ಚಿತ್ರದುರ್ಗ: ಈ ರಾಜ್ಯದಲ್ಲಿ ಅಗತ್ಯವಾಗಿ ಸಾರ್ವತ್ರಿಕ ಚುನಾವಣೆ ಆಗಬೇಕು. ಪ್ರಾಮಾಣಿಕ ಸರ್ಕಾರ ಬರಬೇಕು. ಇಲ್ಲಿನ ಮೂರು ರಾಜಕೀಯ ಪಕ್ಷಗಳ ಮೇಲೆ ನಂಬಿಕೆಯಿಲ್ಲ. ಹೊಸದಾದ ಶಕ್ತಿಯೊಂದು ಉದಯಿಸುವ ಅಗತ್ಯ ಹೆಚ್ಚಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಮಾಜಿ ಮುಖ್ಯಮಂತ್ರಿ ದಿ. ನಿಜಲಿಂಗಪ್ಪ ಸ್ಮಾರಕದ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಮನವಿ ಮಾಡುತ್ತೇನೆ, ರಾಜ್ಯದಿಂದ ಯಡಿಯೂರಪ್ಪನ ಕಂಪನಿ ಹೋಗಬೇಕು. ಇಲ್ಲದಿದ್ದರೆ ರಾಜ್ಯದ ಜನತೆಗೆ ಒಳಿತಾಗುವುದಿಲ್ಲ. ಮಠಾಧೀಶರುಗಳು ಯಡಿಯೂರಪ್ಪನಿಗೆ ಬೆಂಬಲ ಕೊಡುವುದನ್ನು ನಿಲ್ಲಿಸಬೇಕು. ಭಾಷೆಯ ಹೆಸರಿನಲ್ಲಿ ಹೊಸದೊಂದು ಶಕ್ತಿ ಉದಯವಾಗಬೇಕು. ರಾಜ್ಯದಲ್ಲಿ ಹೊಸ ಶಕ್ತಿಯ ಆಡಳಿತ ಆರಂಭವಾಗಬೇಕು ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯದಲ್ಲಿ ಯಾವುದೇ ಲಾಕ್ ಡೌನ್, ಕರ್ಪ್ಯೂ ಇಲ್ಲ: ಸರ್ಕಾರದ ಸ್ಪಷ್ಟನೆ
ನಮ್ಮ ರಾಜ್ಯ ಯಾವ ದಿಕ್ಕಿಗೆ ಹೋಗುತ್ತಿದೆ.? ಇವತ್ತಿನ ರಾಜಕಾರಣ ಹೊಲಸಾಗಿದೆ, ಹದಗೆಟ್ಟಿದೆ, ಭ್ರಷ್ಟರ ಕೂಟವಾಗಿದೆ. ಪ್ರಾಮಾಣಿಕತೆ ಮಾಯವಾಗಿದೆ, ಇದು ಯಡಿಯೂರಪ್ಪ ಸರ್ಕಾರ ಲಿಮಿಟೆಡ್ ಕಂಪನಿ. ಯಡಿಯೂರಪ್ಪ ಸರ್ವಾಧಿಕಾರಿ, ಯಾರ ಮಾತನ್ನೂ ಕೇಳುವುದಿಲ್ಲ. ಕರ್ನಾಟಕದಲ್ಲಿ ಪ್ರಾಮಾಣಿಕ ಆಡಳಿತವಿಲ್ಲ, ಎಲ್ಲ ಅಧಿಕಾರಿಗಳೂ ಬಿಎಸ್ ವೈ ಗುಲಾಮರಾಗಿದ್ದಾರೆ ಸರ್ಕಾರವನ್ನು ಪ್ರಶ್ನೆ ಮಾಡಿದವರಿಗೆ ಉಳಿಗಾಲವಿಲ್ಲ. ಕಾನೂನು ಸಚಿವ ಮಾಧುಸ್ವಾಮಿ ಖಾತೆ ಕಿತ್ತುಕೊಂಡು ಮೂರನೇ ಸ್ಥಾನದ ಖಾತೆ ನೀಡಿ, ಕಡೆಗಣಿಸಿದ್ದಾರೆ ಎಂದು ಟೀಕಿಸಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಮಾತನಾಡಿದ ಅವರು, ನಾನು ಜಾರಕಿಹೊಳಿ ಬಂಧಿಸುವ ಬಗ್ಗೆ ಮಾತನಾಡುವುದಿಲ್ಲ. ಈ ಪ್ರಕರಣ ದೇಶದ ಮೇಲೆ ಪ್ರಭಾವ ಬೀರಿದೆ. ಉನ್ನತ ಮಟ್ಟದ ಸಮಗ್ರವಾದ ತನಿಖೆ ಆಗಬೇಕು ಎಂದರು.
ಇದನ್ನೂ ಓದಿ: ಕೋವಿಡ್ ಹೆಚ್ಚಳ: ಪುಣೆಯಲ್ಲಿ ಹೋಟೆಲ್, ಬಾರ್, ಸಿನಿಮಾ ಮಂದಿರ ಒಂದು ವಾರ ಬಂದ್
ಗ್ರಾಮೀಣಾಭಿವೃದ್ಧಿ ಖಾತೆ ಮೇಲೆ ಸಿಎಂ ಹಸ್ತಕ್ಷೇಪ ವಿಚಾರದ ಬಗ್ಗೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ವಾಧಿಕಾರಿ, ಈಶ್ವರಪ್ಪನ ವಾದ ಸರಿಯಾಗಿದೆ. ಸಿಎಂ ಹಸ್ತಕ್ಷೇಪ ಸರಿಯಿಲ್ಲ, ಶಾಸಕರು ಅವರನ್ನು ಬೆಂಬಲಿಸುವುದು ಸರಿಯಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು.