ಬಂಟ್ವಾಳ: ತುಳುನಾಡಿನ ಜಾನಪದ ಸಂಪ್ರದಾಯಗಳಲ್ಲಿ ಆಟಿ ಕಳೆಂಜವು ವಿಶೇಷವಾಗಿದ್ದು, ಅದು ವಿರಳವಾದರೂ ಒಂದಷ್ಟು ಪ್ರದೇಶಗಳಲ್ಲಿ ಈಗಲೂ ಮನೆ ಮನೆಗಳಿಗೆ ತೆರಳಿ ಊರಿಗೆ ಅಂಟಿರುವ ಮಾರಿಯನ್ನು ಓಡಿಸುತ್ತದೆ ಎಂಬ ನಂಬಿಕೆ ಉಳಿದುಕೊಂಡಿದೆ. ಗುರುವಾರ ವೀರಕಂಭ ಗ್ರಾಮದ ಕೆಲಿಂಜದ ಕಲ್ಮಲೆ ಪ್ರದೇಶದಲ್ಲಿ ಮನೆ ಮನೆಯಲ್ಲಿ ಆಟಿ ಕಳೆಂಜ ನರ್ತನ ಸೇವೆ ನಡೆದಿದೆ. ಮಂಗಳಪದವಿನ ಸುರುಳಿಮೂಲೆ ನಿವಾಸಿ ಸೋಮಪ್ಪ ಸುರುಳಿಮೂಲೆ ಅವರು ಪ್ರತಿವರ್ಷವೂ ತಮ್ಮ ಸಂಗಡಿಗರ ಜತೆ ಗೂಡಿ ಕೆಲಿಂಜ, ಒಕ್ಕೆತ್ತೂರು, ವೀರಕಂಭ ಪ್ರದೇಶದಲ್ಲಿ ಹಿಂದೂ ಮನೆಗಳಿಗೆ ಭೇಟಿ ನೀಡಿ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದಾರೆ. ಆಟಿ ಕಳೆಂಜ ಮನೆಗೆ ಬಂದಾಗ ಪ್ರತಿಯೊಬ್ಬರು ಸಂತೋಷದಿಂದ ಸ್ವಾಗತಿಸುವ ಪ್ರಕ್ರಿಯೆಯೂ ಅವರನ್ನು ಪ್ರತಿವರ್ಷ ಆಟಿ ಕಳೆಂಜದ ಮೂಲಕ ತಿರುಗಾಡಲು ಪ್ರೇರಣೆ ನೀಡಿದೆ.
ಮುಂದಿನ ಜನಾಂಗಕ್ಕೆ ದಾಟಿಸುವ ಹೊಣೆ
ಡಿಪ್ಲೊಮಾ ವಿದ್ಯಾಭ್ಯಾಸ ಮುಗಿಸಿರುವ ಅವರ ಪುತ್ರ ತಿಲಕ್‌ರಾಜ್ ಆಟಿ ಕಳೆಂಜ ವೇಷ ಹಾಕುತ್ತಿದ್ದು, ನಮ್ಮ ಹಳೆಯ ಪದ್ಧತಿ, ಸಂಪ್ರದಾಯ, ಆಚರಣೆಗಳನ್ನು ಉಳಿಸಿಕೊಂಡು ಬರುತ್ತೇವೆ. ನನ್ನ ತಂದೆ ನನಗೆ ಕಲಿಸಿದ್ದು, ಅದನ್ನು ಮುಂದಿನ ಜನಾಂಗಕ್ಕೆ ದಾಟಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎನ್ನುತ್ತಾರೆ.