ಧಾರವಾಡ: ಅಖೀಲ ಭಾರತ ವೀರಶೈವ ಮಹಾಸಭಾ ಕಾಂಗ್ರೆಸ್ ಪಕ್ಷದ ಆಸ್ತಿಯಲ್ಲ. ಅಥವಾ ಪಕ್ಷದ ಅಂಗ ಸಂಸ್ಥೆಯಲ್ಲ ಎಂದು ಸಮಾಜದ ಮುಖಂಡ ಟಿ.ಎಸ್.ಪಾಟೀಲ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮುಖಂಡರು ಮಹಾಸಭಾ ದುರ್ಬಳಕೆ ಮಾಡಿಕೊಳ್ಳುವುದು ಖಂಡನೀಯ. ವೀರಶೈವ ಮಹಾಸಭಾ ಪ್ರತ್ಯೇಕ, ಸ್ವತಂತ್ರ, ಸಾಮಾಜಿಕ ಸಂಸ್ಥೆ ಆಗಿದ್ದು, ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಆಸ್ತಿಯಂತೂ ಮೊದಲೇ ಅಲ್ಲ ಎಂದರು.
ಕಾಂಗ್ರೆಸ್-ಜೆಡಿಎಸ್‌ನ ಕೆಲ ಮುಖಂಡರು ಶೃತಿ ಬೆಳ್ಳಕ್ಕಿ ಪ್ರಕರಣದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ದುರ್ಬಳಕೆ ಮಾಡಿಕೊಂಡಿದ್ದಾರೆ. ಪ್ರತಿಭಟಿಸುವ ಬಗ್ಗೆ ಸಭೆಯಲ್ಲಿ ಠರಾವು ಆಗಿಲ್ಲ. ಇದಕ್ಕೂ ಸಮಾಜ ಬೆಂಬಲ ಇಲ್ಲ. ಧರ್ಮ ಒಡೆಕರೇ ಪ್ರತಿಭಟಿಸಿದ್ದಾರೆ. ಶೃತಿ ಅವರು ತಪ್ಪು ಹೇಳಿಕೆ ನೀಡಿದ್ದರೆ, ಲಿಂಗಾಯತ ಸಮಾಜದ ಹಿರಿಯರೇ ಆಕೆಯನ್ನು ಭೇಟಿಯಾಗಿ ಅಥವಾ ಮಹಾಸಭೆಗೆ ಕರೆಯಿಸಿ ತಿಳಿವಳಿಕೆ ಹೇಳಬಹುದಿತ್ತು. ಆದರೆ, ಅದು ಬಿಟ್ಟು ಚುನಾವಣೆ ಮುಗಿದ ನಂತರ ದಶರಥ ದೇಸಾಯಿ ಅವರಿಂದ ದೂರು ಕೊಡಿಸಿ, ಆಕೆಯನ್ನು ಬಂಧನವಾಗುವಂತೆ ಕುತಂತ್ರ ಮಾಡಿದ್ದಾರೆಂದು ದೂರಿದರು.
ವಿವಾಹಿತ ಮಹಿಳೆ ಬಂಧಿಸುವಂತೆ ಮಾಡಿದ ಕ್ರಮ ಲಿಂಗಾಯತ ಸಮಾಜ ಒಪ್ಪುವುದಿಲ್ಲ. ವಿನಯ ಕುಲಕರ್ಣಿ, ಎಂ.ಬಿ. ಪಾಟೀಲ ಆಕೆಯ ಬಂಧನಕ್ಕೆ ಜಾಲ ಹೆಣೆದಿದ್ದು, ಇದಕ್ಕೂ ಗುರುರಾಜ ಹುಣಸಿಮರದ ಪ್ರತಿಭಟನೆಯ ಕುಮ್ಮಕ್ಕು ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಶೃತಿ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಶೃತಿ ಜೀವ ಬೆದರಿಕೆ ಬಗ್ಗೆ ಡಿಸಿ ಅವರಿಗೆ ಮನವಿ ನೀಡಿದರೂ ಸ್ಪಂದಿಸಿಲ್ಲ. ಸ್ವತಃ ವಿನಯ ಕುಲಕರ್ಣಿ ಅವರೇ ಶೃತಿಗೆ ಬುದ್ಧಿ ಹೇಳಿ, ಅವಳ ಬಂಧನ ತಡೆಯಬಹುದಿತ್ತು. ಅದು ಬಿಟ್ಟು ಕಾಂಗ್ರೆಸ್ ನಾಯಕರನ್ನು ಮೆಚ್ಚಿಸಲು ಬಿಜೆಪಿ ನಾಯಕರ ವಿರುದ್ಧ ಪ್ರತಿಭಟಿಸುವುದು ನಾಚಿಗೇಡಿನ ಸಂಗತಿ. ಇದು ಸಮಾಜದ ಹಾದಿ ತಪ್ಪಿಸುವ ಕೆಲಸ ಎಂದರು.
ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ವಿ.ಎಸ್.ಸವಡಿ, ವೀರಶೈವ ಸಮಾಜಕ್ಕೂ ಕುಲಕರ್ಣಿ, ಪಾಟೀಲ ಹಾಗೂ ಹುಣಸಿಮರದ ಕೊಡುಗೆ ಶೂನ್ಯ. ಸಮಾಜಕ್ಕೆ ಒಂದು ನಯಾಪೈಸೆ ದೇಣಿಗೆ ನೀಡಿಲ್ಲ. ಇವರಿಗೆ ಜನತೆ ಈಗಾಗಲೇ ಬುದ್ಧಿ ಕಲಿಸಿದ್ದಾರೆ. ಶೃತಿ ಮೇಲಿನ ದೂರು ವಾಪಸ್ ಪಡೆಯದಿದ್ದರೆ ಮುಂದೆಯೂ ಕಲಿಸಲಿದ್ದಾರೆಂದು ಎಚ್ಚರಿಸಿದರು.
ಪಾಲಿಕೆ ಮಾಜಿ ಮೇಯರ್ ಶಿವು ಹಿರೇಮಠ, ಮಲ್ಲಿಕಾರ್ಜುನ ಹೊರಕೇರಿ, ಈರಣ್ಣ ಅಪ್ಪಳ್ಳಿ, ಶರಣು ಅಂಗಡಿ, ದೇವರಾಜ ಶಹಪೂರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.