ಹುನಗುಂದ: ಮುಂಗಾರು ಹಂಗಾಮಿನ ಪ್ರಮುಖ ಬೆಳೆ ಹೆಸರು ಆರಂಭದಲ್ಲಿ ಸಮೃದ್ಧವಾಗಿ ಬೆಳೆದಿದ್ದು, ರೈತನ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿತ್ತು. ಸದ್ಯ ಬಿಟ್ಟು ಬಿಡದೆ ಸುರಿದ ಮಳೆಯಿಂದ ಹೆಸರು ವಿವಿಧ ರೋಗಬಾಧೆಗೆ ತುತ್ತಾಗಿ ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಬಿತ್ತನೆ ಪೂರ್ವ ಸಮೃದ್ದ ಮಳೆಯಾದ ಕಾರಣ ರೈತರೆಲ್ಲರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತಿದ ಹೆಸರು ಹೆಚ್ಚಿನ ಇಳುವರಿ ಲೆಕ್ಕಾಚಾರ ಮಾಡಿದ್ದರು. ಆದರೆ, ಅದು ಹುಸಿಯಾಗಿದೆ.
ಹೌದು. ತಾಲೂಕಿನಾದ್ಯಂತ 5600 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಆರಂಭದಲ್ಲಿ ಮೇಘರಾಜನ ಕೃಪೆ ಸ್ವಲ್ಪ ತಡವಾದರೂ ನಂತರದ ದಿನಗಳಲ್ಲಿ ಮಳೆಯಾದ ಕಾರಣ ಹೆಸರು ಬಿತ್ತನೆ ಮಾಡಿ ಹೆಚ್ಚಿನ ಪ್ರಮಾಣದ ಇಳುವರಿ ನಿರೀಕ್ಷೆಯಲ್ಲಿದ್ದ ರೈತ. ಈ ವರ್ಷ ವರುಣನ ಆರ್ಭಟಕ್ಕೆ ತತ್ತರಿಸಿ ಹೊಗಿದ್ದಾನೆ. ಹಚ್ಚ ಹಸಿರಾಗಿದ್ದ ಹೆಸರು ಸದ್ಯಕ್ಕೆ ಕಟಾವಿನ ಹಂತಕ್ಕೆ ಬಂದಿದೆ. ಆದರೆ, ಸುಮಾರು ಒಂದು ತಿಂಗಳಿನಿಂದ ನಿರಂತರ ಬಿಟ್ಟು ಬಿಡದೆ ಸುರಿಯತ್ತಿರುವ ಮಳೆಯಿಂದ ಅತಿಯಾದ ತೇವಾಂಶದಿಂದ ಹಳದಿ ರೋಗಕ್ಕೆ (ನಂಜಾಣು) ತುತ್ತಾಗಿವೆ. ಹೀಗಾಗಿ ರೈತನ ಗೋಳು ಹೇಳತೀರದಾಗಿದೆ. ಬೀಜಕ್ಕೆ ಸಾವಿರಾರು ರೂಪಾಯಿ ವ್ಯಯಿಸಿದ ಹಣ ಬಿತ್ತಿದ ಹೆಸರು ಬೆಳೆಗೆ ಬಂದರೆ ಸಾಕು ಎನ್ನುವಂತಾಗಿದೆ.
ಹೆಸರು ಕಾಯಿಯಲ್ಲಿನ ಕಾಳುಗಳು ಜೊಳ್ಳಾಗಿ ಇಳುವರಿ ಪ್ರಮಾಣ ಕಡಿಮೆಯಾಗಿದೆ. ಈ ದಿಸೆಯಲ್ಲಿ ಸರ್ಕಾರ ಸಂಕಷ್ಟದಲ್ಲಿದ್ದ ರೈತರಿಗೆ ನೆರವಿನ ಹಸ್ತ ಚಾಚಬೇಕು ಎಂದು ರೈತ ಕೃಷ್ಣಾ ಜಾಲಿಹಾಳ ಹೇಳಿದರು.
ನಿರಂತರ ಮಳೆಯಿಂದ ಜಮೀನಿನಲ್ಲಿ ನೀರು ನಿಂತು ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಹೆಸರು ಬೆಳೆ ಹಳದಿ ನಂಜಾಣು ರೋಗಕ್ಕೆ ತುತ್ತಾಗಿವೆ. ಈ ರೋಗ ತಡೆಗಟ್ಟಲು ಥಯೋಮಿಥಾಕ್ಸಮ್ ಮತ್ತು ಇಮಿಡಾ ಕ್ಲೊಪಿಡ್(0.2 ಮೀ.ಲಿ) ದ್ರಾವಣ ಸಿಂಪಡಿಸಬೇಕು. –
ಸಿದ್ದಪ್ಪ ಪಟ್ಟಿಹಾಳ, ಕೃಷಿ ಸಹಾಯಕ ನಿರ್ದೇಶಕರು