ಬೆಂಗಳೂರು: ವೀರಶೈವ- ಲಿಂಗಾಯತ ಒಂದೇ ಆಗಿದ್ದು, ಇದರಡಿ ಕೈಗೊಳ್ಳುವ ಯಾವುದೇ ಒಮ್ಮತದ ನಿರ್ಣಯಗಳಿಗೆ ತಮ್ಮ ಬೆಂಬಲ ಮತ್ತು ಬದ್ಧತೆ ಇದೆ ಎಂದು ಅಕ್ಕಮಹಾದೇವಿ ಸೇವಾ ಸಮಾಜ ತಿಳಿಸಿದೆ. ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ನಡೆದ ವಿವಾದದ ಹಿನ್ನೆಲೆಯಲ್ಲಿ ಸಮುದಾಯದ ಮಹಿಳಾ ಸಂಘ-ಸಂಸ್ಥೆಗಳು ಅಕ್ಕಮಹಾದೇವಿ ಸೇವಾ ಸಮಾಜದಡಿ ಸಭೆ ನಡೆಸಿದ್ದು, ಅದರಂತೆ ವೀರಶೈವ -ಲಿಂಗಾಯತ ಒಂದೇ ಎನ್ನುವ ಒಮ್ಮತದ ಅಭಿಪ್ರಾಯ ಬೆಂಬಲಿಸಲು ನಿರ್ಧರಿಸಲಾಯಿತು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳು ಈ ವಿಷಯ ತಿಳಿಸಿದರು.
ಉಡುತಡಿಯ ಅಕ್ಕಮಹಾದೇವಿ ಸಮಿತಿ ಮುಖ್ಯಸ್ಥೆ ಹಾಗೂ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ಅಕ್ಕಮಹಾದೇವಿ ಸೇವಾ ಸಮಾಜದಲ್ಲಿ ವಿವಿಧ ಪಕ್ಷಗಳ ಮಹಿಳಾ ಮುಖಂಡರಿರಬಹುದು. ಆದರೆ, ಅವರೆಲ್ಲರ ಅಭಿಪ್ರಾಯ ಒಂದೇ ಆಗಿದೆ. ವೀರಶೈವ-ಲಿಂಗಾಯತಕ್ಕೆ
ಸಮಾಜದ ಬೆಂಬಲ ಮತ್ತು ಬದ್ಧತೆ ಇರಲಿದೆ ಎಂದು ಹೇಳಿದರು.
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ರಾಜಕೀಯ, ಧಾರ್ಮಿಕ ಮುಖಂಡರು ವೀರಶೈವ- ಲಿಂಗಾಯ ತದ ವಿಷಯದಲ್ಲಿ ನೀಡುತ್ತಿರುವ ಹೇಳಿಕೆಗಳು ಅವರವರ ವೈಯಕ್ತಿಕ ಅಭಿಪ್ರಾಯಗಳು. ಆದರೆ, ಇದೆಲ್ಲ ದರಿಂದ ಹೊರತಾಗಿ ಅಕ್ಕಮಹಾದೇವಿ ಸೇವಾ ಸಮಾಜ ವೀರಶೈವ- ಲಿಂಗಾಯತ ಒಂದೇ ಆಗಿದ್ದು, ಇದು ಕೈಗೊಳ್ಳುವ ಒಮ್ಮತದ ನಿರ್ಣಯವನ್ನು ಬೆಂಬಲಿಸಲು ನಿರ್ಧರಿಸಿದೆ ಎಂದರು.
ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಮಾತನಾಡಿ, ಸಮುದಾಯವನ್ನು ಒಡೆದು, ಲಿಂಗಾಯತ ಪ್ರತ್ಯೇಕಗೊಳಿಸುವ ಸಚಿವರಾರೂ ಬಸವಣ್ಣನ ಅನುಯಾಯಿಗಳೇ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷೆ ಡಿ.ಸಿ. ಉಮಾದೇವಿ, ಶಾಸಕಿ ಶಶಿಕಲಾ ಜೊಲ್ಲೆ, ಸುಮಂಗಲಿ ಸೇವಾಶ್ರಮದ ಸುಶೀಲಮ್ಮ, ಸ್ನೇಹ ಸಂಸ್ಥೆಯ ಸುಜಾತಾ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.