Advertisement

ವಸತಿ ಭಾಗ್ಯಕ್ಕೆ ಇನ್ನು ಒಂದೇ ಯೋಜನೆ : ಪಿಎಂವೈ ಯೋಜನೆಯಡಿ ಮನೆ ನಿರ್ಮಾಣ ಗುರಿ ನಿಗದಿ

12:28 AM Feb 26, 2021 | Team Udayavani |

ಮಂಗಳೂರು: ಕೊರೊನಾ ಸಹಿತ ನಾನಾ ಕಾರಣಗಳಿಂದ ವಿವಿಧ ವಸತಿ ಯೋಜನೆಗಳನ್ನು ಕೈಬಿಟ್ಟು ಈಗ “ಪ್ರಧಾನಮಂತ್ರಿ ಆವಾಸ್‌’ ಯೋಜನೆಯ ಮೂಲಕ ಮಾತ್ರ ರಾಜ್ಯದಲ್ಲಿ ಬಡವರಿಗೆ ವಸತಿ ಭಾಗ್ಯ ಕಲ್ಪಿಸಲಾಗುತ್ತಿದೆ. ಹೀಗಾಗಿ ವಸತಿ ಯೋಜನೆಗಳಿಗೆ ಬೇಡಿಕೆಯೂ ಹೆಚ್ಚಾಗಿದೆ.

Advertisement

ಈ ಹಿಂದೆ ಇದ್ದ ಬಸವ, ಅಂಬೇಡ್ಕರ್‌, ಆಶ್ರಯ ಸೇರಿದಂತೆ ಎಲ್ಲ ವಸತಿ ಯೋಜನೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮಾತ್ರ ಗುರಿ ನಿಗದಿಪಡಿಸಲಾಗಿದೆ. ಆರಂಭದಲ್ಲಿ ಗ್ರಾ.ಪಂ.ಗಳಿಗೆ ತಲಾ 20 ಮನೆಗಳ ಗುರಿ ನೀಡಲಾಗಿತ್ತು. ಬೇಡಿಕೆ ಹೆಚ್ಚಾದ್ದರಿಂದ 35ಕ್ಕೆ ಹೆಚ್ಚಿಸಲಾಗಿದೆ.

ಬಸವ ವಸತಿ, ಆಶ್ರಯ ಯೋಜನೆ, ಅಂಬೇಡ್ಕರ್‌
ವಸತಿ ಯೋಜನೆಯಡಿ ಏಳೆಂಟು ವರ್ಷಗಳಿಂದ ಮಂಜೂರಾಗಿ ಇನ್ನೂ ಪೂರ್ಣಗೊಳ್ಳದ ಮನೆಗಳಿವೆ. ಅವುಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುತ್ತಿದೆ. ಹಾಗಾಗಿ ಈ ಬಾರಿ ಇತರ ಎಲ್ಲ ವಸತಿ ಯೋಜನೆಯಡಿ ಹೊಸದಾಗಿ ವಸತಿ ಮಂಜೂರು ಮಾಡುತ್ತಿಲ್ಲ. ಈ ಹಿಂದಿನ ಬಾಕಿ ಪೂರ್ಣಗೊಂಡ ಬಳಿಕ ಇತರ ವಸತಿ ಯೋಜನೆಗಳಡಿಯೂ ಗುರಿ ನಿಗದಿಪಡಿಸಲಾಗುವುದು ಎಂದು ವಸತಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಿವೇಶನವೂ ಅಲಭ್ಯ
ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಬಹುತೇಕ ನನೆಗುದಿಗೆ ಬಿದ್ದಿದೆ. ಹಲವೆಡೆ ಸರಕಾರಿ ಜಾಗ ಸಿಗುತ್ತಿಲ್ಲ. ಇರುವ ಜಾಗಗಳು ನಿವೇಶನಕ್ಕೆ ಯೋಗ್ಯವಾಗಿಲ್ಲ. ಇನ್ನು ಕೆಲವೆಡೆ ಖಾಸಗಿಯವರ ಆಕ್ಷೇಪ, ನ್ಯಾಯಾಲಯ ತಕರಾರುಗಳಿದ್ದು, ಬಗೆಹರಿಸಲು ಆಡಳಿತ ವರ್ಗ ಆಸಕ್ತಿ ತೋರಿಸಿಲ್ಲ. ಕೆಲವು ಗ್ರಾ.ಪಂ.ಗಳಲ್ಲಿ ಜಾಗ ಲಭ್ಯವಿದ್ದರೂ ವಸತಿ ನಿವೇಶನಕ್ಕೆ ಯೋಗ್ಯವಾಗಿಲ್ಲ. ಏರು ತಗ್ಗು, ಹೊಂಡ, ಕಲ್ಲು ಇತ್ಯಾದಿಗಳಿಂದ ಕೂಡಿದ ನಿವೇಶನಗಳನ್ನು ಸಮತಟ್ಟುಗೊಳಿಸಿ ವಸತಿಯೋಗ್ಯವಾಗಿಸುವುದು ದೊಡ್ಡ ಸವಾಲಾಗಿದೆ. ರಾಜೀವ್‌ ಗಾಂಧಿ ವಸತಿ ನಿಗಮವು ಒಂದು ನಿವೇಶನ (1,200 ಚ. ಅಡಿ ವಿಸ್ತೀರ್ಣ) ಸಮತಟ್ಟುಗೊಳಿಸಲು 3,000 ರೂ. ನೀಡುತ್ತದೆ. ಇದು ಸಾಲದು ಎಂಬುದು ಗ್ರಾ.ಪಂ.ಗಳ ದೂರು.

