Advertisement

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

11:18 AM May 05, 2024 | Team Udayavani |

ಬೇಸಿಗೆಯ ಧಗೆಗೆ ಜನ ತತ್ತರಿಸಿಹೋಗಿದ್ದಾರೆ. ಬಿಸಿಲ ಝಳದಿಂದ ಪಾರಾಗಲು ಉಳಿದಿರುವುದು ಒಂದೇ ದಾರಿ- ಜ್ಯೂಸ್‌ ಅಥವಾ ಶರಬತ್ತು ಸೇವನೆ. ತಂಪಾದ, ರುಚಿರುಚಿಯ ಜ್ಯೂಸ್‌ ಕುಡಿಯಲು ಜ್ಯೂಸ್‌ ಅಂಗಡಿಗೇ ಹೋಗಬೇಕಿಲ್ಲ. ಮನೆಯಲ್ಲಿಯೇ ಕಡಿಮೆ ಖರ್ಚಿನಲ್ಲಿ ಶುಚಿ-ರುಚಿಯ ಜ್ಯೂಸ್‌ ತಯಾರಿಸಲು ಸಾಧ್ಯವಿದೆ. ಪಾನಕ ಸೇವನೆ, ಹೊಟ್ಟೆಯೊಳಗೆ ತಂಗಾಳಿ ಬೀಸಿದ ಅನುಭವ ನೀಡುತ್ತದೆ.ಮಾತ್ರವಲ್ಲ, ಬೇಸಿಗೆಯಲ್ಲಿ ಡೀಹೈಡ್ರೇಷನ್‌ ಆಗದ ಹಾಗೆ ಜೀವ ಕಾಯುತ್ತದೆ. ತೂಕ ಕಳೆದುಕೊಳ್ಳಲೂ ಸಹಕಾರಿ. ಮನೆಯಲ್ಲಿಯೇ ತಯಾರಿಸಬಹುದಾದ ಜ್ಯೂಸ್‌ಗಳ ಪಟ್ಟಿ ಮತ್ತು ಅವುಗಳ ಸೇವನೆಯಿಂದ ಆಗುವ ಉಪಯೋಗ­ಗಳ ಕುರಿತ ವಿವರಣೆ ಇಲ್ಲಿದೆ…

Advertisement

ಸಪೋಟ ಜ್ಯೂಸ್‌

ಬೇಕಿರುವ ವಸ್ತುಗಳು:  4 ಸಪೋಟ(ಚಿಕ್ಕು) ಹಣ್ಣುಗಳು, ಎರಡು ಕಪ್‌ ನೀರು, ನಾಲ್ಕು ಚಮಚ ಸಕ್ಕರೆ

ತಯಾರಿಸುವ ವಿಧಾನ:  ಸಪೋಟ ಹಣ್ಣುಗಳ ಸಿಪ್ಪೆ ಮತ್ತು ಬೀಜ ತೆಗೆದು ತಿರುಳನ್ನು ಮಿಕ್ಸಿಗೆ ಹಾಕಿ ರುಬ್ಬಿ. ಇನ್ನೇನು ನುಣ್ಣಗಾಗುತ್ತದೆ ಅನ್ನುವಾಗ ಸಕ್ಕರೆ ಸೇರಿಸಿ ಮತ್ತೆ ರುಬ್ಬಿ. ಹದ ನೋಡಿ ಅಗತ್ಯವಿರುವಷ್ಟು ನೀರು ಬೆರೆಸಿಕೊಳ್ಳಿ ಮತ್ತು ಸವಿಯಿರಿ.

ಅನುಕೂಲ:  ಸಪೋಟದಲ್ಲಿ ಕಬ್ಬಿಣದಂಶ ಹೇರಳವಾಗಿದೆ. ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Advertisement

ಪಪ್ಪಾಯ ಜ್ಯೂಸ್‌:

ಬೇಕಿರುವ ವಸ್ತುಗಳು:  ಒಂದು ಕಪ್‌ ಪಪ್ಪಾಯ ಹೋಳುಗಳು, ನಾಲ್ಕು ಚಮಚ ಸಕ್ಕರೆ, ಚಿಟಿಕೆ ಉಪ್ಪು, ಏಲಕ್ಕಿ ಪುಡಿ, ನೀರು

ತಯಾರಿಸುವ ವಿಧಾನ:  ಪಪ್ಪಾಯ ಸಿಪ್ಪೆ, ಬೀಜ ತೆಗೆದು ಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ರುಬ್ಬಿ. ಸಕ್ಕರೆ ಸೇರಿಸಿ ಒಂದು ಕಡೆಯ ಸುತ್ತು ತಿರುಗಿಸಿ ಗ್ಲಾಸಿಗೆ ಸುರಿದು ಸರ್ವ್‌ ಮಾಡಿ. ಪಪ್ಪಾಯ ಉಷ್ಣ ಎಂದು ಕೆಲವರು ಸೇವಿಸಲು ಇಷ್ಟಪಡುವುದಿಲ್ಲ. ಇಂಥ ಸಂದರ್ಭದಲ್ಲಿ ಒಂದು ಬಾಳೆಹಣ್ಣಿನ ಚಿಕ್ಕ ಚೂರುಗಳನ್ನು ಸೇರಿಸಿಕೊಂಡರೆ ಉಷ್ಣವನ್ನು ತಗ್ಗಿಸಬಹುದು.

ಅನುಕೂಲ:  ಪಪ್ಪಾಯ ಸೇವನೆಯಿಂದ ತೂಕ ಹಾಗೂ ಮಧುಮೇಹವನ್ನು ನಿಯಂತ್ರಿಸಬಹುದು.

ಮ್ಯಾಂಗೋ ಜ್ಯೂಸ್‌: 

ಬೇಕಿರುವ ವಸ್ತುಗಳು:  ಒಂದು ದೊಡ್ಡ ಮಾವಿನ ಹಣ್ಣಿನ ಹೋಳುಗಳು, ನಾಲ್ಕು ಚಮಚ ಸಕ್ಕರೆ, ಅರ್ಧ ಕಪ್‌ ಹಾಲು ಅಥವಾ ಮೊಸರು, ಎರಡು ಚಮಚ ಹಾಲಿನ ಕೆನೆ, ಚಿಟಿಕೆ ಉಪ್ಪು, ಏಲಕ್ಕಿ ಪುಡಿ, ಒಂದು ಚಮಚ ಡ್ರೈ ಫ್ರೂಟ್ಸ್ ಚೂರುಗಳು

ತಯಾರಿಸುವ ವಿಧಾನ:  ಮಾವಿನ ಹೋಳುಗಳನ್ನು ಮಿಕ್ಸಿಗೆ ಹಾಕಿ ತಿರುವಿ. ಕಡೇ ಸುತ್ತಿನಲ್ಲಿ ಹಾಲು ಅಥವಾ ಮೊಸರು, ಕೆನೆ ಮತ್ತು ಸಕ್ಕರೆ ಬೆರೆಸಿ ತಿರುವಿ. ಮಂದವಾಗಿರಲಿ. ಏಲಕ್ಕಿ ಪುಡಿ ಮತ್ತು ಉಪ್ಪು ಸೇರಿಸಿ ಕಲಕಿ, ಗ್ಲಾಸಿಗೆ ಸುರಿದು ಡ್ರೈ ಫ‌ೂ›ಟ್ಸ್‌ ಚೂರುಗಳಿಂದ ಅಲಂಕರಿಸಿ ನೀಡಿ.

ಅನುಕೂಲ:  ಮಾವಿನಹಣ್ಣು ಹಲವು ವಿಟಮಿನ್‌ಗಳ ಖಜಾನೆ. ಮುಖ್ಯವಾಗಿ ಅದ್ಭುತ ರುಚಿ.

ಖರ್ಜೂರ ಕರ್ಡ್‌ ಜ್ಯೂಸ್‌: 

ಬೇಕಿರುವ ವಸ್ತುಗಳು:  ಒಂದು ಕಪ್‌ ಮೊಸರು, ಅರ್ಧ ಕಪ್‌ ಖರ್ಜೂರ, ಎರಡು ಚಮಚ ಬೆಲ್ಲ, ಚಿಟಿಕೆ ಉಪ್ಪು, ಚಿಟಿಕೆ ಏಲಕ್ಕಿ ಪುಡಿ, ಒಂದು ಕಪ್‌ ನೀರು

ತಯಾರಿಸುವ ವಿಧಾನ:  ಎರಡು ಖರ್ಜೂರಗಳನ್ನು ಸಣ್ಣಗೆ ಹೆಚ್ಚಿಡಿ. ಉಳಿದ ಖರ್ಜೂರಕ್ಕೆ ಅರ್ಧ ಕಪ್‌ ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ. ಮೊಸರನ್ನು ಕಡೆದು ರುಬ್ಬಿಟ್ಟ ಖರ್ಜೂರಕ್ಕೆ ಸೇರಿಸಿ ಬೆಲ್ಲ, ಉಪ್ಪು, ಏಲಕ್ಕಿ ಪುಡಿ ಬೆರೆಸಿ. ಬೇಕಷ್ಟು ನೀರು ಸೇರಿಸಿ. ಗ್ಲಾಸಿನ ತಳದಲ್ಲಿ ಹೆಚ್ಚಿಟ್ಟ ಖರ್ಜೂರ ಹಾಕಿ ಮೇಲೆ ಪಾನೀಯ ಸುರಿದು ಸಪ್ರೈìಸ್‌ ಕೊಟ್ಟು ನೀವೂ ಕುಡಿಯಿರಿ.

ಅನುಕೂಲ:  ಮೊಸರು ಹೊಟ್ಟೆಯನ್ನು ತಂಪಾಗಿಸಿದರೆ, ಖರ್ಜೂರ ಅಗತ್ಯವಿರುವ ವಿಟಮಿನ್‌ಗಳನ್ನು ಒದಗಿಸಿ ದೇಹದ ಪೋಷಣೆ ಮಾಡುತ್ತದೆ.

ಕಾಯಿ ಹಾಲು ಜ್ಯೂಸ್‌: 

ಬೇಕಿರುವ ವಸ್ತುಗಳು:  ಅರ್ಧ ತೆಂಗಿನ ಕಾಯಿ, ಸಣ್ಣಗೆ ಹೆಚ್ಚಿನ ಒಂದು ಬಾಳೆಹಣ್ಣು, ಬೆಲ್ಲ ಅರ್ಧ ಕಪ್‌, ಒಂದು ಕಪ್‌ ಹಾಲು, ಚಿಟಿಕೆ ಏಲಕ್ಕಿ ಪುಡಿ

ತಯಾರಿಸುವ ವಿಧಾನ:  ತೆಂಗಿನ ತುರಿಯನ್ನು ರುಬ್ಬಿ ಹಿಂಡಿ, ಹಾಲನ್ನು ಪ್ರತ್ಯೇಕಿಸಿ. ಅದಕ್ಕೆ ಹಾಲು, ಬೆಲ್ಲ ಮತ್ತು ಏಲಕ್ಕಿ ಪುಡಿ ಬೆರೆಸಿ ಕಲಕಿ. ಈ ಮಿಶ್ರಣಕ್ಕೆ ಬಾಳೆಹಣ್ಣಿನ ಚೂರುಗಳನ್ನು ಸೇರಿಸಿ. ಪಾನೀಯ ಕುಡಿಯುವಾಗ ಮಧ್ಯೆ ಮಧ್ಯೆ ಹಣ್ಣು ಸಿಗುವಾಗ ಆಗುವ ಖುಷಿಯ ಮಜವೇ ಬೇರೆ. ಕುಡಿದು ತಿನ್ನಿರಿ ಅಥವಾ ತಿಂದು ಕುಡಿಯಿರಿ.

ಅನುಕೂಲ:  ಇದು ಒಣಗಿದ ತ್ವಚೆಗೆ ಉತ್ತಮ ಮದ್ದು. ದೇಹದ ಉಷ್ಣವನ್ನು ನಿಯಂತ್ರಣದಲ್ಲಿಡುತ್ತದೆ.

ಕಾಮ ಕಸ್ತೂರಿ :‌ ಮೆಂತ್ಯ ಜ್ಯೂಸ್‌:

ಬೇಕಿರುವ ವಸ್ತುಗಳು:  ಅರ್ಧ ಚಮಚ ಹಸಿ ಮೆಂತ್ಯ ಕಾಳಿನ ಪುಡಿ, ಎರಡು ಕಪ್‌ ಮಜ್ಜಿಗೆ, ಒಂದು ಚಮಚ ಕಾಮ ಕಸ್ತೂರಿ ಬೀಜ, ಚಿಟಿಕೆ ಉಪ್ಪು, (ನಾಲ್ಕು ಚಮಚ ಬೆಲ್ಲ -ಬೇಕಾದರೆ ಮಾತ್ರ)

ತಯಾರಿಸುವ ವಿಧಾನ:  ಮೆಂತ್ಯ ಕಾಳನ್ನು ಹಸಿಯಾಗಿಯೇ ಮಿಕ್ಸಿಯಲ್ಲಿ ರುಬ್ಬಿಕೊಂಡು ಅದಕ್ಕೆ ಮಜ್ಜಿಗೆ, ಉಪ್ಪು ಮತ್ತು ಕಾಮಕಸ್ತೂರಿ ಬೀಜ ಸೇರಿಸಿ, ನೀರು ಬೆರೆಸಿ ತೆಳ್ಳಗೆ ಮಾಡಿಕೊಂಡು ಕುಡಿಯಿರಿ. ಬೇಕು ಎನಿಸಿದರೆ ಮಾತ್ರ ಬೆಲ್ಲವನ್ನು ಸೇರಿಸಿಕೊಳ್ಳಿ.

