ಮಂಗಳೂರು: ದೇಶದೊಳಕ್ಕೆ ಅಡಿಕೆಯ ಅಕ್ರಮ ಪ್ರವೇಶವನ್ನು ತಡೆಯುವಂತೆ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಡಿಆರ್‌ಎಫ್)ದ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.
ಭಾರತವು ಪ್ರತಿ ವರ್ಷ 15.63 ಲಕ್ಷ ಟನ್ ಅಡಿಕೆಯನ್ನು ಉತ್ಪಾದಿಸುತ್ತದೆ ಮತ್ತು ನಮ್ಮ ದೇಶದ ಸುಮಾರು 16 ಮಿಲಿಯ ಜನರ ಬೆನ್ನೆಲುಬಾಗಿದೆ. ಭಾರತವು ಅಡಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದರೂ ಪ್ರತೀ ವರ್ಷ ಸುಮಾರು 24,000 ಟನ್ ಅಡಿಕೆಯನ್ನು ಕಾನೂನುಬದ್ಧವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ.
ಬೆಳಗಾರರಿಗೂ ಸರಕಾರಕ್ಕೂ ನಷ್ಟ :
ಇತ್ತೀಚೆಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅಡಿಕೆ ಕಳ್ಳಸಾಗಣೆ ಇನ್ನೂ ಅಸ್ತಿತ್ವದಲ್ಲಿದೆ ಎಂದಿರುತ್ತಾರೆ. ತೆರಿಗೆ ಜಾಲದ ಹೊರಗೆ ವ್ಯಾಪಾರ ಮಾಡುವ ಅಡಿಕೆಯ ಪ್ರಮಾಣವು ಲಭ್ಯವಿಲ್ಲ ಎಂದೂ ಹೇಳಿದ್ದರು. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಅಡಿಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯದ ಪ್ರಕಾರ ಶೇ. 15 ಅಡಿಕೆಯನ್ನು ಮಾತ್ರ ಕ್ಯಾಂಪ್ಕೋ ಮಂಗಳೂರು ಸೇರಿದಂತೆ ಸಹಕಾರಿ ಸಂಸ್ಥೆಗಳು ವ್ಯಾಪಾರ ಮಾಡುತ್ತವೆ ಮತ್ತು ಶೇ. 85ನ್ನು ಖಾಸಗಿ ವ್ಯಾಪಾರಿಗಳು ಖರೀದಿಸುತ್ತಾರೆ. ಹೀಗಿರುವಾಗ ಕಳ್ಳಸಾಗಾಣಿಕೆದಾರರ ಅಕ್ರಮ ಚಟುವಟಿಕೆಗಳು ಸ್ಥಳೀಯವಾಗಿ ಬೆಳೆದ ಅಡಿಕೆಯ ಬೆಲೆಯನ್ನು ಅಸ್ಥಿರಗೊಳಿಸುವುದಲ್ಲದೆ ಲಕ್ಷಾಂತರ ಅಡಿಕೆ ರೈತರ ಜೀವನ ಮತ್ತು ಆರ್ಥಿಕ ಸ್ಥಿತಿಯ ಮೇಲೆ, ಜಿಎಸ್‌ಟಿ ರೂಪದಲ್ಲಿ ಉತ್ಪತ್ತಿಯಾಗುವ ಆದಾಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಡಾ| ಹೆಗ್ಗಡೆ ಅಭಿಪ್ರಾಯ ಪಟ್ಟಿದ್ದಾರೆ.
ಅಡಿಕೆಯ ಸರಕು ಪಟ್ಟಿಯಲ್ಲಿ ಕಡಿಮೆ ದರವನ್ನು ನಮೂದಿಸಿ ಮಾರಾಟ ಮಾಡುವುದನ್ನು ತಡೆಯಲು, ನಮ್ಮ ದೇಶದ ಬಿಳಿ ಮತ್ತು ಕೆಂಪು ಅಡಿಕೆಗಳೆರಡರಲ್ಲೂ ಪರಿಣತರಾಗಿರುವ ಸಹಕಾರಿ ವಲಯದ ಸಮರ್ಥ ನೋಡಲ್ ಏಜೆನ್ಸಿ ಕ್ಯಾಂಪ್ಕೋ ಅಥವಾ ಎಡಿಆರ್‌ಎಫ್ ಅನ್ನು ಅಂತಹ ಸರಕುಗಳ ಮೌಲ್ಯಮಾಪನ ಮತ್ತು ವರದಿಗಳನ್ನು ನೀಡಲು ಗುರುತಿಸಬಹುದು ಎಂದು ಸಲಹೆ ನೀಡಿರುವ ಅವರು, ಈ ವಿಷಯಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಚಿವಾಲಯಗಳಿಗೆ ಸೂಚನೆ ನೀಡಬೇಕೆಂದು ಪ್ರಧಾನಿ ಅವರಿಗೆ ಸ್ವತಃ ಅಡಿಕೆ ಬೆಳೆಗಾರರಾಗಿರುವ ಡಾ| ಹೆಗ್ಗಡೆ ಅವರು ಆಗ್ರಹಿಸಿದ್ದಾರೆ.