ತಿರುಪತಿ: ಪವಿತ್ರ ಕ್ಷೇತ್ರ ತಿರುಪತಿ ವೆಂಕಟೇಶ್ವರ ದೇಗುಲದ ಆಡಳಿತ ಮಂಡಳಿ, ತಿರುಪತಿ ತಿರುಮಲ ದೇವಸ್ಥಾನಮ್ಸ್ (ಟಿಟಿಡಿ)ಗೆ ಸೇಲಂ ಜಿಲ್ಲಾ ಗ್ರಾಹಕ ನ್ಯಾಯಾಲಯ ಭಕ್ತರೊಬ್ಬರಿಗೆ ಒಂದು ವರ್ಷದ ಒಳಗಾಗಿ 50 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ.
ಇಲ್ಲವೇ, ಅವರಿಗೆ ಸೇವೆ ಮಾಡಿಸಲು ಅವಕಾಶ ಮಾಡಿಕೊಡಬೇಕು ಎಂದು ಆದೇಶ ನೀಡಿದೆ.
ಜತೆಗೆ 2006ರಲ್ಲಿ ನೀಡಿದ್ದ 12,250 ರೂ. ಮೊತ್ತಕ್ಕೆ ಪ್ರತಿ ವರ್ಷಕ್ಕೆ ಶೇ.24ರ ಬಡ್ಡಿಯನ್ನೂ ಸೇರಿಸಿ ನೀಡಬೇಕು ಎಂದು ಆದೇಶಿಸಿದೆ.
ಇದೇ ಮೊದಲ ಬಾರಿಗೆ ಇಂಥ ಬೆಳವಣಿಗೆ ನಡೆದಿದೆ. 2006ರಲ್ಲಿ ತಮಿಳುನಾಡಿನ ಸೇಲಂನ ಕೆ.ಆರ್.ಹರಿಭಾಸ್ಕರ್ ಎಂಬುವರು “ವಸ್ತ್ರಾಲಂಕಾರ ಸೇವೆ’ ಮಾಡಿಸುವ ನಿಟ್ಟಿನಲ್ಲಿ 12,250 ರೂ. ಪಾವತಿ ಮಾಡಿ ಕಾಯ್ದಿರಿಸಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಸೇವೆಗೆ ಅವಕಾಶ ನೀಡಲಿಲ್ಲ.
ಒಂದು ವರ್ಷದ ಬಳಿಕ ಸೇವೆಗೆ ಅವಕಾಶ ನೀಡಲು ಕೋರಿದ್ದರೂ ಟಿಟಿಡಿ ಒಪ್ಪಿರಲಿಲ್ಲ. ಹೀಗಾಗಿ, ಅವರು ಸೇಲಂ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.