Advertisement

ಬಗೆ ಬಗೆ ಖಾದ್ಯ

03:30 PM Dec 01, 2018 | |

ಬೂದುಗುಂಬಳದ ಹಲ್ವ
ಬೇಕಾಗುವ ಸಾಮಗ್ರಿ

ಬೀಜ ತೆಗೆದ ಕುಂಬಳಕಾಯಿ ತುರಿ- 1ಕಪ್‌, ಹೆರೆದ ಉಂಡೆ ಬೆಲ್ಲದ ಪುಡಿ- 1 ಕಪ್‌, ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ತುಪ್ಪ.

Advertisement

ಮಾಡುವ ವಿಧಾನ
ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ. ನಂತರ, ತುಪ್ಪದ ಜಿಡ್ಡಿಗೆ ಹೆರೆದ ಉಂಡೆ ಬೆಲ್ಲದ ಪುಡಿಯನ್ನು ಏಲಕ್ಕಿ ಪುಡಿಯೊಂದಿಗೆ ಹಾಕಿ ಬೆಚ್ಚಗಾಗಿಸಿ, ಅದಕ್ಕೆ ಕುಂಬಳಕಾಯಿ ತುರಿಯನ್ನು ಬೆರೆಸಿ ಸಣ್ಣ ಉರಿಯಲ್ಲಿ ಬೇಯಿಸಿ. ಕುಂಬಳಕಾಯಿ ತುರಿಯಲ್ಲಿ ನೀರಿನಂಶ ಇರುವುದರಿಂದ ಬೇರೆ ನೀರಿನ ಅಗತ್ಯ ಇರುವುದಿಲ್ಲ. ಸ್ವಲ್ಪ ಮೇಲು¤ಪ್ಪ ಹಾಕಿ ಮಗುಚುತ್ತಿರಿ. ಆ ಮಿಶ್ರಣ ಪಾತ್ರೆಯನ್ನು ಬಿಟ್ಟು ಬರುತ್ತಿದೆಯೆಂದರೆ ಹಲ್ವಾ ಸಿದ್ಧವಾದಂತೆ. ತುಪ್ಪ ಹಚ್ಚಿದ ಇನ್ನೊಂದು ಪಾತ್ರೆಗೆ ಈ ಮಿಶ್ರಣವನ್ನು ವರ್ಗಾಯಿಸಿ, ಹುರಿದ ದ್ರಾಕ್ಷಿ ಗೋಡಂಬಿಗಳನ್ನು ಸೇರಿಸಿದರೆ ಸ್ವಾದಿಷ್ಟ ಹಲ್ವಾ ಸಿದ್ಧ.

ಜಾಮೂನು 
ಬೇಕಾಗುವ ಸಾಮಗ್ರಿ:
ಜಾಮೂನು ಮಿಶ್ರಣ, ಬೆಲ್ಲದ ಪುಡಿ, ಏಲಕ್ಕಿ ಪುಡಿ.

ಮಾಡುವ ವಿಧಾನ: ಬೆಲ್ಲದ ಪುಡಿಗೆ ಸಮಪ್ರಮಾಣದ ನೀರು ಹಾಕಿ ಕರಗಿಸಿ, ಮಧ್ಯಮ ಉರಿಯಲ್ಲಿ ಬುರುಗು ಬರುವಷ್ಟು ಸಮಯ ಕುದಿಸಿ. ಹಾಗೆ ತಯಾರಾದ ಬೆಲ್ಲದ ದ್ರಾವಣವನ್ನು ಶೋಧಿಸಿ, ಅದನ್ನು ಬೇರೆ ಪಾತ್ರೆಗೆ ವರ್ಗಾಯಿಸಿ. ಪರಿಮಳಕ್ಕೆ ಏಲಕ್ಕಿ ಪುಡಿ ಸೇರಿಸಿ. ಅನಂತರ, ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಬಿಟ್ಟು, ಜಾಮೂನು ಮಿಶ್ರಣವನ್ನು ತುಸು ನೀರು ಹಾಕಿ, ನಾದದೇ, ಮೃದುವಾಗಿ ಕಲೆಸಿಟ್ಟುಕೊಳ್ಳಿ. ಅಂಗೈಗೆ ತುಪ್ಪ ಸವರಿಕೊಂಡು, ಕಲಸಿಟ್ಟ ಹಿಟ್ಟನ್ನು ಸ್ವಲ್ಪ ತೆಗೆದು ಕೊಂಡು ಸಣ್ಣ ಉಂಡೆ/ಬೇಕಾದ ಆಕಾರ ಮಾಡಿಕೊಂಡು ಕಾದಿರುವ ಎಣ್ಣೆಯಲ್ಲಿ ಬಿಡಿ. (ಉರಿ ಹೆಚ್ಚಿಸಿದರೆ ಜಾಮೂನಿನ ಹೊರಭಾಗ ಕಂದು ಬಣ್ಣವಾಗಿ ಒಳಗೆ ಬೇಯದಿರುವ ಸಾಧ್ಯತೆ ಇದೆ) ಬಿಳಿಯ ಉಂಡೆಗಳು ಹೊಂಬಣ್ಣಕ್ಕೆ ತಿರುಗಿದಾಗ ತೆಗೆದು ಬದಿಗಿಟ್ಟುಕೊಳ್ಳಿ. ಮುಂದಿನ ಜಾಮೂನುಗಳ ಉಂಡೆ ತಯಾರಿಸಿ ಎಣ್ಣೆಯಲ್ಲಿ ಬೇಯಲು ಬಿಟ್ಟ ಅನಂತರ ತೆಗೆದಿರಿಸಿದ ಜಾಮೂನುಗಳನ್ನು (ಜಾಮೂನನ್ನು ಮುರಿದು ನೋಡಿದಾಗ ಮೇಲಿನ ಪದರ ತುಸು ಗರಿಗರಿ ಹಾಗೂ ಒಳಗಿನ ತಿರುಳು ಮೃದುವಾಗಿ ಸಂಪೂರ್ಣ ಬೆಂದಿರುವುದನ್ನು ಕಾಣಬಹುದು) ಬೆಲ್ಲದ ದ್ರಾವಣಕ್ಕೆ ಒಂದೊಂದಾಗಿ ಹಾಕಿ, ಸಿಹಿ ಹೀರಲು ಬಿಡಿ. 15-20 ನಿಮಿಷ ಸಿಹಿಯಲ್ಲಿ ಅದ್ದಿದ, ಬಿರುಕಿಲ್ಲದಂತೆ ಕಾಣಿಸುವ ಜಾಮೂನು ರುಚಿಕರವಾಗಿ ಇರುತ್ತದೆ.

