ಪಣಜಿ: ಗೋವಾದ ವಾಸ್ಕೊದ ಸೊಲ್ಲಾಪುರ ರೈಲ್ವೆ ಓಡಾಟವನ್ನು ಶೀಘ್ರವಾಗಿ ಆರಂಭಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋವಾ ರಾಜ್ಯಾಧ್ಯಕ್ಷ ಮಂಜು ನಾಟೀಕರ್ ಮಾಹಿತಿ ನೀಡಿದ್ದಾರೆ.
ವಾಸ್ಕೊ ಕ್ಷೇತ್ರದ ದಾಜಿ ಸಾಲಕರ್ ಅವರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯ ಘಟಕದ ನಿಯೋಗ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಪಣಜಿಯ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ವಾಸ್ಕೊದಿಂದ ಸೊಲ್ಲಾಪುರ ರೈಲ್ವೆ ಸಂಚಾರ ಆರಂಭಿಸಬೇಕೆಂದು ಮನವಿ ಮಾಡಲಾಯಿತು.
ಗೋವಾದಲ್ಲಿ ನೆಲೆಸಿರುವ ಕನ್ನಡಿಗರಿಗೆ ವಾಸ್ಕೊ-ಸೊಲ್ಲಾಪುರ ರೈಲು ಸಂಚಾರ ಆರಂಭಿಸಿದರೆ ಹೆಚ್ಚಿನ ಅನುಕೂಲವಾಗಿದೆ. ಕರ್ನಾಟಕದ ಹಲವು ಭಾಗಗಳಿಗೆ ಗೋವಾದಿಂದ ತೆರಳಲು ಸಾರಿಗೆ ಸಮಸ್ಯೆಯುಂಟಾಗುತ್ತಿದೆ. ಗೋವಾದಲ್ಲಿ ಕೂಲಿ ಕಾರ್ಮಿಕರಿಂದ ಹಿಡಿದು ಸರ್ಕಾರದ ಉನ್ನತ ಹುದ್ಧೆಯಲ್ಲಿಯೂ ಕನ್ನಡಿಗರು ಕೆಲಸ ನಿರ್ವಹಿಸುತ್ತಿದ್ದಾರೆ. ಗೋವಾದಲ್ಲಿ 3 ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಪ್ರಮುಖವಾಗಿ ಓ ಭಾಗದ ಓಡಾಟಕ್ಕೆ ವಾಸ್ಕೊ-ಸೊಲ್ಲಾಪುರ ರೈಲು ಸಂಚಾರ ಆರಂಭಗೊಂಡರೆ ಹೆಚ್ಚು ಅನುಕೂಲವಾಗಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಬಳಿ ಮನವಿ ಮಾಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜು ನಾಟೀಕರ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಾಸ್ಕೊ ಕ್ಷೇತ್ರದ ಶಾಸಕ ದಾಜಿ ಸಾಲಕರ್, ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.