍ನ ಪ್ರಥಮ ಪ್ರಯತ್ನ ನಿರಾಶದಾಯಕವಾಗಿತ್ತು.

ಅನಂತರ ಛಲಬಿಡದೆ ಒಂದಷ್ಟು ಆಸಕ್ತಿ, ಇನ್ನೊಂಚೂರು ಶ್ರದ್ಧೆ ಮತ್ತು ಸ್ವಲ್ಪ ಸಮಯವನ್ನು ನೀಡಿ ಕಾಂಕ್ರಿಟ್ ಕಾಡಿನ ನಡುವೆಯೂ ತಮ್ಮ ಮನೆಯ ಸುಮಾರು 1000 ಚ.ಮೀ. ತಾರಸಿಯಲ್ಲಿ  ಹಳೆ ಪ್ಲಾಸ್ಟಿಕ್ ಚೀಲ, ಸಿಮೆಂಟ್ ಚೀಲಗಳಲ್ಲಿ ಕೆಂಪು ಮಣ್ಣು, ಸಾವಯವ ಗೊಬ್ಬರ ತುಂಬಿಸಿ , ಬೆಂಡೆ, ಗುಳ್ಳ, ಕುಂಬಳಕಾಯಿ, ಹರಿವೆ ಸೊಪ್ಪು, ಬಸಳೆ, ಟೊಮೆಟೊ, ಮೆಣಸಿನಕಾಯಿ, ಕಲ್ಲಂಗಡಿ, ಒಂದೆಲಗ, ಪುದಿನ,  ಮನೆಗೆ ಬೇಕಾಗುವ ಇನ್ನಿತರ ತರಕಾರಿಗಳನ್ನು ಅತಿ ಕಡಿಮೆ ಖರ್ಚಿನಲ್ಲಿ ಬೆಳೆಸುತ್ತಿದ್ದಾರೆ.

Advertisement

ಸ್ವತಃ ಪೈಪ್ ಕಾಂಪೋಸ್ಟ್ ಮೂಲಕ ಸಾವಯವ ಗೊಬ್ಬರ ಬಳಕೆಯೊಂದಿಗೆ ಪ್ರತಿದಿನ ಬೆಳಿಗ್ಗೆ ಒಂದು ಅರ್ಧ ಗಂಟೆ ಗಿಡದ ನಿರ್ವಹಣೆಯ ಕೆಲಸ ಹಾಗೆಯೇ ಸಂಜೆ ಗಿಡಕ್ಕೆ ಒಂದು ಗಂಟೆ ನೀರು ಉಣಿಸುವ ಕಾರ್ಯವನ್ನು ತಾಯಿ ಸುಜಾತಾ ಕಾಮತ್ ಮಾರ್ಗದರ್ಶನ ಪಡೆದುಕೊಂಡು ನಿರ್ವಹಿಸುತ್ತಿದ್ದಾರೆ.

ಮನೆಯ ತಾರಸಿಯು ಹಾಳಾಗದಂತೆ  ಹಂಚುಗಳನ್ನು ಅಡಿಪಾಯವಾಗಿಸಿ ಅದರ ಮೇಲೆ ಮಣ್ಣು, ಗೊಬ್ಬರ ತುಂಬಿದ ಗೋಣಿ ಚೀಲವನ್ನು ಇರಿಸಿ ಕಳೆದ  ಡಿಸೆಂಬರ್- ಜನವರಿಯಲ್ಲಿ ನೆಡಲಾದ ತರಕಾರಿ ಗಿಡಗಳು ಉತ್ತಮ ಇಳುವರಿಯನ್ನು ನೀಡುತ್ತಿದ್ದು,  ಮನೆಗೆ ಬೇಕಾದಷ್ಟು ತರಕಾರಿ ಬಳಸಿ ಹತ್ತಿರದವರೆಗೂ ಕೊಡುವಷ್ಟು ತರಕಾರಿ ಬೆಳೆಯುತ್ತಿದ್ದಾರೆ

ಮಾರ್ಗದರ್ಶನ, ಮಾಹಿತಿಗಾಗಿ  ನಾಗೇಶ್ ಕಾಮತ್‍ರನ್ನು ಸಂಪರ್ಕಿಸಿ: 9886432197

 

ಉದಯವಾಣಿಯ ಕೃಷಿ, ಪೈಪ್ ಕಾಂಪೋಸ್ಟ್ ಮಾಹಿತಿಗಳನ್ನು ನಿರಂತರವಾಗಿ ಫಾಲೋ ಅಪ್ ಮಾಡಿದ್ದರಿಂದ ತಾರಸಿ ಕೃಷಿಯಲ್ಲಿ ಯಶಸ್ಸು ಕಂಡಿದ್ದೇವೆ.  ಮನೆಯಲ್ಲೇ ಬೆಳೆದ ತಾಜಾ, ಸಾವಯವ ತರಕಾರಿ ಬಳಕೆಯಿಂದ ಆರೋಗ್ಯಕ್ಕೂ ಉತ್ತಮ. ಹೆಚ್ಚುವರಿ ಫಸಲನ್ನು ಮಾರಾಟ ಮಾಡದೇ ನೆರೆ ಹೊರೆಯವರೊಂದಿಗೆ ಹಂಚಿಕೊಂಡು ಬಳಸಲಾಗುತ್ತದೆ. ಎಳವೆಯಲ್ಲಿಯೇ ಪುತ್ರನ ಕೃಷಿ ಪ್ರೇಮ ಮನಸ್ಸಿಗೆ ತೃಪ್ತಿಯನ್ನು ತಂದಿದೆ.

 ನಾಗೇಶ್ ಕಾಮತ್, ಹಾಸ್ಯನಟ, ಕಟಪಾಡಿ

ತರಕಾರಿ ತೋಟ ಮಾಡಬೇಕೆಂಬ ಹಂಬಲ, ಉದಯವಾಣಿ ಕೃಷಿ ಮಾಹಿತಿಯ ಮಾರ್ಗದರ್ಶನ, ತಂದೆ, ತಾಯಿಯ ಬೆಂಬಲದಿಂದ ಮನೆಯ ತಾರಸಿಯಲ್ಲಿ ತರಕಾರಿ ತೋಟ ಸಿದ್ಧಗೊಳಿಸಿದ್ದು, ಉತ್ತಮ ಇಳುವರಿ ಕಾಣುತ್ತಿದ್ದೇನೆ. ಟ್ಯಾಂಕ್‍ನಿಂದ ಓವರ್ ಫೆÇ್ಲೀ ಆದ ನೀರು ಕೂಡಾ ವೇಸ್ಟ್ ಆಗಬಾರದೆಂಬ ಉದ್ದೇಶದಿಂದ ಅಲ್ಲೂ ಗಿಡಗಳನ್ನು ಬೆಳೆಸಲಾಗುತ್ತಿದೆ. ಮನೆಯಂಗಳದಲ್ಲೂ ತರಕಾರಿ ತೋಟವನ್ನು ಬೆಳೆಯುತ್ತಿದ್ದೇನೆ .

ಪ್ರಥಮ್ ಕಾಮತ್, ಜಾದೂಗಾರ, ಚಿತ್ರ ಕಲಾವಿದ, ಕಟಪಾಡಿ

 

ಚಿತ್ರ, ವರದಿ: ವಿಜಯ ಆಚಾರ್ಯ, ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next