ಮೈಸೂರು: ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕೇಂದ್ರ ಕ್ಕೆ ಶಿಫಾರಸು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವೀರಶೈವ ಮುಖಂಡರು ಆಕ್ರೋಶ ಹೊರ ಹಾಕುತ್ತಿರುವಾಗಲೇ ಮೈಸೂರು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹಿನಕಲ್ ಬಸವರಾಜ್ ಬಹಿರಂಗ ಬೆಂಬಲ ಸೂಚಿಸಿ ಆಣೆಯನ್ನೂ ಮಾಡಿದ್ದಾರೆ. ಈ ವಿಡಿಯೋ ಬಹಿರಂಗಗೊಂಡಿದ್ದು, ಇದರ ವಿರುದ್ಧ ಸಂಘಟದ ಪದಾಧಿಕಾರಿಗಳು ಸಭೆ ನಡೆಸಿ ತೀವ್ರ ವಿರೋಧವನ್ನೂ ತೋರಿದ್ದಾರೆ.
ಕಾಂಗ್ರೆಸ್ ಮುಖಂಡರೊಬ್ಬರ ನಿವಾಸದಲ್ಲಿ ನಡೆದಿದೆ ಎನ್ನಲಾದ ಸಭೆಯಲ್ಲಿ ಹಿನಕಲ್ ಬಸವರಾಜ್ ಅವರು ಸಿಎಂ ಎದುರು ನಿಂತು ವೀರಾವೇಶದಿಂದಮಾತನಾಡಿ ವೀರಶೈವರೆಲ್ಲಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮನ್ನೇ ಬೆಂಬಲಿಸುವುದಾಗಿ ಆಣೆಯನ್ನೂ ಮಾಡಿದ್ದಾರೆ.
ಹಿನಕಲ್ ಘೋಷಣೆ ಮಾಡುತ್ತಿರುವ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕೈಕಟ್ಟಿ ಮೌನವಾಗಿ ಕುಳಿತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಈ ಹಿಂದೆ ಹಿನಕಲ್ ಬಸವರಾಜ್ ಸಿಎಂ ಸಿದ್ದರಾಮಯ್ಯ ಧರ್ಮ ಒಡೆದಿದ್ದಾರೆ ಎಂದು ಕಿಡಿಯನ್ನೂ ಕಾರಿದ್ದರು.
ಈ ಬಗ್ಗೆ ಮಂಗಳವಾರ ಸಭೆ ಸೇರಿರುವ ವೀರಶೈವ ಮಹಾಸಭಾ ದ ಸದಸ್ಯರು ಹಿನಕಲ್ ಬಸವರಾಜ್ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಹಿನಕಲ್ ಬಸವರಾಜ್ ಸೇರಿದಂತೆ ಮೂವರು ಪದಾಧಿಕಾರಿಗಳನ್ನು ಸಂಘಟನೆಯಿಂದ ವಜಾ ಮಾಡಲಾಗಿದೆ.