Advertisement

ಶಾಸಕ ಎಸ್ಸೆನ್ನೆನ್‌ ಸೋಲಿಸಲು ವರ್ತೂರು ಪ್ರಕಾಶ್‌ ಶಪಥ

03:35 PM Dec 21, 2017 | |

ಬಂಗಾರಪೇಟೆ: ಸತತ ಎರಡು ಬಾರಿ ಗೆದ್ದಿರುವ ನನಗೆ ಮುಂದಿನ ಚುನಾವಣೆಯಲ್ಲಿ ಠೇವಣಿ ಕೂಡ ವಾಪಸ್‌ ಬರುವುದಿಲ್ಲ ಎಂದಿರುವ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರ ಠೇವಣಿಯನ್ನೇ ನಷ್ಟ ಮಾಡಿಸಿ, ಹೀನಾಯವಾಗಿ ಸೋಲಿಸಲು ತಮ್ಮ ಬೆಂಬಲಿಗರು ಸಮರ್ಥರಾಗಿದ್ದಾರೆಂದು ಕೋಲಾರ ಶಾಸಕ ವರ್ತೂರು ಆರ್‌.ಪ್ರಕಾಶ್‌ ಹೇಳುವ ಮೂಲಕ ಬಂಗಾರಪೇಟೆ ಶಾಸಕ ಎಸ್ಸೆನ್ನೆನ್‌ ಸೋಲಿಸಲು ಶಪಥ ಮಾಡಿದರು.

Advertisement

ಪಟ್ಟಣದ ತಕ್ಕ ಪಾಠ: ಎಪಿಎಂಸಿ ಯಾರ್ಡ್‌ ಬಳಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮಾತನಾಡಿದರು. ಎಸ್ಸೆನ್ನೆನ್‌ಗೆ ಕೋಲಾರದಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿಕೋಳುತ್ತಿದ್ದೆ. ಆದರೆ, 2013ರಲ್ಲಿ ನನ್ನ ಸಹಕಾರದಿಂದಲೇ ಶಾಸಕರಾಗಿರುವ ಎಸ್‌.ಎನ್‌.ನಾರಾಯಣಸ್ವಾಮಿ ನನ್ನ ವಿರುದ್ಧವೇ ಆರೋಪ ಮಾಡಿರುವುದಕ್ಕೆ ತಕ್ಕ ಪಾಠ ಕಲಿಸಲು ಬಂಗಾರಪೇಟೆಯಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದೇನೆ ಎಂದರು.

ನಮ್ಮ ಶಕ್ತಿ ಮನವರಿಕೆ: ಬಂಗಾರಪೇಟೆಯಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮ ಮಾಡುತ್ತಿಲ್ಲ. ರಾಜಕೀಯೇತವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಕಾರ್ಯಕ್ರಮಕ್ಕೆ ಜಾಗ ಕೊಟ್ಟವರ ವಿರುದ್ಧ ಗಲಾಟೆ ಮಾಡಿದ್ದಾರೆ. 100 ಜನ ಪೊಲೀಸರನ್ನು ಇಟ್ಟುಕೊಂಡು ಬೆಂಬಲಿಗರು ಹಾಕಿದ್ದ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿದ್ದಾರೆ. ಕಾರ್ಯಕ್ರಮಕ್ಕೆ ಬರದಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ, ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಭಾಗವಹಿಸುವುದರ ಮೂಲಕ ಎಸ್‌.ಎನ್‌.ನಾರಾಯಣಸ್ವಾಮಿಗೆ ನಮ್ಮ ಶಕ್ತಿಯನ್ನು ಮನವರಿಕೆ ಮಾಡಿದ್ದಾರೆ ಎಂದರು.

