Advertisement

ವಸಾಯಿ ಶ್ರೀ ಮಣಿಕಂಠ ಸೇವಾ ಸಮಿತಿ: ಮಹಾಪೂಜೆ

04:56 PM Dec 06, 2018 | |

ಮುಂಬಯಿ: ವಸಾಯಿ ಪರಿಸರದ ಧಾರ್ಮಿಕ ಚಿಂತಕರಿಂದ ಸ್ಥಾಪಿಸಲ್ಪಟ್ಟ ಶ್ರೀ ಮಣಿಕಂಠ ಸೇವಾ ಸಮಿತಿಯ 17 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ಡಿ. 2ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಸಾಯಿ ಪಶ್ಚಿಮದ ಸಾಯಿನಗರದ ಸಾಯಿನಗರ ರಂಗಮಂಚದಲ್ಲಿ ನಡೆಯಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 6.30ರಿಂದ ಮೂಡುಬಿದಿರೆಯ ಶಿವಾನಂದ ಗುರುಸ್ವಾಮಿ ಅವರ ನೇತೃತ್ವದಲ್ಲಿ ಅಯ್ಯಪ್ಪ ವ್ರತ ಧಾರಿಗಳ ಉಪಸ್ಥಿತಿಯಲ್ಲಿ ಪ್ರತಿಷ್ಠಾಪನೆ, ಪಡಿಪೂಜೆ, ಶರಣು ಘೋಷ, ಮಧ್ಯಾಹ್ನ 12.30ರಿಂದ ಅಯ್ಯಪ್ಪ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರಗಿತು.

ಪುಷ್ಪಾಲಂಕೃತಗೊಂಡ ಬೃಹತ್‌ ರಂಗಮಂಟಪದಲ್ಲಿ ನಿರ್ಮಿಸಲಾಗಿರುವ ಅಯ್ಯಪ್ಪ ಸ್ವಾಮಿಯ ಪ್ರತಿ ಬಿಂಬಕ್ಕೆ ವಿವಿಧ ಪೂಜೆಗಳನ್ನು ನೆರವೇರಿಸಿದ ರಮೇಶ್‌ ಗುರುಸ್ವಾಮಿ ಅವರು ಗಣಪತಿ  ಹಾಗೂ ಅಲಂಕೃತ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ಮಂಗಳಾರತಿಗೈದರು. ಬೆಳಗ್ಗೆ 9.30ರಿಂದ ಮಹಾಮಂಗಳಾರತಿಯವರೆಗೆ ಗಾಯಕ ಪನ್ವೇಲ್‌ ಶಿಬರೂರು ಸುರೇಶ್‌ ಶೆಟ್ಟಿ ಮತ್ತು ಬಳಗದವರಿಂದ ನಿರಂತರ ಭಕ್ತಿಗಾಯನ ಕಾರ್ಯಕ್ರಮವು ನೆರೆದ ಭಕ್ತಾದಿಗಳನ್ನು ರಂಜಿಸಿತು.

ಅಯ್ಯಪ್ಪ ಸ್ವಾಮಿಗೆ ಮಹಾಮಂಗಳಾರತಿ ಮುಗಿದ ಬಳಿಕ ಉತ್ತರ ಪೂಜೆಯನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ರಮೇಶ್‌ ಗುರುಸ್ವಾಮಿ ಅವರು, ಕಲಿಯುಗದಲ್ಲಿ ಅಯ್ಯಪ್ಪನನ್ನು ಪೂಜಿಸುವ ಮೂಲಕ ಜೀವನ-ಸಮಸ್ಯೆಗಳು ದೂರವಾಗುತ್ತವೆ. ಪಂಪಾತೀರ ಪುಣ್ಯಭೂಮಿ ವ್ರತಧಾರಿಗಳಿಗೆ ಪರಮಪಾವನವಾಗಿದೆ. ಅಂತಹ ಕ್ಷೇತ್ರವಿಂದು ವಿವಾದಕ್ಕೀಡಾದರೂ ನಮ್ಮ ಭಕ್ತಿ, ಶ್ರದ್ಧೆಯಲ್ಲಿ ಯಾವತ್ತೂ ಬದಲಾವಣೆಯನ್ನು ತರದೆ, ಶುದ್ಧ ಮನಸ್ಸಿನಿಂದ ಹರಿಹರ ಸುತನನ್ನು ಪ್ರಾರ್ಥಿಸುವ ದೃಢ ಸಂಕಲ್ಪ ಎಲ್ಲ ವ್ರತಧಾರಿಗಳಲ್ಲಿ ಇರಬೇಕು. ಭಕ್ತಿಯ ಮೋಕ್ಷದಲ್ಲಿ ಮಾತ್ರ ದೇವರನ್ನು ಕಾಣಲು ಸಾಧ್ಯ. ಕಠಿನ ಶ್ರದ್ಧೆ, ಭಕ್ತಿಯಲ್ಲಿ ತೊಡಗಿರುವ ಗುರುಸ್ವಾಮಿಗಳಿಂದ ಧಾರ್ಮಿಕ ಚಿಂತನೆ ಮುಂದಿನ ಪೀಳಿಗೆಗೂ ಮುಡಿಪಾಗಿರಲಿ ಎಂದು ಹೇಳಿ ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ದಾನಿಗಳು, ಸಮಾಜ ಸೇವಕರು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ, ಅಧ್ಯಕ್ಷ ಯಶೋಧರ ವಿ. ಕೋಟ್ಯಾನ್‌, ಉಪಾಧ್ಯಕ್ಷರಾದ ದಿನೇಶ್‌ ಹೆಗ್ಡೆ ಎಕ್ಕಾರು, ಗೌರವ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಹೇಮಂತ ಪಾರೇಖ್‌, ಜತೆ ಕೋಶಾಧಿಕಾರಿ ಸುಧೀರ್‌ ಸಾಲ್ಯಾನ್‌, ಪೂಜಾ ಸಮಿತಿಯ ಸಲಹೆಗಾರರುಗಳಾದ ಭೋಜ ಸಾಲ್ಯಾನ್‌ ಅವರು ದಿನಪೂರ್ತಿ ನಡೆದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

ಸ್ಥಳೀಯ ಅತಿಥಿ-ಗಣ್ಯರನ್ನು ಪ್ರಸಾದವನ್ನಿತ್ತು ಗೌರವಿಸಲಾಯಿತು. ಮಧ್ಯಾಹ್ನ 1ರಿಂದ ನಡೆದ ಅನ್ನಸಂತರ್ಪಣೆಯು ಅಪರಾಹ್ನ 4ರವರೆಗೆ ಮುಂದುವರಿದಿದ್ದು, ಸಾವಿರಾರು ಭಕ್ತಾದಿಗಳು, ತುಳು- ಕನ್ನಡಿಗರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಗುರುಸ್ವಾಮಿ ಉಮೇಶ್‌ ಕಾಂತಾವರ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next