2019ರ ಡಿಸೆಂಬರ್‌ನಿಂದ 4,044 ಮನೆಗಳಿಗೆ ವಿವಿಧ ಹಂತಗಳಲ್ಲಿ ಹಣ ಬಿಡುಗಡೆ ಬಾಕಿ ಇತ್ತು. ಅದನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿದೆ. ವಿಸಿಲ್‌ ಆ್ಯಪ್‌ನಲ್ಲಿ ತೊಂದರೆಯಾಗಿ ಸುಮಾರು 200ರಷ್ಟು ಮನೆಗಳಿಗೆ ಹಣ ಬಿಡುಗಡೆ ಬಾಕಿಯಾಗಿದೆ. ಹೊಸದಾಗಿ ಮತ್ತೆ ಮನೆಗಳು ಮಂಜೂರಾಗಿದ್ದು, ಹಣ ಬಿಡುಗಡೆಯಾಗುತ್ತಿದೆ ಎನ್ನುತ್ತಾರೆ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ.

Advertisement

ಪಿಎಂ ಆವಾಸ್‌ ಯೋಜನೆಯಡಿ ಪ್ರತೀ ಗ್ರಾ.ಪಂ.ಕ್ಕೆ ತಲಾ 20 ಮನೆಗಳ ಗುರಿ ನೀಡಲಾಗಿದೆ. ವಸತಿ ರಹಿತರ ಪಟ್ಟಿಯನ್ನು ಗ್ರಾ.ಪಂ.ಗಳಿಂದ ಪಡೆದು ಪರಿಶೀಲನೆಗೆ ತಹಶೀಲ್ದಾರ್‌ಗಳಿಗೆ ನೀಡಲಾಗಿದೆ.

-ನವೀನ್‌ ಭಟ್‌, ಜಿ.ಪಂ. ಸಿಇಒ, ಉಡುಪಿ

ಬೇರೆ ವಸತಿ ಯೋಜನೆಗಳಲ್ಲಿ ಬಾಕಿ ಇರುವ ಮನೆಗಳನ್ನು ಕೂಡ ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ಸೇರಿಸಲಾಗಿದ್ದು, ಅರ್ಹ ಫಲಾನುಭವಿಗಳ ಆಯ್ಕೆ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ.
– ಕುಮಾರ್‌, ಜಿ.ಪಂ. ಸಿಇಒ, ದ.ಕ.

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next