ಬೆಳ್ತಂಗಡಿ: ಉರುವಾಲು ಗ್ರಾಮದ ಹಲೇಜಿ ನಿವಾಸಿ ಶಾಂತಪ್ಪ ಮತ್ತು ಕಮಲಾ ದಂಪತಿಯ ಪುತ್ರ ಗೇರುಕಟ್ಟೆ ಪ್ರೌಢಶಾಲಾ ವಿದ್ಯಾರ್ಥಿ ಭವಿತ್ ಕುಮಾರ್ ಕೆ.ಎಸ್. ಎಂಬಾತ ಡೆಂಗ್ಯೂ ಜ್ವರದಿಂದ ಬಹು ಅಂಗಾಂಗ (ಹೃದಯ, ಲಿವರ್, ಕಿಡ್ನಿ) ವೈಫಲ್ಯಕ್ಕೆ ತುತ್ತಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರತಿನಿತ್ಯ ಸರಾಸರಿ ಸುಮಾರು 30 ಸಾವಿರ ರೂ. ಖರ್ಚಾಗುತ್ತಿದೆ. ಈ ವಿಚಾರ ಮಾಜಿ ಶಾಸಕ ವಸಂತ ಬಂಗೇರರ ಗಮನಕ್ಕೆ ಬಂದ ತತ್ ಕ್ಷಣ ಸ್ಪಂದಿಸುವ ಮೂಲಕ ಅವರು ಮಾನವೀಯತೆ ಮೆರೆದಿದ್ದಾರೆ.
ಬಾಲಕ ಭವಿತ್ ಕುಮಾರ್ ಸಮಸ್ಯೆ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ, ವೆನ್ಲಾಕ್ ಜಿಲ್ಲಾಸ್ಪತ್ರೆ ಡಿಎಂಓ, ತಾಲೂಕು ಆರೋಗ್ಯಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಭವಿತ್ ಕುಮಾರ್ ನನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಮುಂದುವರಿಸಲು ಸೂಚಿಸಿದರು. ಮಾಜಿ ಶಾಸಕ ವಸಂತ ಬಂಗೇರ ಅವರು 25 ಸಾವಿರ ರೂ.ವನ್ನು ಬಾಲಕನ ಮಾವ ರಮೇಶ್ ಅವರಿಗೆ ನೀಡಿದರು.
ಸಿಪಿಐ(ಎಂ) ಮುಖಂಡ ಶೇಖರ್ ಎಲ್., ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಕೆ. ವಸಂತ್ ಬೆಳ್ತಂಗಡಿ, ಡಿಎಸ್‌ಎಸ್ (ಅಂಬೇಡ್ಕರ್ ವಾದ) ಮೈಸೂರು ವಿಭಾಗ ಸಂಘಟನ ಸಂಚಾಲಕ ಚಂದು ಎಲ್., ನಗರ ಪಂಚಾಯತ್ ನಾಮ ನಿರ್ದೇಶಿತ ಸದಸ್ಯ ಜನಾರ್ದನ ಬಂಗೇರ ಮೂಡಾಯಿಗುತ್ತು, ಸ್ಥಳೀಯ ಸಮಾಜ ಸೇವಕ ಸ್ರುಶ್ರುತ್ ಭಟ್ ವಸಂತ ಬಂಗೇರ ಅವರಿಗೆ ಮಾಹಿತಿ ನೀಡಿ ಬಾಲಕನಿಗೆ ಸೂಕ್ತ ರೀತಿ ಸಹಕಾರ ಕೊಡಿಸಲು ನೆರವಾದರು.
ಶಾಸಕ ಹರೀಶ್ ಪೂಂಜ ಸ್ಪಂದನೆ
ಬೆಳ್ತಂಗಡಿ: ಬಡ ವಿದ್ಯಾರ್ಥಿ ಭವಿತ್ ಕುಮಾರ್ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ವಿಚಾರದ ಬಗ್ಗೆ ಮಾಹಿತಿ ಪಡೆದು ಶಾಸಕ ಹರೀಶ್ ಪೂಂಜ ಸ್ಪಂದಿಸಿದರು. ಉರುವಾಲಿನ ಸಾಮಾಜಿಕ ಕಾರ್ಯಕರ್ತ ಸುಶ್ರುತ್ ಭಟ್ ಅವರು ಬಾಲಕನ ಸ್ಥಿತಿಗತಿಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ಈ ಸಂದರ್ಭ ಶಾಸಕ ಪೂಂಜ ಅವರು ಸುಶ್ರುತ್ ಭಟ್ ಮೂಲಕ ಭವಿತ್ ಕುಮಾರ್ ಚಿಕಿತ್ಸೆಗಾಗಿ ರೂ 10 ಸಾವಿರ ರೂ. ವೈಯಕ್ತಿಕ ಸಹಾಯಧನ ನೀಡಿದರು.