ಕಾರ್ಕಳ: ಈ ಬಾರಿ ಬಿಜೆಪಿ ವಿರುದ್ಧ ಜ್ವಾಲಾಮುಖಿ ಸ್ಫೋಟವಾಗಲಿದ್ದು, ಮೋದಿ ಹಾಗೂ ಅವರ ಪಕ್ಷವನ್ನು ಮತದಾರರು ಸುಟ್ಟು ಭಸ್ಮ ಮಾಡಲಿರುವರು ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜಿ ಹಣಕಾಸು ಸಚಿವ ಡಾ| ಎಂ. ವೀರಪ್ಪ ಮೊಯ್ಲಿ ಹೇಳಿದರು.
ಪಕ್ಷದ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, ಮೋದಿಯವರ ಏಕಚಕ್ರಾಧಿಪತ್ಯದ ಕನಸು ನುಚ್ಚುನೂರಾಗಲಿದೆ. 2012ರಲ್ಲಿ 76 ಸಾವಿರ ಕೋಟಿ ರೈತರ ಸಾಲವನ್ನು ಮನಮೋಹನ್ ಸಿಂಗ್ ಸರಕಾರ ಮನ್ನಾ ಮಾಡಿತ್ತು. ಮೋದಿ ಸರಕಾರ 21ಸಾವಿರ ಕೋಟಿ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ನಮ್ಮ ವೈಖರಿ ಹಾಗೂ ಅವರ ವೈಖರಿ ನಡುವೆ ಇರುವ ವ್ಯತ್ಯಾಸವಿದು ಎಂದರು.
ಬಿಜೆಪಿಯವರು ಬೇಟಿ ಬಚಾವೋ ಬೇಟಿ ಪಡಾವೋ ಎನ್ನುತ್ತಾರೆ. ಅಂಕಿ ಅಂಶ ಪ್ರಕಾರ 2014ರಿಂದ 3.71 ಲಕ್ಷ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಮಹಿಳೆಯರ ರಕ್ಷಣೆಗೆ ಕಾಂಗ್ರೆಸ್ ಸರಕಾರ ಹಿಂದೆ ನಿರ್ಭಯಾ ಫಂಡ್ ಸ್ಥಾಪಿಸಿತ್ತು. ಇದಕ್ಕೆ ಮೋದಿ ಸರಕಾರದಲ್ಲಿ ಸ್ವತಃ ಮಹಿಳೆಯಾದ ಅರ್ಥ ಸಚಿವರು ಹಣ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದರು.
ನಾನು ಪರಿಸರ ಮಂತ್ರಿಯಾಗಿದ್ದಾಗ ಜಯಪ್ರಕಾಶ್ ಹೆಗ್ಡೆಯವರ ಆಗ್ರಹದ ಹಿನ್ನೆಲೆಯಲ್ಲಿ ಆಗುಂಬೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಕುದುರೆಮುಖ ರಸ್ತೆಯನ್ನೂ ನಾವೇ ನಿರ್ಮಿಸಿದ್ದು. ಆದರೆ ಬಿಜೆಪಿಯವರು ನಾವು ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಸುಳ್ಳು ಹೇಳುವ ಶ್ಯಾನುಭೋಗರನ್ನು ಇಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಮೋದಿ ಕಾ ಸರಕಾರ್, ಮೋದಿ ಕಾ ಭಾರತ್ ಎಂಬಷ್ಟರ ಮಟ್ಟಿಗೆ ಪ್ರಜಾತಂತ್ರ ಅಳಿದಿದೆ. ಇದನ್ನು ಉಳಿಸಲು ರಾಷ್ಟ್ರೀಯ ಪಕ್ಷಗಳೆಲ್ಲವೂ ಒಂದಾಗಬೇಕು ಎಂದರು. ಮುಖಂಡರಾದ ಉದಯ ಕುಮಾರ್‌ಶೆಟ್ಟಿ, ಡಿ.ಆರ್. ರಾಜು ಮತ್ತಿತರರು ಉಪಸ್ಥಿತರಿದ್ದರು.