Advertisement

ಮನೆ ಬಾಗಿಲಿಗೆ ವಿವಿಧ ಪಿಂಚಣಿ ಸೌಲಭ್ಯ

08:51 PM Mar 18, 2020 | Lakshmi GovindaRaj |

ಚಾಮರಾಜನಗರ: ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವಿವಿಧ ಪಿಂಚಣಿ ಸೌಲಭ್ಯ ಪಡೆಯಲು ನಾಗರಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಮನೆ ಬಾಗಿಲಿಗೆ ಸೇವೆ ತಲುಪಿಸುವ ಉದ್ದೇಶದಿಂದ ಆರಂಭಗೊಂಡ ಸೇವಾ ಮಿತ್ರ ಯೋಜನೆ, ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾರ್ವಜನಿಕರಿಗೆ ಸೇವೆಗಳನ್ನು ಒದಗಿಸುತ್ತಿದೆ.

Advertisement

ಅನುಷ್ಠಾನಗೊಂಡ ಕೆಲ ದಿನಗಳಲ್ಲೇ ನಾಗರಿಕರ ಮನವಿಗೆ ಕೂಡಲೇ ಸ್ಪಂದಿಸುವ ಮುಖೇನ ಅನೇಕರು, ತಮ್ಮ ಸೌಲಭ್ಯವನ್ನು ತ್ವರಿತವಾಗಿ ಪಡೆಯಲು ಸಹಾಯಕವಾಗಿದೆ. ಸೇವಾ ಮಿತ್ರ ಯೋಜನೆಯಡಿ ಸದ್ಯ ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ಯೋಜನೆ, ಮನಸ್ವಿನಿ ಯೋಜನೆ ಹಾಗೂ ಮೈತ್ರಿ ಯೋಜನೆಗಳ ಪಿಂಚಣಿಯ ಅರ್ಹ ಫ‌ಲಾನುಭವಿಗಳಿಗೆ ಸೇವೆ ಒದಗಿಸುವ ಕೆಲಸ ಮಾಡಲಾಗುತ್ತಿದೆ.

ಹೇಗೆ ಕಾರ್ಯನಿರ್ವಹಿಸುತ್ತಿದೆ?: ಪಿಂಚಣಿ ಸೌಲಭ್ಯಕ್ಕಾಗಿ ಆಯಾ ತಾಲೂಕಿನ ಕಂಟ್ರೋಲ್‌ ರೂಂಗೆ ಬಂದ ಮನವಿಗಳನ್ನು ಕೂಡಲೇ ಸ್ವೀಕರಿಸಿ, ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು (ಸೇವಾ ಮಿತ್ರ) ಫ‌ಲಾನುಭವಿಗಳ ಮನೆಗೆ ತೆರಳಿ ಅಗತ್ಯ ದಾಖಲಾತಿಗಳನ್ನು ಪಡೆಯುತ್ತಿದ್ದಾರೆ. ನಂತರ ಅರ್ಜಿಗಳನ್ನು ನಿಯಮಾನುಸಾರ ಶೀಘ್ರವಾಗಿ ಕಚೇರಿಯಲ್ಲಿ ಪರಿಶೀಲಿಸಿ, ಅರ್ಹರಿಗೆ ಪಿಂಚಣಿ ಮಂಜೂರು ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಮನೆಗೆ ಭೇಟಿ ನೀಡಿ ಮಂಜೂರಾತಿ ಆದೇಶ ಪತ್ರವನ್ನೂ ನೀಡಲಾಗುತ್ತಿದೆ.

ಅದರಂತೆ ಈವರೆಗೆ ಜಿಲ್ಲೆಯ ಎಲ್ಲಾ ತಾಲೂಕು ಕಂಟ್ರೋಲ್‌ ರೂಂಗಳಿಂದ ಒಟ್ಟು 370 ಕರೆಗಳು ಸ್ವೀಕೃತವಾಗಿದೆ. ಸೇವಾ ಮಿತ್ರ ಜಾರಿಗೆ ಬಂದ 15 ದಿನಗಳಲ್ಲಿ 63 ಅರ್ಹ ಫ‌ಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಿ, ಮಂಜೂರಾತಿ ಪತ್ರವನ್ನೂ ಸಹ ನೀಡಲಾಗಿದೆ. ಉಳಿದ ಪ್ರಕರಣಗಳು ಕಾರ್ಯರೂಪದ ಹಂತದಲ್ಲಿದ್ದು, ಶೀಘ್ರವಾಗಿ ಸೇವೆ ದೊರೆಯುವಂತೆ ಮಾಡುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಕರೆ ಮಾಡಿ, ಸೇವೆ ಪಡೆಯಿರಿ: ಸೇವಾ ಮಿತ್ರಕ್ಕಾಗಿ ರಜಾ ದಿನಗಳನ್ನು ಹೊರತುಪಡಿಸಿ, ಉಳಿದೆಲ್ಲಾ ದಿನಗಳ ಕಚೇರಿ ಸಮಯದಲ್ಲಿ ಅಂದರೆ ಬೆಳಗ್ಗೆ 10ರಿಂದ ಸಂಜೆ 5.30 ಗಂಟೆಯವರೆಗೆ ಆಯಾ ತಾಲೂಕು ಕಂಟ್ರೋಲ್‌ ರೂಂಗೆ ಕರೆ ಮಾಡಿ ಮನವಿ ಸಲ್ಲಿಸಬಹುದು. ಚಾಮರಾಜನಗರ- ದೂ.ಸಂ: 08226-222046, ಕೊಳ್ಳೇಗಾಲ- ದೂ.ಸಂ: 08224-252042, ಗುಂಡ್ಲುಪೇಟೆ- ದೂ.ಸಂ:08229-222225, ಯಳಂದೂರು- ದೂ.ಸಂ: 08226-240029 ಹಾಗೂ ಹನೂರು- ದೂ.ಸಂ: 08224-268032 ಅನ್ನು ಸಂಪರ್ಕಿಸಿ ಸೌಲಭ್ಯ ಪಡೆಯಬಹುದಾಗಿದೆ.

Advertisement

ಜಿಲ್ಲೆಯಲ್ಲಿ ಸೇವಾ ಮಿತ್ರ ಯೋಜನೆಯಡಿ ಈಗಾಗಲೇ ಸಾಕಷ್ಟು ಮನವಿ ಸಲ್ಲಿಕೆಯಾಗಿದ್ದು, ಆ ಎಲ್ಲಾ ಮನವಿಗಳಿಗೆ ಕೂಡಲೇ ಸ್ಪಂದಿಸಿ, ಮನೆ ಬಾಗಿಲಿಗೆ ಸೇವೆ ಒದಗಿಸಲಾಗುತ್ತಿದೆ. ಯೋಜನೆ ಜಾರಿಗೆ ಬಂದ 15 ದಿನಗಳಲ್ಲೇ ಅನೇಕ ಮಂದಿ ಪ್ರಯೋಜನ ಪಡೆದಿದ್ದಾರೆ.
-ಡಾ.ಎಂ.ಆರ್‌.ರವಿ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next