Advertisement
ಖ್ಯಾತ ಭರತನಾಟ್ಯ ಕಲಾವಿದೆ ಸುಭಾಷಿಣಿ ವಸಂತ್ 2007ರಲ್ಲಿ ಹುತಾತ್ಮರಾದ ತಮ್ಮ ಪತಿ ದಿ. ಕರ್ನಲ್ ವಸಂತ್ ಅವರ ಸ್ಮರಣಾರ್ಥವಾಗಿ 2008ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ಸಂಸ್ಥೆ ರೂಪಿಸಿದ ಕಾರ್ಯಕ್ರಮಗಳು ಹೀಗಿವೆ. ದೇಶದ ಪುಟ್ಟ ಹಳ್ಳಿಗಳಿಂದ ದೇಶದ ಗಡಿ ಕಾಯಲು ಹೋದ ಬಹುತೇಕ ಯೋಧರು, ಯೋಧರ ಪತ್ನಿಯರು ಆರ್ಥಿಕವಾಗಿ ಸದೃಢರಿರುವುದಿಲ್ಲ. ಸುಶಿಕ್ಷಿತರೂ ಆಗಿರುವುದಿಲ್ಲ. ಇಂಥ ಎಷ್ಟೋ ಮಹಿಳೆಯರಿಗೆ ಸರ್ಕಾರ ತಮಗೆ ನೀಡುವ ಸೌಲಭ್ಯಗಳನ್ನು ಪಡೆಯುವ ಕ್ರಮವೂ ತಿಳಿದಿರುವುದಿಲ್ಲ. ಅಂಥ ಮಹಿಳೆಯರಿಗೆ ಸರ್ಕಾರದ ಸೌಲಭ್ಯ ತಲುಪುವಂತೆಸಂಸ್ಥೆ ಸಹಾಯ ಮಾಡುತ್ತದೆ. ಅಲ್ಲದೇ ಶಿಬಿರಗಳನ್ನು ಏರ್ಪಡಿಸಿ ಮಹಿಳೆಯರಿಗೆ ಕಂಪ್ಯೂಟರ್ ಕಲಿಕೆ, ಇಂಗ್ಲಿಷ್ ಕಲಿಕೆ, ಕೌಶಲ ತರಬೇತಿಗಳನ್ನು ನೀಡುವ ಮೂಲಕ ಅವರು ಸ್ವಾವಲಂಬಿಯಾಗುವಂತೆ ತರಬೇತಿ ನೀಡುತ್ತದೆ. ಸಂಸ್ಥೆ ಹುತಾತ್ಮ ಯೋಧರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಸಲುವಾಗಿ 30,000 ರೂ. ಹಣವನ್ನು ಅಗತ್ಯವಿರುವ ಪ್ರತಿ ಮಕ್ಕಳ ಹೆಸರಿನಲ್ಲಿ ಎಫ್ಡಿ ಇಡುತ್ತದೆ. ಮಕ್ಕಳು 18 ವರ್ಷದವರಾದಾಗ ಅದನ್ನು ಅವರು ಸಂಪೂರ್ಣವಾಗಿ ತಮ್ಮ ಶಿಕ್ಷಣಕ್ಕೆ ಬಳಸಿಕೊಳ್ಳಬಹುದು. ಜವಾನರ ಹೆಸರನ್ನು ಅಮರವಾಗಿಸುವ ಸಲುವಾಗಿ ಅವರು ಕಲಿತ ಶಾಲೆಗಳಲ್ಲಿ ಅವರ ಹೆಸರಿನಲ್ಲಿ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡುತ್ತದೆ. ಪತಿಯನ್ನು ಕಳೆದುಕೊಂಡು ಪತ್ನಿ ಮಾನಸಿಕವಾಗಿ ಕುಗ್ಗುವುದು ಸಾಮಾನ್ಯ. ಅದರೆ ಇಂಥ ಸಂದರ್ಭವನ್ನು ಮೆಟ್ಟಿನಿಂತು ಸಮಾಜವನ್ನು ಎದುರಿಸುವ ಮತ್ತು ತಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳಲು ಮಹಿಳೆಯರಿಗೆ ಮನಃಶಾಸ್ತ್ರಜ್ಞರಿಂದ ಆಪ್ತ ಸಲಹೆಯನ್ನೂ ಸಂಸ್ಥೆ ಒದಗಿಸುತ್ತದೆ.