ಅನುಕೂಲ:  ಬೆಲ್ಲವಿಲ್ಲದ ಈ ಪಾನೀಯ ಬೇಸಿಗೆಯಲ್ಲಿ ಮಧುಮೇಹಿಗಳಿಗೆ ಅಮೃತ ಸಮಾನ. ಮಜ್ಜಿಗೆ ಹಾಗೂ ಕಾಮ ಕಸ್ತೂರಿ ಹೊಟ್ಟೆಗೆ ತಂಪು ನೀಡಿದರೆ, ಮೆಂತ್ಯ ಮಧುಮೇಹ ನಿಯಂತ್ರಣಕಾರಿ.

ಸೌತೆಕಾಯಿ ಜ್ಯೂಸ್‌: 

ಬೇಕಿರುವ ವಸ್ತುಗಳು:  ಒಂದು ಸೌತೆಕಾಯಿ, ಮಜ್ಜಿಗೆ ಒಂದು ಕಪ್‌, ನಾಲ್ಕು ಚಮಚ ಸಕ್ಕರೆ/ಬೆಲ್ಲ, ಚಿಟಿಕೆ ಉಪ್ಪು, ಅರ್ಧ ಕಪ್‌ ನೀರು.

ತಯಾರಿಸುವ ವಿಧಾನ:  ಸೌತೆಕಾಯಿಯ ಸಿಪ್ಪೆ ಹಾಗೂ ತಿರುಳು ತೆಗೆದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಅದರ ಜೊತೆಗೆ ಉಳಿದೆಲ್ಲ ವಸ್ತುಗಳನ್ನು ಸೇರಿಸಿ ಕುಡಿಯಿರಿ.

ಅನುಕೂಲ:  ಬೇಸಿಗೆಯಲ್ಲಿ ಉಂಟಾಗುವ ಕಣ್ಣು ಹಾಗೂ ಪಾದಗಳ ಉರಿಗೆ ಉತ್ತಮ ಉಪಾಯ. ಒಮ್ಮೆಲೇ ಜೀವಕ್ಕೆ ಹುಮ್ಮಸ್ಸು ಬರುತ್ತದೆ.

ರಾಗಿ ಮೇಥಿ ರೆವೊಲ್ಯೂಷನ್‌: 

ಬೇಕಿರುವ ವಸ್ತುಗಳು:  ಒಂದು ಚಮಚ ರಾಗಿ ಹಿಟ್ಟು, ಒಂದು ಚಮಚ ಹುರಿದ ಮೆಂತ್ಯ ಕಾಳಿನ ಪುಡಿ, ಒಂದು ಕಪ್‌ ಹಾಲು, ಎರಡು ಚಮಚ ಬೆಲ್ಲ, ಅರ್ಧ ಕಪ್‌ ನೀರು.

ತಯಾರಿಸುವ ವಿಧಾನ:  ರಾಗಿ ಹಿಟ್ಟು ಮತ್ತು ಮೆಂತ್ಯದ ಪುಡಿಯನ್ನು ತಣ್ಣೀರಿನಲ್ಲಿ ಗಂಟಿಲ್ಲದಂತೆ ಕಲಸಿಕೊಂಡು ಒಲೆಯ ಮೇಲಿಟ್ಟು ಒಂದು ಕುದಿ ತರಿಸಿ. ದಪ್ಪಗಾಗುತ್ತ ಬರುವಾಗ ಹಾಲು ಸೇರಿಸಿ ಒಂದು ನಿಮಿಷ ಚೆನ್ನಾಗಿ ಕುದಿಸಿ. ಉರಿ ನಿಲ್ಲಿಸಿ. ಬೇಕಾದರೆ ಬೆಲ್ಲ ಸೇರಿಸಿ ಕಲಕಿ. ಅಗತ್ಯವಿರುವಷ್ಟು ನೀರು ಸೇರಿಸಿ ತೆಳ್ಳಗಾಗಿಸಿಕೊಳ್ಳಿ. ಆರಿದ ಮೇಲೆ ಸೇವಿಸಿ.