ಬೆಂಬಲಿಗರ ಮೇಲೆ ದೌರ್ಜನ್ಯ: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾರು ಏನು ಬೇಕಾದರೂ ಸ್ವತಂತ್ರವಾಗಿ ಮಾಡಿಕೊಳ್ಳಬಹುದು ಆದರೆ, ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ಮಾಡಿಕೊಳ್ಳದಂತೆ ಪೊಲೀಸ್‌ ಇಲಾಖೆಯನ್ನುದುರು ಪಯೋಗಪಡಿಸಿಕೊಳ್ಳುವುದು, ನಮ್ಮ ಬೆಂಬಲಿಗರ ಮೇಲೆ ದೌರ್ಜನ್ಯ, ದಬ್ಟಾಳಿಕೆ ಮಾಡುತ್ತಿರುವುದಕ್ಕೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಮ್ಮ ಕಾಂಗ್ರೆಸ್‌ ಗೆಲ್ಲಲಿದೆ: 2013ರಲ್ಲಿ ಎಸ್‌. ಎನ್‌.ನಾರಾಯಣಸ್ವಾಮಿ ಅವರನ್ನು ನಮ್ಮ ಸಮುದಾಯದ ದಿ.ಸಿ.ಚಂದ್ರಶೇಖರಗೌಡರು ಗೆಲ್ಲಿಸಿದ್ದರು. ಕುರುಬದ ಜನಾಂಗದ 30 ಸಾವಿರ ಜನರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಕಾಂಗ್ರೆಸ್‌ನ  ಸ್‌.ಎನ್‌.ನಾರಾಯಣ ಸ್ವಾಮಿ ಅವರಿಗೆ ಮತ ಹಾಕಿ ಗೆಲ್ಲಿಸಿದ್ದಕ್ಕೆ ಪ್ರಸ್ತುತ ಅವರ ಕುಟುಂಬದ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು. 

Advertisement

ಕ್ಷೇತ್ರದಲ್ಲಿ ಬಹುತೇಕ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಫೆಬ್ರವರಿ, ಮಾರ್ಚ್‌ನಲ್ಲಿ ನಮ್ಮ ಕಾಂಗ್ರೆಸ್‌ ಪಕ್ಷಕ್ಕೆ ಸುಮಾರು 20ಕ್ಕೂ ಹೆಚ್ಚು ಪ್ರಭಾವಿ ಮುಖಂಡರು ಸೇರಲಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಕೋಲಾರ, ಬಂಗಾ ರಪೇಟೆ ಹಾಗೂ ಕೆಜಿಎಫ್ನಲ್ಲಿ ನಮ್ಮ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆಂದು ಭವಿಷ್ಯ ನುಡಿದರು.

ಕಾಂಗ್ರೆಸ್‌ಗೆ ಸೋಲು ಖಚಿತ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಪಕ್ಷ ಖಾತೆಯನ್ನೇ ತೆರೆಯವುದಿಲ್ಲ. ಒಂದೂ ಸೀಟು ಗೆಲ್ಲುವುದಿಲ್ಲ. ಕಾಂಗ್ರೆಸ್‌ ಪಕ್ಷ ಸಂಪೂರ್ಣವಾಗಿ ಸೋಲಲಿದೆ. ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ಮುಂದಿನ ಚುನಾವಣೆಯಲ್ಲಿ ಠೇವಣಿ ಉಳಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಎಂದರು.

ರೂಪಾ ಶಾಸಕರಾಗಲು ಸಾಧ್ಯವಿಲ್ಲ: ಕೋಲಾರ ಜಿಲ್ಲೆಯಲ್ಲಿ ಏಳು ಬಾರಿ ಸಂಸದರಾಗಿರುವ ಕೆ.ಎಚ್‌.ಮುನಿಯಪ್ಪ ಅವರು ಬದುಕಿರುವ ವರೆಗೂ ಅವರೇ ಸಂಸದರಾಗಿ ಗೆಲ್ಲುತ್ತಾರೆ. ಆದರೆ, ಕೆಜಿಎಫ್ ಕ್ಷೇತ್ರದಲ್ಲಿ ಅವರ ಮಗಳು ರೂಪಾ ಶಾಸಕರಾಗಲು ಸಾಧ್ಯವಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಕೆ.ಎಚ್‌.ಮುನಿಯಪ್ಪ ಏನು ಬೇಕಾದರೂ ಹುದ್ದೆ ಪಡೆಯಲಿ. ಮಗಳು ಮಾತ್ರ ಶಾಸಕರಾಗಲು ಸಾಧ್ಯವಿಲ್ಲ ಎಂದರು.

