ಬೆಂಗಳೂರಿನ ಅತ್ಯಂತ ಶ್ರೀಮಂತ ಪರಂಪರೆಯನ್ನು ಮತ್ತು ಎಲ್ಲ ವರ್ಗದ ಜನರನ್ನು ಆಕರ್ಷಿಸುವ ಹಾಗೂ ಸಾಂಸ್ಕೃತಿಕವಾಗಿರುವ ಹಳೆಯ ಸ್ಥಳವೆಂದರೆ ಅದು ಬಸವನಗುಡಿ. ಬೆಂಗಳೂರನ್ನು ಕಟ್ಟಿ ಬೆಳಸಿದ ಕೆಂಪೇಗೌಡರು ಬಸವನಗುಡಿಯನ್ನು ಹುಟ್ಟುಹಾಕುವಲ್ಲಿ ಮುಖ್ಯಪಾತ್ರವಹಿಸಿದ್ದಾರೆ. 130 ವರ್ಷಗಳ ಇತಿಹಾಸ ಹೊಂದಿರುವ ಗಾಂಧಿ ಬಜಾರ್ ಬೀದಿ ಬದಿಯ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ.
ಗಾಂಧಿ ಬಜಾರ್ ಮಾರುಕಟ್ಟೆ ದಕ್ಷಿಣ ಬೆಂಗಳೂರಿನ ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಹಲವಾರು ವರ್ಷಗಳು ಕಳೆದರು ಸ್ವಲ್ಪವೂ ಬದಲಾಗದೆ ಜನರನ್ನು ತನ್ನತ್ತ ಆಕರ್ಷಿಸುವಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನೂ ಗಾಂಧಿ ಬಜಾರ್ ಪ್ಲವರ್ ಮಾರಾಟಕ್ಕೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ದೂರದ ಊರಿನ ಜನರನ್ನು ಬಗೆ, ಬಗೆಯ ಹೂವುಗಳ ಸುಗಂದದಿಂದಲೇ ತನ್ನತ್ತ ಸೆಳೆಯುತ್ತದೆ. ಎಲ್ಲಿ ನೋಡಿದರಲ್ಲಿ ಬಗೆ ಬಗೆಯ ಹೂವುಗಳ ಕಲರವ. ಮೈಮನ ಮರೆಸುವ ಗೂಲಾಬಿಯ ಸೊಬಗು, ಕಣ್ಣಿಗೆ ಕುಕ್ಕುವ ಕನಕಾಂಬರ. ಎತ್ತ ನೋಡಿದರೂ ಸುತ್ತ ಗೋಡೆ ಹೊಂದಿರುವ ದುಂಡು ಮಲ್ಲಿಗೆಯ ವೈಯಾರ. ಘಮಘಮಿಸುವ ಮಲ್ಲಿಗೆ ಮುಡಿಗೆ ಚೆಂದ ಎನ್ನುವವರಿಗೆ ತಾಜ ತಾಜ ಹೊಳೆವ ಮಲ್ಲಿಗೆ. ಸಾಮಾನ್ಯ ಜನರ ಕೈಗೆ ಸರಳವಾಗಿ ಸಿಗುವ ಸೇವಂತಿಗೆ. ಕೆಂಡದಂತೆ ಕೋಪಿಸಿಕೊಳ್ಳುವವರಿಗೆ ಆತ್ಮೀಯ ಸ್ನೇಹಿತ ಕೆಂಡಸಂಪಿಗೆ, ದೇವರ ಮುಡಿಗಾಗಿಯೇ ಕಾಯುತ್ತಿರುವ ನಾನಾ ಬಗೆಯ ಹೂವು ಹೀಗೆ ವೈವಿದ್ಯಮಯವಾದ ಹೂವುಗಳು ಇಲ್ಲಿ ದೂರೆಯುವವು.
ಹೂವುಗಳು ಹೆಣ್ಣಿನ ಸೌಂದರ್ಯವನ್ನು ವರ್ಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಹಬ್ಬ, ಹುಣ್ಣಿಮೆ, ಜಾತ್ರೆ ಸಂದರ್ಭದಲ್ಲಂತು ಹೂವುಗಳ ಪಾತ್ರ ಬಹಳ ಮುಖ್ಯ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಂತು ಗಾಂಧಿ ಬಜಾರ್ ವೈವಿಧ್ಯಮಯವಾದ ಹೂವುಗಳಿಂದ ಕಂಗ್ಗೊಳಿಸುತ್ತಿರುತ್ತದೆ. ಮದುವೆ ಮಾಲೆ, ಮುತ್ತೈದೆಯರಿಗೆ ಮುಡಿಗೆ ದಂಡಿ, ಮದುಮಗಳಿಗೆ ಅಲಂಕಾರಿಕ ಮಲ್ಲಿಗೆಯ ಆಭರಣಗಳು ಯಾವುದೇ ಸಮಯದಲ್ಲೂ ಹೋದರು ಸಿಗುವವು.
ಮೊಗ್ಗಿನ ಜಡೆ: ಗಾಂಧಿ ಬಜಾರ್‌ನ ಪ್ಲವರ್ ಮಾರುಕಟ್ಟೆ ವಿಧ ವಿಧದ ಮೊಗ್ಗಿನ ಜಡೆಗಳಿಂದಲೇ ಮತ್ತಷ್ಟು ಆಕರ್ಷಿತವಾಗಿದೆ. ಬಿಳಿಯ ಮಲ್ಲಿಗೆಯ ಹೂವುಗಳ ನಡುವೆ ಕೆಂಪು ಗುಲಾಬಿ, ಮಲ್ನಾಡ ಎಲೆಯ ಹಾಗೂ ಸೇವಂತಿಯ ವ್ಯಾಸಗಳಿಂದ ಕೂಡಿದ ಮೊಗ್ಗಿನ ಜಡೆ ಮದುಮಗಳ ಮದುವೆಯ ಸಂಭ್ರಮಕ್ಕೆ ಕಳೆ ನೀಡಿವೆ.
-ಲಕ್ಷ್ಮೀ ಬಾಗಲಕೋಟಿ
ವಿಜಯಪುರ