ಅನುಕೂಲ:  ರಾಗಿ ಮತ್ತು ಮೆಂತ್ಯ ಮಧುಮೇಹಿಗಳಿಗೂ ಡಯಟ್‌ ಮಾಡುವವರಿಗೂ ತುಂಬ ಹಿತಕರ. ಈ ಪಾನೀಯವನ್ನು ಬೆಲ್ಲ ಸೇರಿಸದೆ ಕುಡಿದರೆ ಪದೇಪದೆ ಉಂಟಾಗುವ ಹಸಿವನ್ನೂ ನಿಯಂತ್ರಿಸಬಹುದು. ಪ್ರಯಾಣದಲ್ಲೂ ಕೆಡದೆ ಇರುವ ಕಾರಣ ಸಂಜೆಯವರೆಗೂ ಆಗಾಗ ಕುಡಿಯುತ್ತ ತಂಪಾಗಿರಬಹುದು.

ಆಪಲ್‌ ಜ್ಯೂಸ್‌:

ಬೇಕಿರುವ ವಸ್ತುಗಳು:  ಒಂದು ದೊಡ್ಡ ಸೇಬು, ನಾಲ್ಕು ಚಮಚ ಸಕ್ಕರೆ, ಚಿಟಿಕೆ ಉಪ್ಪು, ಏಲಕ್ಕಿ ಪುಡಿ, ಅರ್ಧ ಕಪ್‌ ಹಾಲು

ತಯಾರಿಸುವ ವಿಧಾನ:  ಸೇಬಿನ ಬೀಜ ತೆಗೆದು ಹಣ್ಣನ್ನು ಸಣ್ಣಗೆ ಹೆಚ್ಚಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಕೊನೆಯ ರೌಂಡಿನಲ್ಲಿ ಸಕ್ಕರೆ, ಹಾಲು ಬೆರೆಸಿ ತಿರುಗಿಸಿ. ಉಪ್ಪು, ಏಲಕ್ಕಿ ಪುಡಿ ಬೆರೆಸಿ ಕುಡಿಯಿರಿ.

ಅನುಕೂಲ:  ಕಬ್ಬಿಣ ಹಾಗೂ ಹಲವು ವಿಟಮಿನ್‌ಗಳ ಆಗರವಾದ ಈ ಜ್ಯೂಸ್‌ ಎಂಥವರಿಗೂ ಒಳ್ಳೆಯದು. ತೀವ್ರ ಹೊಟ್ಟೆಯ ಸೋಂಕು ಅಥವಾ ಅತಿಸಾರಕ್ಕೆ ಒಳ್ಳೆಯ ಮದ್ದು.

ಕವಿತಾ ಹೆಗಡೆ ಅಭಯಂ, ಹುಬ್ಬಳ್ಳಿ 

***********************************************************************************************

ಬೂದು ಕುಂಬಳಕಾಯಿ ಜ್ಯೂಸ್‌: 

ಬೇಕಾಗುವ ಪದಾರ್ಥಗಳು:  1 ಕೆ. ಜಿ ಬೂದುಗುಂಬಳಕಾಯಿ, 1 ನಿಂಬೆಹಣ್ಣು, ಸ್ವಲ್ಪ ಕೊತ್ತಂಬರಿ ಮತ್ತು ಪುದಿನ ಎಲೆಗಳು, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯವಿರುವಷ್ಟು ಪ್ರಮಾಣದ ನೀರು.

ತಯಾರಿಸುವ ವಿಧಾನ:  ಬೂದುಗುಂಬಳ ಕಾಯಿಯನ್ನ ಚೆನ್ನಾಗಿ ತುರಿದು ಅದಕ್ಕೆ ಪುದಿನ, ಕೊತ್ತಂಬರಿ ಸೊಪ್ಪು, ನಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮಿಕ್ಸಿಗೆ ಹಾಕಿ ಎರಡು ನಿಮಿಷ ರುಬ್ಬಿದರೆ ಬೂದಗುಂಬಳ ಕಾಯಿ ಜ್ಯೂಸ್‌ ರೆಡಿ.

