ಉಡುಪಿ ಗುಂಡಿಬೈಲಿನ ಯಕ್ಷಗಾನ ಕಲಾಕ್ಷೇತ್ರದಲ್ಲಿ ಶಾರದಾ ಪೂಜೆ ಪ್ರಯುಕ್ತ ಮಕ್ಕಳು ಹಾಗೂ ಮಹಿಳೆಯರಿಂದ “ವೀರ ಅಭಿಮನ್ಯು’ ಮತ್ತು ಸಂಘದ ಹಿರಿಯ ಕಲಾವಿದರಿಂದ “ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗುರು ಪೆರಂಪಳ್ಳಿಯ ಉದಯಕುಮಾರ್ ಮಧ್ಯಸ್ಥರ ದಕ್ಷ ನಿರ್ದೇಶನದಲ್ಲಿ ಪೂರ್ವರಂಗ ಸಹಿತವಾಗಿ ಮೂಡಿಬಂದ “ವೀರ ಅಭಿಮನ್ಯು’ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಗೃಹಿಣಿಯರು ಮತ್ತು ಬಾಲಕಿಯರು ಹೆಚ್ಚಿನ ಪಾತ್ರಗಳನ್ನು ನಿರ್ವಹಿಸಿದ್ದು ಗಮನಾರ್ಹ. ಪಾರಂಪರಿಕ ಕೋಡಂಗಿ ನೃತ್ಯ, ಬಾಲಗೋಪ, ಪೀಠಿಕಾ ಸ್ತ್ರೀವೇಷಗಳಲ್ಲಿ ಪ್ರಥಮ ಬಾರಿಗೆ ರಂಗಪ್ರವೇಶ ಮಾಡಿದ ಬಾಲರು ಯಾವುದೇ ಅಳುಕಿಲ್ಲದೆ ನಿರ್ವಹಣೆ ನೀಡಿ ಸೈ ಎನಿಸಿಕೊಂಡರು. ಕೌರವ, ಕರ್ಣ, ದುಶ್ಯಾಸನರಾಗಿ ಸೌಮ್ಯಾ, ಕು| ಸಿಂಚನಾ, ಕು| ಲಕ್ಷ್ಮೀ ಇವರ ಸಂಪ್ರದಾಯಬದ್ಧ ಒಡ್ಡೋಲಗ ಕುಣಿತದೊಂದಿಗೆ ಹಿತಮಿತವಾದ ಅರ್ಥಗಾರಿಕೆಯಲ್ಲಿ ಗಮನ ಸೆಳೆದರು. ದ್ರೋಣನಾಗಿ ಉತ್ತಮ ನೃತ್ಯಾಭಿನಯದಿಂದ ಕು| ಅನುಷಾ ಮೆಚ್ಚುಗೆಗೆ ಪಾತ್ರರಾದರು. ಕರ್ಣಾರ್ಜುನರಾಗಿ ಕು| ಪೌಷ,
ಸುಗಂಧಿಯವರ ಜೋಡಿ ಮನ ಸೆಳೆಯಿತು. ಸಮಸಪ್ತಕರಾಗಿ ಅಟ್ಟಹಾಸದ ಪ್ರವೇಶ ಮಾಡಿದ ಮಾ| ಭುವನ್ ಅಬ್ಬರವನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವಲ್ಲಿ ಸಫಲರಾದದ್ದು ಅವರ ಶ್ರದ್ಧೆಯನ್ನು ತೋರಿಸುತ್ತಿತ್ತು.
ಪ್ರಥಾಮಾರ್ಧದ ಅಭಿಮನ್ಯುವಾಗಿ ಕು| ಮೇಧಾ ದಣಿವಯರಿಯದ ಕುಣಿತ ಮತ್ತು ಹಸನ್ಮುಖ ಭಾವಾಭಿನಯದಲ್ಲಿ ಮಿಂಚಿದರೆ ಮಾತೆ ಸುಭದ್ರೆಯಾಗಿ ಭಾವಾನಾತ್ಮಕ ಅಭಿನಯ ನೀಡುವಲ್ಲಿ ಕು| ದೃಶ್ಯ ಮೆಚ್ಚುಗೆಗಳಿಸಿದರು. ದ್ವಿತೀಯಾರ್ಧದ ಅಭಿಮನ್ಯುವಾಗಿ ಮಿಂಚು ಹರಿಸಿದ್ದು ಕು| ಶ್ರೀಪದ್ಮಾ ಚಕ್ರವ್ಯೂಹ ಭೇದಿಸಿ ಅತಿರಥರನ್ನು ಕೆಡಹಿ ಕುರರಾಯನನ್ನು ಬಂಧಿಸಿ ಕೆಣಕುವ ಪರಿ ವೃತ್ತಿ ಕಲಾವಿದರ ನಿರ್ವಹಣೆಗೆ ಸರಿಸಾಟಿಯಾಗಿತ್ತು. ದೊಂದಿ ಬೆಳಕಿನಲ್ಲಿ ಚಕ್ರವ್ಯೂಹದ ಚಿತ್ರಣ ವಿಶಿಷ್ಟವಾಗಿತ್ತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಭಾಕರ್ ಹೇರೂರು, ಮದ್ದಲೆಯಲ್ಲಿ ರಕ್ಷಿತ್ ಮಲ್ಯ, ಚೆಂಡೆಯಲ್ಲಿ ಶಾಂತಾರಾಮ ಆಚಾರ್ಯರ ಉತ್ತಮ ನಿರ್ವಹಣೆ ನೀಡಿದರು.
ನಂತರ ನಡೆದ “ಸುಧನ್ವ ಮೋಕ್ಷ’ ಪ್ರಸಂಗದ ಅಶ್ವಮೇಧಯಾಗದ ತುರಗ ರಕ್ಷಕನಾಗಿ ಅರ್ಜುನ ಗಣೇಶ್ ಕೋಟ್ಯಾನ್ ರಂಗದ ಹಿಡಿತದಲ್ಲಿ ಪ್ರಬುದ್ಧತೆ ಮೆರೆದರೆ, ವೃಷಕೇತು, ಪ್ರದ್ಯುಮ್ನರಾಗಿ ದರ್ಶನ್, ಶ್ರೀಧರ ಭಟ್ ಗಮನ ಸೆಳೆದರು. ಸುಧನ್ವನಾಗಿ ನವೀನ್ ಭಟ್ ಮಿಂಚಿದರೆ, ಸತಿ ಪ್ರಭಾವತಿಯಾಗಿ ವಿಶ್ವನಾಥ ಕಾಮತ್ ಗಮನ ಸೆಳೆದರು. ಕೃಷ್ಣನಾಗಿ ಅನುಭವಿ ಕಲಾವಿದ
ಡಾ| ರಮೇಶ್ ಚಿಂಬಾಳ್ಕರ್ ಮೆಚ್ಚುಗೆ ಗಳಿಸಿದರು. ಹವ್ಯಾಸಿ ವಯದ ಪ್ರಸಿದ್ಧ ಭಾಗವತ ನಿಟ್ಟೂರು ಶೀನಪ್ಪ ಸುವರ್ಣರ ಭಾಗವತಿಕೆ ಹಾಗೂ ಹಿಮ್ಮೇಳ ಪ್ರಸಂಗಕ್ಕೆ ಪೂರಕವಾಗಿ ಮೂಡಿಬಂದು ಯಶಸ್ವೀ ಪ್ರದರ್ಶನವೆನಿಸಿತು.
ಜಯಂತ್, ಕಾಪು