ಬೆಂಗಳೂರು: ವಿಭಿನ್ನ ಹೋರಾಟಗಳಿಗೆ ಸಾಕ್ಷಿಯಾಗಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಮಂಗಳವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಅಪಾರ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಸಿದರೆ, ವಾಟಾಳ್ ವಿಭಿನ್ನವಾದ ರೀತಿಯಲ್ಲಿ ಆಗಮಿಸಿ ನೆರೆದವರ ಗಮನ ಸೆಳೆದರು.
ಮಧ್ಯಾಹ್ನದ ಸುಡು ಬಿಸಿಲಿನ ವೇಳೆ ತಮ್ಮ ಬೆಂಬಲಿಗರೊಂದಿಗೆ ಕುದುರೆ ಗಾಡಿಯನ್ನು ಏರಿ ಬಂದ ವಾಟಾಳ್ ನಾಗರಾಜ್, ಜಯನಗರದ 2ನೇ ಹಂತದಲ್ಲಿರುವ ಬಿಬಿಎಂಪಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮ ಪತ್ರಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಗೆದ್ದು ಬಂದರೆ ಲೋಕಸಭೆಯಲ್ಲಿ ಕನ್ನಡವನ್ನು ಮೊಳಗಿಸುವುದಾಗಿ ಹೇಳಿದರು. ಬೆಂಗಳೂರಿನಲ್ಲಿ ಪ್ರತಿ 5 ಕಿಲೋ ಮೀಟರ್‌ಗೆ ಒಂದರಂತೆ ಸುಸಜ್ಜಿತ ಶೌಚಾಲಯ ಮತ್ತು ವಿಶ್ರಾಂತಿ ಗೃಹ ನಿರ್ಮಾಣ, ಸರ್ಕಾರಿ ಶಾಲೆಗಳ ಸಮಗ್ರ ನವೀಕರಣ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಂಪೂರ್ಣ ಕನ್ನಡ
ಹಾಗೂ ಬೆಂಗಳೂರಿನ ಸಂಚಾರಿ ವ್ಯವಸ್ಥೆಯನ್ನು ಸಮಗ್ರವಾಗಿ ಸರಿಪಡಿಸುವುದಾಗಿ ತಿಳಿಸಿದರು. ಬೆಂಗಳೂರಿನ ಸುತ್ತ ಪ್ರತಿ 20 ಕಿಲೋಮಿಟರ್‌ಗೆ ಒಂದು ಸಬ್‌ಅರ್ಬನ್ ರೈಲು ವ್ಯವಸ್ಥೆ, ಜತೆಗೆ ನಗರದಲ್ಲಿರುವ ಎಲ್ಲಾ ಸ್ಮಶಾನಗಳ ಆಧುನೀಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಆಸ್ತಿ ವಿವರ: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ವಾಟಾಳ್ ನಾಗರಾಜ್ ಅವರ ಬಳಿ 60 ಸಾವಿರ ಹಾಗೂ ಅವರ ಪತ್ನಿ ಬಳಿ 30 ಸಾವಿರ ನಗದು ಮತ್ತು ಇಬ್ಬರ ಹೆಸರಿನಲ್ಲಿ ಒಟ್ಟು 12.60 ಲಕ್ಷ ಚರಾಸ್ತಿ ಇದೆ.
ವಾಟಾಳ್ ನಾಗರಾಜ್ ಹೆಸರಿನಲ್ಲಿ 5 ಲಕ್ಷ ಮೌಲ್ಯ ಕೃಷಿ ಭೂಮಿ ಮತ್ತು 2.10 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹಾಗೂ ಪತ್ನಿ ಹೆಸರಿನಲ್ಲಿ 78 ಲಕ್ಷ ಮೌಲ್ಯದ ಕೃಷಿ ಭೂಮಿ ಇದೆ. ಯಾವುದೇ ಸಾಲ ಇಲ್ಲ. ಪತ್ನಿ ಹೆಸರಿನಲ್ಲಿ 13 ಲಕ್ಷ ರೂ. ಸಾಲ ಪಡೆದಿದ್ದಾರೆ.