ಉಪಯೋಗ:  ಬೂದುಗುಂಬಳಕಾಯಿ ಜ್ಯೂಸ್‌ ಕುಡಿದರೆ, ದೇಹದಲ್ಲಿರುವ ಕೊಬ್ಬಿನ ಅಂಶ ಕಡಿಮೆಯಾಗಿ ದೇಹ ಹಗುರವೆನಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ಮತ್ತೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಎಳನೀರು ಜ್ಯೂಸ್‌:

ಬೇಕಾಗುವ ಪದಾರ್ಥಗಳು:  2 ಎಳನೀರು, ಸ್ವಲ್ಪ ಸಕ್ಕರೆ, ಮಂಜುಗೆಡ್ಡೆ, ಎಳನೀರಿನ ಕಾಯಿ

ತಯಾರಿಸುವ ವಿಧಾನ:  ಎಳನೀರನ್ನು ಪಾತ್ರೆಗೆ ಬಗ್ಗಿಸಿಕೊಂಡು ಅದರ ಕಾಯಿ ತೆಗೆದು ಮಂಜುಗಡ್ಡೆಯೊಂದಿಗೆ ಮಿಕ್ಸಿಯಲ್ಲಿ ಹಾಕಿ ರುಬ್ಬಬೇಕು. ನಂತರ ಅದಕ್ಕೆ ಬೇಕಾದರೆ ಸ್ವಲ್ಪ ಸಕ್ಕರೆ ಹಾಕಬಹುದು. ಈ ಮಿಶ್ರಣಕ್ಕೆ ಎಳನೀರು  ಬೆರೆಸಿ ಕುಡಿಯಿರಿ.

ಉಪಯೋಗ:  ಎಳನೀರು ಜ್ಯೂಸ್‌ ಕುಡಿಯುವುದರಿಂದ ದೇಹದ ತಾಪ ಕಡಿಮೆಯಾಗುತ್ತದೆ.

ಸೀಮೆಅಕ್ಕಿ ಶರಬತ್ತು:

ಬೇಕಾಗುವ ಪದಾರ್ಥಗಳು:  ಒಂದು ಬಟ್ಟಲು ಸೀಮೆ ಅಕ್ಕಿ, ಕಡೆದ ಮಜ್ಜಿಗೆ, ಉಪ್ಪು, ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು

ತಯಾರಿಸುವ ವಿಧಾನ:  ರಾತ್ರಿಯೇ ಸೀಮೆಅಕ್ಕಿ ನೆನೆಸಿಟ್ಟು ಬೆಳಗ್ಗೆ ಮಿಕ್ಸಿ ಜಾರ್‌ಗೆ ಮೇಲೆ ತಿಳಿಸಿರುವ ಪದಾರ್ಥಗಳನ್ನು ಬೆರೆಸಿ ರುಬ್ಬಿಕೊಳ್ಳಬೇಕು. ನಂತರ ಕಡೆದ ಮಜ್ಜಿಗೆ ಬೆರೆಸಿ ತೆಳುವಾಗುವಷ್ಟು ಬೆರೆಸಿ ಕುಡಿಯಬೇಕು.

ಉಪಯೋಗ:  ದೇಹದ ಉಷ್ಣಾಂಶ ಕಡಿಮೆಯಾಗಿ ಚರ್ಮ ಕಾಂತಿಯುತವಾಗುತ್ತದೆ.

ಮಂಗಳಾ ಶಂಕರ್‌, ಮೈಸೂರು

***************************************************************************************************

ವೀಳ್ಯದೆಲೆ ಜ್ಯೂಸ್‌

ಬೇಕಿರುವ ವಸ್ತುಗಳು:  ಸ್ವಲ್ಪ ವೀಳ್ಯದೆಲೆ, ರುಚಿಗೆ ತಕ್ಕಷ್ಟು ಬೆಲ್ಲ, ಉಪ್ಪು, ಮೆಣಸಿನ ಕಾಳಿನ ಪುಡಿ, ಅಗತ್ಯಕ್ಕೆ ತಕ್ಕಷ್ಟು ನೀರು.

ತಯಾರಿಸುವ ವಿಧಾನ:  ವೀಳ್ಯದೆಲೆ­ಯನ್ನು ಚೆನ್ನಾಗಿ ತೊಳೆದು. ತೊಟ್ಟನ್ನು ತೆಗೆದು ಸಣ್ಣಗೆ ಕತ್ತರಿಸಿಕೊಳ್ಳಿ. ಅದಕ್ಕೆ ಬೆಲ್ಲ, ಉಪ್ಪು, ಚಿಟಿಕೆ ಮೆಣಸು ಕಾಳು ಪುಡಿ, ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ನಂತರ ಸೋಸಿಕೊಂಡರೆ ವೀಳ್ಯದೆಲೆ ಜ್ಯೂಸ್‌ ಸಿದ್ಧ!

ಅನುಕೂಲ:  ವೀಳ್ಯದೆಲೆ ಸೇವನೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಪುದೀನ ಪಾನಕ:

ಬೇಕಾಗುವ ವಸ್ತುಗಳು:  ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು,ಉಪ್ಪು, ಬೆಲ್ಲ, ಅಗತ್ಯಕ್ಕೆ ತಕ್ಕಷ್ಟು ನೀರು.

