ಲಕ್ನೋ: ಉತ್ತರಪ್ರದೇಶದ ಪಿಲಿಭಿಟ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ವರುಣ್ ಗಾಂಧಿಗೆ ಈ ಬಾರಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ, ವರುಣ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾದರೆ ಸ್ವಾಗತ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಧೀರ್ ರಂಜನ್ ಚೌಧುರಿ ಆಫರ್ ನೀಡಿದ್ದಾರೆ.
ಇದನ್ನೂ ಓದಿ:ವೃದ್ದ ದಂಪತಿಗೆ ಹಲ್ಲೆ ಪ್ರಕರಣ; ಹಲ್ಲೆಗೊಳಗಾದವರ ಮೇಲೆಯೇ ಪ್ರಕರಣ ದಾಖಲಿಸುವ ಹುನ್ನಾರ: ಆರೋಪ
ಸುದ್ದಿಗಾರರ ಜತೆ ಮಾತನಾಡಿದ ಚೌಧುರಿ, ವರುಣ್ ಕುಟುಂಬ ಗಾಂಧಿ ಕುಟುಂಬಕ್ಕೆ ಸೇರಿದ್ದ ಕಾರಣ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ವರುಣ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಬೇಕು. ಒಂದು ವೇಳೆ ಅವರು ಸೇರ್ಪಡೆಯಾದರೆ ನಮಗೆ ಸಂತೋಷ. ಅವರೊಬ್ಬ ದೊಡ್ಡ ನಾಯಕ, ವಿದ್ಯಾವಂತ ರಾಜಕಾರಣಿ. ವರುಣ್ ಪಾರದರ್ಶಕ ವ್ಯಕ್ತಿತ್ವ ಹೊಂದಿದ್ದು, ಅವರ ಗಾಂಧಿ ಕುಟುಂಬದ ಸಂಬಂಧಿ ಎಂದು ಚೌಧುರಿ ಹೇಳಿದರು.
ಮಾರ್ಚ್ 24ರಂದು ಭಾರತೀಯ ಜನತಾ ಪಕ್ಷ ಲೋಕಸಭಾ ಚುನಾವಣೆಗಾಗಿ ಬಿಡುಗಡೆಗೊಳಿಸಿದ ಐದನೇ ಪಟ್ಟಿಯಲ್ಲಿ ವರುಣ್ ಗಾಂಧಿ ಹೆಸರನ್ನು ಕೈಬಿಡಲಾಗಿತ್ತು. ಆದರೆ ತಾಯಿ ಮನೇಕಾ ಗಾಂಧಿಗೆ ಸುಲ್ತಾನ್ ಪುರ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
2021ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಜಿತಿನ್ ಪ್ರಸಾದ್ ಗೆ ಪಿಲಿಭಿಟ್ ಕ್ಷೇತ್ರದ ಟಿಕೆಟ್ ನೀಡಲಾಗಿದ್ದು, ಹಾಲಿ ಸಂಸದ ವರುಣ್ ಗಾಂಧಿಯನ್ನು ಕೈಬಿಡಲಾಗಿದೆ. ಬಿಜೆಪಿ ತನಗೆ ಮೋಸ ಮಾಡಿದ್ದು, ಯಾವುದೇ ಕಾರಣಕ್ಕೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ವರುಣ್ ಗಾಂಧಿ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.