Advertisement

ವರುಣನ ಅವಕೃಪೆಗೆ ರೈತ ಕಂಗಾಲು

12:41 PM Oct 22, 2018 | |

ಇಂಡಿ: ಒಂದೆಡೆ ಕೈ ಕೊಟ್ಟ ಮುಂಗಾರು ಮಳೆ, ಮತ್ತೂಂದೆಡೆ ಕೈ ಗೆಟುಕದ ಕಾಲುವೆ ನೀರು. ಇಂಥದರ ನಡುವೆ ಕೆಲವೆಡೆ ಸುರಿದ ಅಲ್ಪ-ಸ್ವಲ್ಪ ಮಳೆಯಲ್ಲೆ ಬಿತ್ತಿದ ಬಡ ರೈತರ ಬೆಳೆ ಬೆಳೆದು ಇನ್ನೇನು ಹೂ ಕಟ್ಟುವ ಹಂತಕ್ಕೆ ತಲುಪಿದ್ದು ಆದರೆ ಈ ಬೆಳೆ ಈಗ ನೀರಿನ ಕೊರತೆಯಿಂದ ತತ್ತರಿಸಿದ್ದು ಅನ್ನದಾತ ಅಕ್ಷರಶಃ ಕಂಗಾಲಾಗಿದ್ದಾನೆ.

Advertisement

ತಾಲೂಕಿನ ತೊಗರಿ ಬೆಳೆಗಾರರು ಈಗ ಭಾರಿ ಪ್ರಮಾಣ ನೀರಿನ ಕೊರತೆಯಿಂದ ಬಾಡುತ್ತಿರುವ ತಮ್ಮ ಜಮೀನಿನಲ್ಲಿನ ತೊಗರಿ ಬೆಳೆಯನ್ನು ರಕ್ಷಿಸಿಕೊಳ್ಳಲು ಹರಸಾಹಸ ನಡೆಸಿದ್ದಾರೆ.  ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆ ಆಶ್ರಿತ ಕೆಲ ರೈತರು ಸಾಲ-ಸೂಲ ಮಾಡಿ ಗೊಬ್ಬರ ತೊಗರಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಈ ಬೆಳೆ ಈಗ ಕೆಲವೆಡೆ ಹೂ ಕಟ್ಟುವ ಹಂತ ತಲುಪಿದರೆ, ಮತ್ತೆ ಕೆಲವೆಡೆ ಹೂ ಕಟ್ಟುವ ಮುನ್ನವೆ ತೇವಾಂಶದ ಕೊರತೆಯಿಂದಾಗಿ ಗಿಡದ ಎಲೆ ಉದುರುತ್ತಿರುವ ನೋಟ ಕಂಡು ಬಂದಿದ್ದು, ಮಳೆ ನಿರೀಕ್ಷೆಯಲ್ಲಿಯೇ ರೈತರು ದಿನ ದೂಡುತ್ತಿದ್ದಾರೆ.

ಈ ಬಾರಿ ಉತ್ತಮ ಲಾಭದ ನಿರೀಕ್ಷೆಯಿಂದ ರೈತರು ಪಿಂಕ್‌, ಗುಳಾಳ ತಳಿಯ ತೊಗರಿ ಧಾನ್ಯ ಬಿತ್ತನೆ ಮಾಡಿದ್ದಾರೆ. ಆದರೆ ಮೊಳಕಾಲುದ್ದ ಬೆಳೆದ ತೊಗರಿ ಬೆಳೆ ನಿತ್ಯದ ಬೇಸಿಗೆಯಂತಹ ಬಿರು ಬಿಸಿಲಿನ ಶಾಖಕ್ಕೆ ಮಮ್ಮಲ ಮರುಗುತ್ತಿದೆ. ಅತ್ತ ಭೂಮಿಯಲ್ಲೂ ತೇವಾಂಶವಿಲ್ಲದೆ ಒಣಗುತ್ತಿದೆ. 

ಕಾಲುವೆ ನೀರನ್ನಾದರೂ ಬಳಸಿ ಬಂಗಾರದಂತಹ ಬೆಳೆ ಉಳಿಸಿಕೊಳ್ಳಬೇಕು ಎಂದರೆ ಆ ನೀರು ಕಳೆದ ತಿಂಗಳಿನಿಂದ ಸಿಗುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆಲಮಟ್ಟಿ ಡ್ಯಾಂ ಭರ್ತಿಯಾದರೂ ತೊಟ್ಟು ನೀರು ಸಿಗದ ಕಾರಣ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುತ್ತಿಲ್ಲ ಎನ್ನುವಂತಾಗಿದೆ ಈ ಭಾಗದ ರೈತರ ಪರಿಸ್ಥಿತಿ. 

ವಾರಾಬಂದಿ ನಿಯಮದಂತೆ ಇಂಡಿ ಶಾಖಾ ಕಾಲುವೆಯಲ್ಲಿ ನೀರು ಹರಿಯಬೇಕಿತ್ತು. ಆದರೆ ಹನಿ ನೀರು ಸಹ ಬಿಡದ ಕಾರಣ ಕಾಲುವೆ ಒಣಗಿದೆ. ನಮ್ಮ ದುಸ್ಥಿತಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ತಾಲೂಕಿನ ಲಚ್ಯಾಣ ಗ್ರಾಮದ ರೈತರಾದ ಗೌರಿಶಂಕರ ಬಾಬಳಗಿ, ಕಲ್ಲನಗೌಡ ಬಿರಾದಾರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಒಂದೆಡೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಇಂಡಿ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಮತ್ತೂಂದೆಡೆ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರು ಕೇವಲ ಸ್ವ
ಕ್ಷೇತ್ರದತ್ತ ಮಾತ್ರ ಗಮನ ಹರಿಸುತ್ತಾರೆ. ಕಳೆದ ಬಾರಿ ಕೇವಲ ಮೂರು ಪಂಪ್‌ಸೆಟ್‌ ಬಳಸಿ ನೀರು ಹರಿಸಲಾದ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗೆ ಈ ಬಾರಿ ಐದು ಪಂಪ್‌ಸೆಟ್‌ ಬಳಸಿ ನೀರು ಹರಿಸಿ, ಇಂಡಿ ಶಾಖಾ ಕಾಲುವೆಯನ್ನು ನಿರ್ಲಕ್ಷಿಸಿದ್ದಾರೆ ಎಂಬ ಆರೋಪವೂ ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತೂಂದೆಡೆ ಸಂಬಂಧಿಸಿದ ಯುಕೆಪಿ ಅಧಿಕಾರಿಗಳು ಕಾಲುವೆಗೆ ಸಮರ್ಪಕ ನೀರು ಹರಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಕೂಡಲೆ ಇನ್ನಾದರೂ ಎಚ್ಚೆತ್ತು ಇಂಡಿ ಶಾಖಾ ಕಾಲುವೆಗೆ ನೀರು ಹರಿಸಬೇಕು. ಈ ಮೂಲಕ ನೀರಿಲ್ಲದೆ ಬಾಡುತ್ತಿರುವ ತೊಗರಿ ಬೆಳೆಯನ್ನು ರಕ್ಷಿಸಬೇಕು. ಇಲ್ಲವಾದರೆ
ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕಾಲುವೆ ಆಶ್ರಿತ ರೈತರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

„ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next