ತಯಾರಿಸುವ ವಿಧಾನ:  ಮೊದಲಿಗೆ ಸೊಪ್ಪನ್ನು ಸೋಸಿ ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಸೋಸಿಟ್ಟುಕೊಳ್ಳಿ.ಅದಕ್ಕೆ ತಕ್ಕಷ್ಟು ನೀರನ್ನು ಬೆರೆಸಿ, ರುಚಿಗೆ ತಕ್ಕಷ್ಟು ಬೆಲ್ಲ ಹಾಕಿದರೆ ಪುದೀನ ಪಾನಕ ರೆಡಿ. ಇದಕ್ಕೆ ಚಿಟಿಕೆ ಉಪ್ಪು ಹಾಕಿದರೆ ರುಚಿ ಹೆಚ್ಚುತ್ತದೆ.

ಉಪಯೋಗ:  ಪುದೀನ ಗರ್ಭಕೋಶಕ್ಕೆ ಒಳ್ಳೆಯದು. ದೇಹಕ್ಕೆ ತಂಪು ಕೂಡ.

ಬೇಲದ ಪಾನಕ:

ಬೇಕಾಗುವ ವಸ್ತುಗಳು:  ಬೇಲದ ಹಣ್ಣು, ಬೆಲ್ಲ, ಅಗತ್ಯವಿರುವಷ್ಟು ನೀರು.

ತಯಾರಿಸುವ ವಿಧಾನ:  ಬೇಲದ ಹಣ್ಣನ್ನು ನೀರಿನಲ್ಲಿ ನೆನೆಸಿಡಿ. ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ನಂತರ ಚೆನ್ನಾಗಿ ಕಲಕಿ ಸೋಸಿದರೆ, ರುಚಿಯಾದ ಪಾನಕ ರೆಡಿ

ಉಪಯೋಗ:  ಬೇಲದ ಹಣ್ಣು ಲಿವರ್‌ಗೆ ಬಹಳ ಒಳ್ಳೆಯದು

ಕರಬೂಜ ಪಾನಕ:

ಬೇಕಾಗುವ ವಸ್ತುಗಳು:  ಕರಬೂಜ ಹಣ್ಣು, ಬೆಲ್ಲ, ಅಗತ್ಯವಿರುವಷ್ಟು ನೀರು

ತಯಾರಿಸುವ ವಿಧಾನ:  ಕರಬೂಜ ಹಣ್ಣಿನ ಸಿಪ್ಪೆ ತೆಗೆದು ಹೋಳುಗಳಾಗಿ ಮಾಡಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ ನಂತರ ಬೆಲ್ಲ ಹಾಕಿ. ಜಾಲರಿಯಲ್ಲಿ ಸೋಸಿದರೆ ಕರಬೂಜ ಪಾನಕ ರೆಡಿ.

ಉಪಯೋಗ:  ಕರಬೂಜ ಹಣ್ಣಿನ ಪಾನೀಯದ ಸೇವನೆ, ದೇಹವನ್ನು ತಂಪಾಗಿ ಇಡುತ್ತದೆ

ಬೀಟ್ರೂಟ್‌ ಪಾನಕ: 

ಬೇಕಾಗುವ ವಸ್ತುಗಳು:  2 ತುಂಡು ಬೀಟ್ರಟ್, ಎರಡು ತುಂಡು ಕ್ಯಾರೆಟ…, ಸಣ್ಣ ತುಂಡು ಶುಂಠಿ, ಚಿಟಿಕೆ ಅರಿಶಿನ, ಚಿಟಿಕೆ ಜೀರಿಗೆ ಪುಡಿ, ಚಿಟಿಕೆ ಮೆಣಸಿನ ಕಾಳಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ:  ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ನೀರಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಿಡಿ. ನಂತರ ಸೋಸಿ ಕುಡಿಯಿರಿ

ಉಪಯೋಗ:  ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಇದು ಉಪಯುಕ್ತ ಪೇಯ.

ಟೊಮೆಟೊ ಜ್ಯೂಸ್‌:

ಬೇಕಾಗುವ ವಸ್ತುಗಳು:  ಚೆನ್ನಾಗಿರುವ ನಾಲ್ಕು ಟೊಮೆಟೊ, ಸಕ್ಕರೆ. ಅಗತ್ಯವಿರುವಷ್ಟು ಪ್ರಮಾಣದ ನೀರು.

