ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಸಾಯಿ ಸ್ಥಳೀಯ ಕಚೇರಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಇತ್ತೀಚೆಗೆ ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಮಿತಿಯ ಕಚೇರಿಯಲ್ಲಿ ನಡೆಯಿತು.
ಸ್ಥಳೀಯ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಕರುಣಾಕರ ಜಿ. ಅಮೀನ್ ಅವರನ್ನು ಸರ್ವಾನುಮತದಿಂದ ಪುನ:ರಾಯ್ಕೆಗೊಂಡರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ, ಉಪಾಧ್ಯಕ್ಷ ಶಂಕರ ಡಿ. ಪೂಜಾರಿ, ಹರೀಶ್ ಜಿ. ಅಮೀನ್, ದಯಾನಂದ ಆರ್. ಪೂಜಾರಿ, ಶ್ರೀನಿವಾಸ ಕರ್ಕೇರ ಮೊದಲಾದವರು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಪುಷ್ಪ ಗೌರವದೊಂದಿಗೆ ಅಭಿನಂದಿಸಲಾಯಿತು. ಸದಸ್ಯರ ಪ್ರತಿಜ್ಞಾ ವಿಧಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ್ ಶಾಂತಿ ಅವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕಿನ ನಿರ್ದೇಶಕರಾದ ಕೆ. ಬಿ. ಪೂಜಾರಿ, ಗಂಗಾಧರ ಪೂಜಾರಿ ಅವರು ಉಪಸ್ಥಿತರಿದ್ದರು. ವಸಾಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಜಿ. ಅಮೀನ್ ಅವರು ಬಿಲ್ಲವರ ಅಸೋಸಿಯೇಶನ್‌ನ ಪದಾಧಿಕಾರಿಗಳನ್ನು ಗೌರವಿಸಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಲೋಹಿತಾಕ್ಷ ಅಂಚನ್ ಅವರು ಸಮಿತಿಯ ವರದಿ ಮಂಡಿಸಿದರು.
ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ಅವರು ಮಾತನಾಡಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಳೆದ 86 ವರ್ಷಗಳ ಇತಿಹಾಸವನ್ನು ಹೊಂದಿರುವ ಹಿರಿಯ ಸಂಸ್ಥೆಯಾಗಿದೆ. ತನ್ನ 23 ಸ್ಥಳೀಯ ಸಮಿತಿಗಳ ಮೂಲಕ ಸಮಾಜ ಬಾಂಧವರ ಅಶೋತ್ತರಗಳಿಗೆ ಹಾಗೂ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಬಂದಿದೆ. ಸ್ಥಳೀಯ ಸಮಿತಿಯ ಪದಾಧಿಕಾರಿಗಳು ನಿಸ್ವಾರ್ಥ ಸೇವೆಯಿಂದ ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸಬೇಕು ಎಂದು ನುಡಿದರು.
ಸಮಿತಿಯ ಜತೆ ಕಾರ್ಯದರ್ಶಿ ಚಂದ್ರಶೇಖರ್ ಎಸ್. ಸಾಲ್ಯಾನ್ ವಂದಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಕಾರ್ಯಕ್ರಮ ನಿರ್ವಹಿಸಿದರು. ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.