Advertisement

K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ

10:24 PM Jul 07, 2024 | Team Udayavani |

ಚೆನ್ನೈ:  ಬಿಎಸ್ ಪಿ ರಾಜ್ಯ ಮುಖ್ಯಸ್ಥ ಕೆ.ಆರ್ಮ್‌ಸ್ಟ್ರಾಂಗ್ ಅವರ ಹತ್ಯೆಯ ತನಿಖೆಯ ಬಗ್ಗೆ ತಮಿಳುನಾಡು ಸರಕಾರವು ಗಂಭೀರವಾಗಿಲ್ಲ. ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದೆ ಎಂದು ಬಹುಜನ ಸಮಾಜ ಪಕ್ಷದ (BSP) ವರಿಷ್ಠೆ ಮಾಯಾವತಿ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ಅವರು ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ಭಾನುವಾರ, ಮಾಯಾವತಿ ಅವರು ತಮ್ಮ ಸೋದರಳಿಯ ಮತ್ತು ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಆಕಾಶ್ ಆನಂದ್ ಅವರೊಂದಿಗೆ ಆರ್ಮ್‌ಸ್ಟ್ರಾಂಗ್ ಅವರಿಗೆ ಅಂತಿಮ ನಮನ ಸಲ್ಲಿಸಲು ಚೆನ್ನೈಗೆ ಆಗಮಿಸಿದ್ದರು. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ತಮಿಳುನಾಡಿನ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿದರು. ಆರ್ಮ್‌ಸ್ಟ್ರಾಂಗ್‌ನನ್ನು ಹತ್ಯೆ ಮಾಡಿರುವ ರೀತಿ ನೋಡಿದರೆ ಕಾನೂನು ಸುವ್ಯವಸ್ಥೆ ಇಲ್ಲ.ಪ್ರಮುಖ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಡಿಎಂಕೆ ನೇತೃತ್ವದ ರಾಜ್ಯ ಸರಕಾರವು ಹತ್ಯೆಯ ತನಿಖೆಯ ಬಗ್ಗೆ ಗಂಭೀರವಾಗಿಲ್ಲ ಎಂದು ಆರೋಪಿಸಿದರು.ರಾಜ್ಯ ಸರ್ಕಾರವು ನ್ಯಾಯ ಸಲ್ಲಿಸಲು ಬಯಸದಿದ್ದರೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.ನಾವು ಸಿಬಿಐ ತನಿಖೆಗೆ ಒತ್ತಾಯಿಸುತ್ತೇವೆ. ಸಿಬಿಐಗೆ ಒಪ್ಪಿಸದಿದ್ದರೆ, ಈ ಕೊಲೆಯಲ್ಲಿ ಅವರೂ ಭಾಗಿಯಾಗಿದ್ದಾರೆ ಎಂದರ್ಥ” ಎಂದರು.

ಆರ್ಮ್‌ಸ್ಟ್ರಾಂಗ್ ಹತ್ಯೆ ಒಬ್ಬ ದಲಿತ ನಾಯಕನ ಹತ್ಯೆಯಲ್ಲ. ಇಡೀ ದಲಿತ ಸಮುದಾಯಕ್ಕೆ ಬೆದರಿಕೆ ಇದೆ ಮತ್ತು ಅನೇಕ ದಲಿತ ಮುಖಂಡರು ತಮ್ಮ ಜೀವ ಭಯದಲ್ಲಿದ್ದಾರೆ” ಎಂದರು.

ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಎಂದು ಮಾಯಾವತಿ ಬಿಎಸ್‌ಪಿ ಕಾರ್ಯಕರ್ತರಿಗೆ ಮನವಿ ಮಾಡಿದರು. ಆರೋಪಿಗಳ ವಿರುದ್ಧ ಕ್ರಮವನ್ನು ಖಚಿತಪಡಿಸಿಕೊಳ್ಳಲು, ಪಕ್ಷದ ಕಾರ್ಯಕರ್ತರು ಮುಂದೆ ಬರಬೇಕು ಆದರೆ ಅದೇ ಸಮಯದಲ್ಲಿ, ಕಾನೂನಿನ ಮಿತಿಯಲ್ಲಿ ಉಳಿಯಬೇಕು ಮತ್ತು ದುರ್ಬಲ ವರ್ಗವು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ತೋರಿಸಬೇಕು” ಎಂದರು.

Advertisement

ಜುಲೈ 5 ರಂದು  52 ವರ್ಷದ ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಪೆರಂಬೂರ್ ಪ್ರದೇಶದಲ್ಲಿ ಅವರ ಮನೆಯ ಹೊರಗೆ ಕೆಲವು ಅಪರಿಚಿತರು ಹತ್ಯೆಗೈದಿದ್ದರು. ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಾಲ್ವರು ದಾಳಿಕೋರರು ಆಹಾರ ವಿತರಣಾ ಏಜೆಂಟ್‌ಗಳ ವಸ್ತ್ರ ಧರಿಸಿದ್ದರು ಎಂದು ಕಂಡು ಬಂದಿದೆ. ಹತ್ಯೆಗೆ ಸಂಬಂಧಿಸಿದಂತೆ ಕನಿಷ್ಠ ಎಂಟು ಶಂಕಿತರನ್ನು ಬಂಧಿಸಲಾಗಿದೆ.

ದೇಹ ಹೂಳುವ ಮನವಿ ವಜಾ

ಪಾರ್ಥಿವ ಶರೀರವನ್ನು ಪಕ್ಷದ ಕಚೇರಿಯಲ್ಲಿ ಹೂಳ ಬೇಕು ಎಂಬ ಮನವಿಯನ್ನು ಮದ್ರಾಸ್‌ ಹೈಕೋರ್ಟ್‌ ತಿರಸ್ಕರಿಸಿದೆ. ಕಚೇರಿ ಸ್ಥಳ ಅತ್ಯಂತ ಜನನಿಬಿಡ, ವಸತಿ ಪ್ರದೇಶ. ಹೀಗಾಗಿ, ಈ ಕೋರಿಕೆಗೆ ಸಮ್ಮತಿಸಲು ಸಾಧ್ಯ ವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಚೆನ್ನೈ ಸಮೀಪದ ತಿರುವಳ್ಳುವರ್‌ ಜಿಲ್ಲೆಯ ಭೂಮಿಯಲ್ಲಿ ಬಿಎಸ್‌ಪಿ ನಾಯಕನನ್ನು ಮಣ್ಣುಮಾಡಬಹುದು ಎಂದಿದೆ. ಪಕ್ಷದ ಕಚೇರಿಯಲ್ಲೇ ಹೂಳಲು ಅವಕಾಶ ನೀಡಬೇಕು ಎಂದು ಆರ್ಮ್ಸ್ಟ್ರಾಂಗ್‌ ಪತ್ನಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next