ಫೆಬ್ರವರಿ ನಂತರ ಅಭ್ಯರ್ಥಿ ಘೋಷಣೆ: ಮುಂದಿನ ತಿಂಗಳ 20ರ ನಂತರ ಬಂಗಾರಪೇಟೆ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ನಮ್ಮ ಕಾಂಗ್ರೆಸ್‌ ಪಕ್ಷದ ಪ್ರಚಾರ ನಡೆಸಲಾಗುವುದು. ಈ ಕ್ಷೇತ್ರದ ಟಿಕೆಟ್‌ ಯಾರಿಗೆ ನೀಡಬೇಕೆಂದು ಗುಟ್ಟಾಗಿ ಇಟ್ಟುಕೊಂಡಿದ್ದೇನೆ. ಫೆಬ್ರವರಿ ತಿಂಗಳ ನಂತರ ಅಭ್ಯರ್ಥಿಯನ್ನು ಘೋಷಣೆ ಮಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಏನು ಎಂಬುದನ್ನು ತೋರಿಸಲಾಗುವುದೆಂದರು. 

ಜಿಪಂ ಸದಸ್ಯ ಸಿ.ಎಸ್‌.ವೆಂಕಟೇಶ್‌ ಮಾತನಾಡಿ, ಕೋಲಾರ ಶಾಸಕ ವರ್ತೂರು ಪ್ರಕಾಶ್‌ ಅವರ ಹುಟ್ಟುಹಬ್ಬಕ್ಕೆ ಹಾಕಿರುವ ಫ್ಲೆಕ್ಸ್‌ಗಳನ್ನು ದೌರ್ಜನ್ಯದಿಂದ ಕಿತ್ತುಹಾಕಿಸಿದ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರಿಗೆ ತಾಕತ್ತಿದ್ದರೆ ಜನವರಿಯಲ್ಲಿ ಹಮ್ಮಿಕೊಳ್ಳುವ ನಮ್ಮ ಕಾಂಗ್ರೆಸ್‌ ಸಮಾವೇಶದ ಫ್ಲೆಕ್ಸ್‌ಗಳನ್ನು ಕಿತ್ತುಹಾಕಲಿ ಎಂದು ಸವಾಲು ಹಾಕಿದರು. 

ಜಿಪಂ ಸದಸ್ಯ ಅರುಣ್‌ಪ್ರಸಾದ್‌, ರೂಪಾ, ಕೋಲಾರ ತಾಪಂ ಅಧ್ಯಕ್ಷ ಸೂಲೂರು ಆಂಜಪ್ಪ, ಮುಖಂಡ ಬೆಗ್ಲಿ ಸೂರ್ಯಪ್ರಕಾಶ್‌, ಕಾರಹಳ್ಳಿ ಮೇಸ್ತ್ರೀ ಶ್ರೀನಿವಾಸ್‌, ತಾಪಂ ಸದಸ್ಯ ಜೆಸಿಬಿ ನಾರಾಯಣಪ್ಪ, ಕಾರಮಂಗಲ ಅಶ್ವತ್ಥ, ಸಿ.ಅಪ್ಪಯ್ಯಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಲ್‌.ರಾಮಕೃಷ್ಣ, ಬೇತಮಂಗಲ ಅಮರೇಶ್‌ ಮುಂತಾದವರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next