ಬ್ರೆಡ್‌ ಪಕೋಡ 
ಬೇಕಾಗುವ ಸಾಮಗ್ರಿ
ಬ್ರೆಡ್‌- 1 ಪೌಂಡ್‌, ಕಡ್ಲೆ ಹಿಟ್ಟು- 1 ಕಪ್‌, ಜೀರಿಗೆ 1ಚಮಚ, ಆಲೂಗಡ್ಡೆ-4, ಇಂಗು-ಸ್ವಲ್ಪ, ಉದ್ದಿನಬೇಳೆ- 1ಚಮಚ, ಸಾಸಿವೆ -1 ಚಮಚ, ಕರಿಬೇವು-ಒಗ್ಗರಣೆಗೆ, ಅರಿಶಿಣ ಪುಡಿ -1/2ಚಮಚ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಕರಿಯಲು. 

Advertisement

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಕಡ್ಲೆ ಹಿಟ್ಟು, ಉಪ್ಪು , ಜೀರಿಗೆ ಮತ್ತು 1ಕಪ್‌ ನೀರನ್ನು ಹಾಕಿ, ಆ ಮಿಶ್ರಣವನ್ನು ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಆಲೂಗಡ್ಡೆಯನ್ನು ಕುಕ್ಕರ್‌ನಲ್ಲಿ ಬೇಯಿಸಿ, ಚೆನ್ನಾಗಿ ಹಿಸುಕಿಕೊಳ್ಳಿ. ಒಗ್ಗರಣೆಗೆ ಎಣ್ಣೆ, ಉದ್ದಿನಬೇಳೆ, ಸಾಸಿವೆ, ಕರಿಬೇವು, ಅರಿಶಿಣ ಪುಡಿ, ಇಂಗು ಹಾಕಿ, ಒಗ್ಗರಣೆಯನ್ನು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಿಚುಕಿದ ಆಲೂಗಡ್ಡೆಗೆ ಹಾಕಿ ಚೆನ್ನಾಗಿ ಕಲಸಿ. ಅನಂತರ, ಒಂದೊಂದು ಬ್ರೆಡ್‌ಅನ್ನು ತ್ರಿಕೋನಾಕಾರವಾಗಿ ಎರಡು ತುಂಡುಗಳಾಗಿ ಕತ್ತರಿಸಿ, ಒಂದು ಬ್ರೆಡ್‌ ತುಂಡಿಗೆ ಆಲೂಗಡ್ಡೆ ಮಿಶ್ರಣ ಹಾಕಿ, ಇನ್ನೊಂದು ಬ್ರೆಡ್‌ ತುಂಡಿನಿಂದ ಮುಚ್ಚಿ. ಅದನ್ನು, ಕಡ್ಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ತೆಗೆದು, ಕಾಯಿಸಿದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿದು ತೆಗೆಯಿರಿ.

Advertisement

Udayavani is now on Telegram. Click here to join our channel and stay updated with the latest news.

Next