ಬೆಂಗಳೂರು: ಕೆಲದಿನಗಳಿಂದ ಸುಮ್ಮನಿದ್ದ ಮಳೆರಾಯ ಗುರುವಾರ ರಾತ್ರಿ ರಾಜಧಾನಿಯಲ್ಲಿ ತನ್ನ ಆರ್ಭಟ ತೋರಿದ್ದಾನೆ. ರಾತ್ರಿ 10 ಗಂಟೆ ಬಳಿಕ ಗುಡುಗು ಸಿಡಿಲಿನೊಂದಿಗೆ ಶುರುವಾದ ಧಾರಾಕಾರ ಮಳೆ ಹಲವು ಗಂಟೆಗಳ ಕಾಲ ನಿರಂತರವಾಗಿ ಸುರಿದಿದೆ.
ಮೆಜೆಸ್ಟಿಕ್, ಎಂಜಿ ರಸ್ತೆ, ಮಲ್ಲೇಶ್ವರಂ, ಹೆಬ್ಟಾಳ ಕಸ್ತೂರ ಬಾ ರಸ್ತೆ , ಲಾಲ್‌ಭಾಗ್ ವಿಲ್ಸನ್ ಗಾರ್ಡ್‌ನ್ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ಕೆಲವೆಡೆ ಅಂಡರ್ ಪಾಸ್‌ಗಳಲ್ಲಿ ನೀರು ತುಂಬಿ ಹರಿಯಿತು. ಜೊತೆಗೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಇನ್ನಿಲ್ಲದ ಸಮಸ್ಯೆ ಉಂಟಾಯಿತು.
ಭಾರೀ ಮಳೆಯಿಂದ ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅಡತಡೆ ಉಂಟಾಯಿತು. ವಾಹನ ಸವಾರರು ತೀವ್ರ ಪರದಾಡುವಂತಾಯಿತು. ಬಿರುಗಾಳಿ ಸಹಿತ ಮಳೆಗೆ ಹಲವು ಕಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ.
ಇನ್ನು ಗಣೇಶನ ಉತ್ಸವ ಆಯೋಜಿಸಿದ್ದ ಕೆಲ ಆಚರಣ ಸಮಿತಿಗಳು ಗುರುವಾರ ಗಣೇಶನ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಿಕೊಂಡಿದ್ದವು. ಆದರೆ, ದಿಢೀರ್ ಸುರಿದ ಮಳೆಯಿಂದಾಗಿ ಸ್ವಲ್ಪ ಫಜೀತಿ ಉಂಟಾಯಿತು.
ಭಾರಿ ಮಳೆ ಸಾಧ್ಯತೆ
ಬೆಂಗಳೂರು, ಮೈಸೂರು ಹಾಸನ, ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.