Advertisement

ವೀಣೆ ಶೇಷಣ್ಣ ನೆನಪಿನ ಸಂಗೀತೋತ್ಸವ ವೀಣೆಯ ಬೆಡಗು

07:42 PM Oct 31, 2019 | mahesh |

ಧರ್ಮಸ್ಥಳ ಮಂಜುನಾಥ ದೇವಸ್ಥಾನ ಮತ್ತು ಸ್ವರಮೂರ್ತಿ ವಿ.ಎನ್‌. ರಾವ್‌ ಮೆಮೊರಿಯಲ್‌ ಟ್ರಸ್ಟ್‌ ಹಾಗೂ ಕನ್ನಡ-ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ದ್ವಿದಿನ “ವೀಣೆಯ ಬೆಡಗು’ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ ಉತ್ಕೃಷ್ಟ ಮಟ್ಟದ ಶ್ರೇಷ್ಠ ಕಲಾವಿದರ ಸಂಗೀತ ಕಲಾ ಕಾರ್ಯಕ್ರಮಗಳು ಸಂಗೀತ ಕಲಾಭಿಮಾನಿಗಳ ಹೃನ್ಮನ ಸೂರೆಗೊಂಡಿತು.

Advertisement

ಎರಡು ದಿನಗಳ ಸಂಗೀತೋತ್ಸವದಲ್ಲಿ ಬೆಳಗ್ಗೆ ಸಂಗೀತಾಭ್ಯಾಸಿಗಳಿಗೆ ಸಂಗೀತ ವಿಧ್ವಾಂಸರಿಂದ ಅತ್ಯುತ್ತಮ ಕಾರ್ಯಾಗಾರ ಉಪಯುಕ್ತವೆನಿಸಿತು. ಸುಮಾರು 80 ಸಂಗೀತಾಭ್ಯಾಸಿಗಳು ಶಿಬಿರದ ಪ್ರಯೋಜನ ಪಡೆದರು. ವೀಣೆಯ ಬೆಡಗು ಕಾರ್ಯಕ್ರಮದ ಮೊದಲ ಕಚೇರಿ ಪ್ರೊ| ಅರವಿಂದ ಹೆಬ್ಟಾರ್‌ ಮತ್ತು ವೃಂದದವರ ವೃಂದ ಗಾಯನದೊಂದಿಗೆ ಆರಂಭಗೊಂಡಿತು. ಸಹಗಾಯಕರಾಗಿ ವಸಂತಲಕ್ಷ್ಮೀ ಹೆಬ್ಟಾರ್‌, ಸಮನ್ವಿ, ಅರ್ಚನಾ, ಉಮಾಶಂಕರಿ ಮತ್ತು ರಾಧಿಕಾ ಸಮೂಹ ಗಾಯನದಲ್ಲಿ ತ್ಯಾಗರಾಜರ ಕೃತಿಗಳನ್ನು ಪ್ರಸ್ತುತ ಪಡಿಸಿದರು. ಶಂಭೋ ಮಹಾದೇವ ಶಂಕರ, ನೀ ವಂಟಿ ದೈವಮು, ದಿನಮಣಿ ವಂಶ, ಬಂಟುರೀತಿ ಕೋಲು, ಪವನ ಜಾಸ್ತುತಿ ಪಾತ್ರ ಕೃತಿಗಳನ್ನು ಐದೂ ಜನ ಏಕಕಂಠದಲ್ಲಿ ಮೇಳೈಸಿದ್ದು ಜನಮನ ಸೂರೆಗೊಂಡಿತು. ಹಿಮ್ಮೇಳದಲ್ಲಿ ವಿ| ಸಿ.ಎನ್‌ ತ್ಯಾಗರಾಜನ್‌ (ಪಿಟೀಲು), ವಿ| ಕೃಷ್ಣಪವನ್‌ ಕುಮಾರ್‌ (ಮೃದಂಗ) ಸಹಕರಿಸಿದ್ದರು.

ಡಾ| ಸಹನಾ ಎಸ್‌.ವಿ. ವೀಣಾ ವಾದನ ಕಚೇರಿಯಲ್ಲಿ ಶುೃತಿ-ತಾಳ-ಲಯಬದ್ಧರಾಗಿ ಹದವರಿತ ಕೈ ಛಾಪುವಿನಲ್ಲಿ ಶ್ರೋತೃಗಳ ಹೃದಯ ವೀಣೆ ಮೀಟಿದರು. ಸಹಕಲಾವಿದರಾಗಿ ವಿ| ಬಿ. ಎಸ್‌. ಪ್ರಶಾಂತ್‌ ಮೃದಂಗದಲ್ಲಿ ಹಾಗೂ ವಿ| ಟಿ.ಎನ್‌. ರಮೇಶ್‌ ಘಟಂನಲ್ಲಿ ವಿಶೇಷ ಮೆರುಗನ್ನಿತ್ತರು.

ಎ. ಕನ್ಯಾಕುಮಾರಿ ನಮ್ಮಮ್ಮ ಶಾರದೆ… ಗೀತೆಗೆ ಸುಲಲಿತ ತನಿ ಪಿಟೀಲು ವಾದನದೊಂದಿಗೆ ಕಾರ್ಯಕ್ರಮ ಆರಂಭಿಸಿ ಸುದೀರ್ಘ‌ ಎರಡು ಗಂಟೆಗಳ ಕಾಲ ಕಲಾಭಿಮಾನಿಗಳ ಮನಮುಟ್ಟುವಂತೆ ಸಂಗೀತ ಸುಧೆ ಹರಿಸಿದರು. ವಿ| ಬಿ. ವಿಠಲ ರಂಗನ್‌ ಸಹವಾದಕರಾಗಿ, ವಿ| ಜಯಚಂದ್ರ ರಾವ್‌ ಕೆ.ಯು. ಮೃದಂಗದಲ್ಲಿ, ವಿ| ಎನ್‌. ಅಮೃತ್‌ ಖಂಜೀರದಲ್ಲಿ ಹಾಗೂ ವಿ| ಬಿ. ರಾಜಶೇಖರ್‌ ಮೋರ್ಚಿಂಗ್‌ನಲ್ಲಿ ಕಾರ್ಯಕ್ರಮದ ಉತ್ಕೃಷ್ಟತೆಗೆ ಕೊಡುಗೆ ನೀಡಿದ್ದರು.

ವಿ| ಮಧೂರು ಬಾಲಸುಬ್ರಹ್ಮಣ್ಯ ಮತ್ತು ತಂಡ ವೃಂದ ಗಾಯನದಲ್ಲಿ ಮುಂದಿನ ಕಚೇರಿ ನಡೆಸಿಕೊಟ್ಟರು. ವಿ| ಸಿ.ಎಸ್‌. ಉಷಾ ಪಿಟೀಲಿನಲ್ಲಿ ಹಾಗೂ ವಿ| ಬಿ.ಎಸ್‌. ಆನಂದ ಮೃದಂಗದಲ್ಲಿ ಸಹಕರಿಸಿದ್ದರು. ಡಾ| ಗೀತಾ ಭಟ್‌ ಆರ್‌. ವೀಣಾವಾದನ ಕಛೇರಿಯನ್ನು ನಡೆಸಿಕೊಟ್ಟರು. ಮೃದಂಗದಲ್ಲಿ ವಿ| ಬಿ. ದ್ರುವರಾಜ್‌ ಹಾಗೂ ಘಟಂನಲ್ಲಿ ವಿ| ಸಚಿನ್‌ ದೇವಿಪ್ರಸಾದ್‌ ಸಾಥ್‌ ನೀಡಿ ಕಛೇರಿಗೆ ವಿಶೇಷ ಮೆರುಗು ನೀಡಿದ್ದರು.

Advertisement

ನೀಲಾ ರಾಂಗೋಪಾಲ್‌ ಮತ್ತು ಶ್ರೀಲತಾ ಗಾಯನದ ನಾದಪಥ ಸ್ವಾದಭರಿತ ಮಾಧುರ್ಯ ಕಲಾ ರಸಿಕರನ್ನು ಭಾವನಾ ಲೋಕಕ್ಕೆ ಕರೆದೊಯ್ದಿತು.ಮಹಾಗಣಪತಿಂ ಭಜೇಹಂ… ಕೃತಿಯೊಂದಿಗೆ ಆರಂಭಿಸಿ ರಾಗ ಕಾಂಬೋಜಿಯನ್ನು ಪ್ರಧಾನ ರಾಗವಾಗಿ ಆಯ್ದುಕೊಂಡು ಕಛೇರಿಯನ್ನು ಮನೋಜ್ಞವಾಗಿ ಮುನ್ನಡೆಸಿದರು. ಪಕ್ಕವಾದ್ಯದಲ್ಲಿ ವಿ| ವಿಠಲ ರಂಗನ್‌ (ಪಿಟೀಲು), ವಿ| ಬಿ.ಸಿ. ಮಂಜುನಾಥ್‌ (ಮೃದಂಗ), ವಿ| ಬಿ.ಎಸ್‌. ರಾಮಾನುಜನ್‌ (ಘಟಂ) ಮತ್ತು ವಿ| ವಿ.ಎಸ್‌. ರಮೇಶ್‌ (ಮೋರ್ಚಿಂಗ್‌) ಉತ್ಕೃಷ್ಟ ಸಾಥ್‌ ನೀಡಿ ಮೇರು ಕಛೇರಿ ಸಾಕ್ಷಾತ್ಕರಿಸಿದ್ದರು.

ಅಂತಿಮ ಕಾರ್ಯಕ್ರಮವಾಗಿ ವಿ|ರಾಮಕೃಷ್ಣನ್‌ ಮೂರ್ತಿ ಗಾಯನದಲ್ಲಿ ಶ್ರೋತೃಗಳನ್ನು ತನ್ಮಯರನ್ನಾಗಿಸಿದ್ದರು. ವಿ| ವಿಠಲ ರಾಮಮೂರ್ತಿ (ಪಿಟೀಲು), ವಿ| ತುಮಕೂರು ಬಿ. ರವಿಶಂಕರ್‌ (ಮೃದಂಗ), ವಿ| ಓಂಕಾರ್‌ ರಾವ್‌ (ಘಟಂ) ಸಹಕಾರದಲ್ಲಿ ಕಾರ್ಯಕ್ರಮ ಮಂತ್ರ ಮುಗ್ಧರನ್ನಾಗಿಸಿತ್ತು.

ಸಾಂತೂರು ಶ್ರೀನಿವಾಸ ತಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next