ಸಿಂಧನೂರು: ಸಾಮಾಜಿಕ, ಧಾರ್ಮಿಕ ಸೇವೆ ಮಾಡುತ್ತಿರುವ ಯಲಮಂಚಿಲಿ ವಾಸುದೇವರಾವು ಅವರ ಸೇವೆ ಅನನ್ಯವಾಗಿದೆ ಎಂದು ಆಂಧ್ರಪ್ರದೇಶ ಸಂಸದ, ತೆಲುಗು ಖ್ಯಾತ ಚಿತ್ರನಟ ಮುರುಳಿ ಮೋಹನ ಶ್ಲಾಘಿಸಿದರು.
ನಗರದ ಗಂಗಾವತಿ ರಸ್ತೆಯ ಹೊಸಳ್ಳಿ ಕ್ರಾಸ್ ಹತ್ತಿರ ನಿರ್ಮಿಸಿದ ಯಲಿಮಂಚಿಲಿ ವಾಸುದೇವರಾವು ಕಲ್ಯಾಣ ಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಷ್ಟು ಹಣ ಸಂಪಾದನೆ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ. ಸಂಪಾದಿಸಿದ ಹಣ ಸದ್ವಿನಿಯೋಗವಾಗಬೇಕು. ಯಲಮಂಚಿಲಿ ವಾಸುದೇವರಾವು ಅವರು ಎಲ್ಲ ವರ್ಗಗಳ ಅನೇಕ ವಿದ್ಯಾರ್ಥಿಗಳ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಧನ ಸಹಾಯ ಮಾಡುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ.
ಸಾಮಾಜಿಕ, ಧಾರ್ಮಿಕ ಸೇವೆಗಾಗಿ ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ದೇಶದಲ್ಲಿ ಶ್ರೀಮಂತರು ಬಹಳಷ್ಟು ಇದ್ದಾರೆ. ಎಲ್ಲರಲ್ಲೂ ಸೇವಾ ಮನೋಭಾವ ಬರುವುದಿಲ್ಲ. ವಾಸುದೇವರಾವು ಸಮಾಜಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು. ಚಿತ್ರನಟ ಶ್ರೀಕಾಂತ ಮಾತನಾಡಿ, ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಷ್ ಸಾವಿನ ನೋವು ಮೆಲುಕು ಹಾಕಿ ಭಾವುಕರಾದರು. ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಕಲ್ಯಾಣ ಮಂಟಪ ಉದ್ಘಾಟಿಸಿದರು.
ಕೇಂದ್ರದ ಮಾಜಿ ಸಚಿವ ಯಲಿಮಂಚಿಲಿ ಸತ್ಯನಾರಾಯಣ ಚೌದ್ರಿ, ಶಾಸಕ ಅಮರೇಗೌಡ ಬಯ್ನಾಪುರ, ಮಾಜಿ ಸಂಸದ
ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು.
ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ಕನಕಗಿರಿ ಶಾಸಕ ಬಸವರಾಜ ದಡೇಸ್ಗೂರು, ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ದಾನಿ ಯಲಿಮಂಚಿಲಿ ವಾಸುದೇವರಾವು ದಂಪತಿ, ಆಂಧ್ರಪ್ರದೇಶದ ಮಾಜಿ ಸಚಿವ ಪಿ.ಮಾಣಿಕ್ಯಾಲರಾವ್, ರಾಜ್ಯ ಕಮ್ಮವಾರಿ ಸಂಘದ ಅಧ್ಯಕ್ಷ ಆರ್.ವಿ.ಹರೀಶ, ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಹಿರೇಗೌಡರ, ಮುಖಂಡ ಬಲುಸು ಸುಬ್ರಮಣ್ಯ ಹಾಗೂ ಇತರರು ಇದ್ದರು. ತಾಲೂಕು ಕಮ್ಮವಾರಿ ಸಂಘದ ಕಾರ್ಯದರ್ಶಿ ಬಿ. ಶ್ರೀಹರ್ಷ ಪ್ರಾಸ್ತಾವಿಕ ಮಾತನಾಡಿದರು. ಚಿತ್ರನಟಿ ಅಪರ್ಣ ನಿರೂಪಿಸಿದರು.