ರಾಮನಗರ: ಜಿಪಂ ಅಧ್ಯಕ್ಷ ಸ್ಥಾನಕ್ಕೆ ಎಂ.ಎನ್.ನಾಗರಾಜು ನೀಡಿದ್ದ ರಾಜೀನಾಮೆ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಆದೇಶದಂತೆ ಪ್ರಭಾರ ಅಧ್ಯಕ್ಷರಾಗಿ ವೀಣಾ ಕುಮಾರಿ ಮಂಗಳವಾರ ಅಧಿಕಾರ ವಹಿಸಿಕೊಂಡರು.
ಜಿಪಂ ಉಪ ಕಾರ್ಯದರ್ಶಿ ನೀಡಿದ ಕಡತಕ್ಕ ಸಹಿ ಹಾಕುವುದರ ಮೂಲಕ ಪ್ರಭಾರ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಮಾತನಾಡಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅನುಪಸ್ಥಿತಿಯಲ್ಲಿ ಪ್ರಭಾರ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಬೇಕಾಗಿದೆ. ನಿಯಮಾನುಸಾರ ಪ್ರಭಾರ ಅಧ್ಯಕ್ಷೆಯಾಗಿ ಅನಿವಾರ್ಯವಾಗಿ ಅಧಿಕಾರ ಸ್ವೀಕರಿಸಬೇಕಾಗಿದೆ ಎಂದರು.
ಡಿಕೆಶಿ ಮಣಿಸಲು ಅಸಾಧ್ಯ: ಕಾಂಗ್ರೆಸ್ ನಾಯಕ ಹಾಗೂ ತಮ್ಮ ಸಹೋದರಂತಿರುವ ಶಿವಕುಮಾರ್‌ರನ್ನು ರಾಜಕೀಯವಾಗಿ ಮಣಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಡಿಕೆಶಿ ಶಕ್ತಿ ಕುಂದಿಸಲು ಸಾಧ್ಯವಿಲ್ಲ ಎಂದರು.
ಐಟಿ ಮತ್ತು ಇಡಿ ಇಲಾಖೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ದುರ್ಬಳಕೆ ಮಾಡಿಕೊಂಡು ಉದ್ದೇಶ ಪೂರ್ವಕವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಆದರೆ ಡಿಕೆಶಿ ಅವರು, ಎಲ್ಲಾ ವಿಚಾರಣೆಗಳನ್ನು ದಿಟ್ಟತನದಿಂದ ಎದುರಿಸಿ, ನಿರ್ದೋಷಿಯಾಗಿ ಹೊರ ಬರುತ್ತಾರೆ ಎಂದರು. ಪ್ರಭಾರ ಅಧ್ಯಕ್ಷ ಸ್ಥಾನ ಒದಗಿ ಬಂದಿರುವ ಸುಸಂದರ್ಭ ಎಂದು ಬಣ್ಣಿಸಿದ ಅವರು, ಜಿಲ್ಲೆಯಲ್ಲಿ ಮೂಲ ಸೌಕರ್ಯ ಹೆಚ್ಚಿಸುವ ಜೊತಗೆ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು. ಹಾಗೂ ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಮಾಡುವುದಾಗಿಯೂ ತಿಳಿಸಿದರು. ಜಿಪಂ ಸದಸ್ಯರಾದ ನಾಗರತ್ನಮ್ಮ, ನಾಜಿಯಾ ಖಾನಂ, ಎಸ್ .ನಾಗರತ್ನ, ಸುಗುಣ, ಚಂದ್ರಮ್ಮ ಹಾಜರಿದ್ದರು.