ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಫೆ.4ರಂದು ಬೆಂಗಳೂರು ಬಂದ್‌ಗೆ ಕರೆಕೊಟ್ಟಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್‌ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘದ ಅಧ್ಯಕ್ಷ ಸಿ.ರಾಜಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದಿಸಿ, ಮಹದಾಯಿ ನದಿ ನೀರು ಹಂಚಿಕೆ ಇತ್ಯರ್ಥಕ್ಕೆ ಆಗ್ರಹಿಸಿ ಈಗಾಗಲೇ ಜ.25ರಂದು ರಾಜ್ಯ ಬಂದ್ ನಡೆಸಲಾಗಿದೆ. ಅದೇ ವಿಚಾರಕ್ಕೆ ಸಂಬಂಧಿಸಿ ಇದೀಗ ಫೆ.4ರಂದು ಬೆಂಗಳೂರು ಬಂದ್ ನಡೆಸುವುದಾಗಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.
ಕೇವಲ ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಬಂದ್ ಕರೆ ನೀಡಿದರೆ, ವಿದ್ಯಾರ್ಥಿಗಳಿಗೆ, ದಿನಗೂಲಿ ಕಾರ್ಮಿಕರಿಗೆ ಮತ್ತು ರಾಜ್ಯದ ಜನತೆಗೆ ಸಾಕಷ್ಟು ತೊಂದರೆಯಾಗಲಿದೆ. ಮೇಲಾಗಿ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟಾಗಲಿದೆ. ಬಂದ್ ನಡೆಸುವುದು ಅಸಂವಿಧಾನಿಕ, ಅಕ್ರಮ ಹಾಗೂ ನಿರಂಕುಶತೆ ಮತ್ತು ಸಾಮಾನ್ಯ ಪ್ರಜೆಗಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿ, ಬಂದ್ ನಡೆಸವುದನ್ನೇ ನಿರ್ಬಂಧಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬಂದ್ ನಡೆಸುವುದು ಅಸಾಂವಿಧಾನಿಕ ಎಂದು ಘೋಷಿಸಲು ಸಂವಿಧಾನ ಬದ್ಧವಾಗಿ ಅವಕಾಶವಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ವಕೀಲರನ್ನು ಕೋರಿತು. ಅಲ್ಲದೆ, ಬಂದ್ ಕುರಿತು ರಾಜ್ಯಸರ್ಕಾರದ ನಿಲುವೇನು ಎಂದು ಪ್ರಶ್ನಿಸಿತು. ಸರ್ಕಾರದ ಪರ ವಕೀಲರು, ಬಂದ್ ನಡೆಸಲು ನಮ್ಮದೇನು ಅನುಮತಿಯಿಲ್ಲ.
ಆದರೆ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಬಂದ್‌ಗೆ ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿ ಎಂದು ತಾಕೀತು ಮಾಡಿ ಪ್ರತಿವಾದಿ ವಾಟಾಳ್ ನಾಗರಾಜ್‌ಗೆ ತುರ್ತು ನೋಟಿಸ್ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ಫೆ.2ಕ್ಕೆ ವಿಚಾರಣೆ ಮುಂದೂಡಿತು.