ತಯಾರಿಸುವ ವಿಧಾನ:  ಟೊಮೆಟೊ ತೊಳೆದು ಅದನ್ನು ಹೆಚ್ಚಿಟ್ಟುಕೊಳ್ಳಿ. ನಂತರ ಮಿಕ್ಸಿಯಲ್ಲಿ ಹಾಕಿ, ಸಕ್ಕರೆ ಹಾಕಿ ಸಣ್ಣಗೆ ರುಬ್ಬಿ. ನಂತರ ಸೋಸಿ ಕುಡಿಯಿರಿ

ಉಪಯೋಗ:  ಟೊಮೆಟೊ ಸೇವನೆ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.

ಕಲ್ಲಂಗಡಿ ಜ್ಯೂಸ್‌:

ಬೇಕಾಗುವ ವಸ್ತುಗಳು:  ಕಲ್ಲಂಗಡಿ ಹಣ್ಣು, ಸಕ್ಕರೆ, ಚಿಟಿಕೆ ಉಪ್ಪು, ಚಿಟಿಕೆ ಮೆಣಸು ಕಾಳು ಪುಡಿ, ಅಗತ್ಯಕ್ಕೆ ತಕ್ಕಷ್ಟು ನೀರು.

ತಯಾರಿಸುವ ವಿಧಾನ:  ಕಲ್ಲಂಗಡಿ ಹಣ್ಣನ್ನು ಹೋಳುಗಳಾಗಿ ಮಾಡಿ. ನಂತರ ಸಕ್ಕರೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಆನಂತರ ಸೋಸಿ ಅದಕ್ಕೆ ಉಪ್ಪು, ಮೆಣಸಿನ ಕಾಳಿನ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಕುಡಿಯಿರಿ.

ಉಪಯೋಗಗಳು:  ಕಲ್ಲಂಗಡಿ ಹಣ್ಣು ದೇಹಕ್ಕೆ ತಂಪು ಹಾಗೂ ಕಲ್ಮಶಗಳನ್ನು ಹೊರಹಾಕಲು ಉಪಯುಕ್ತ.

ವಿಶೇಷ ಸಲಹೆ: ಹುಳಿ ಹಣ್ಣುಗಳಾದ ನಿಂಬೆ, ಮೋಸಂಬಿ, ಕಿತ್ತಳೆ, ಪೈನಾಪಲ್, ಇತ್ಯಾದಿಗಳಿಗೆ ಹಾಲು ಬೆರೆಸದೆ ನೀರನ್ನು ಅಥವಾ ಮೊಸರು/ ಮಜ್ಜಿಗೆ ಸೇರಿಸಿ ಇನ್ನಷ್ಟು ರುಚಿ ಹೆಚ್ಚಿಸಬಹುದು. ಉಳಿದ ಹಣ್ಣುಗಳಿಗೆ ಹಾಲು, ಮೊಸರು, ಮಜ್ಜಿಗೆ ಏನು ಹಾಕಿದರೂ ರುಚಿ. ಕೆಲವರಿಗೆ ಸಕ್ಕರೆ ಸ್ವಲ್ಪ ಜಾಸ್ತಿ ಅಥವಾ ಕಮ್ಮಿ ಬೇಕು ಅನಿಸುತ್ತದೆ. ಅಂಥ ಸಂದರ್ಭದಲ್ಲಿ ನಿಮ್ಮ ಆರೋಗ್ಯ ನೋಡಿಕೊಂಡು ಅಗತ್ಯವಿರುವಷ್ಟು ಪ್ರಮಾಣದ ಬೆಲ್ಲ/ಸಕ್ಕರೆ ಹಾಕಿಕೊಳ್ಳಿ. ಯಾವುದೇ ಪಾನೀಯವಿರಲಿ, ಚಿಟಿಕೆ ಉಪ್ಪು ಸೇರಿಸಿದಾಗ ಪರ್ಫೆಕ್ಟ್ ರುಚಿ ಬರುತ್ತದೆ ಮತ್ತು ಸಕ್ಕರೆ ಕಡಿಮೆ ಸಾಕಾಗುತ್ತದೆ. ಸಕ್ಕರೆ ಬೇಡ ಅನ್ನುವವರು ಎಲ್ಲ ಜ್ಯೂಸುಗಳಿಗೂ ಸಾವಯವ /ಜೋನಿ ಬೆಲ್ಲ ಬಳಸಬಹುದು.

 –ವೀಣಾ ಶಂಕರ್‌, ಮೈಸೂರು 

Advertisement

Udayavani is now on Telegram. Click here to join our channel and stay updated with the latest news.

Next