Advertisement
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಹೆಬ್ರಿ ರಸ್ತೆಯಲ್ಲಿ ವರಂಗ ಎಂಬ ಪುಟ್ಟ ಹಳ್ಳಿಯಲ್ಲಿದೆ. ಇಲ್ಲಿ ಕಾಲಿಟ್ಟರೆ ಸ್ವರ್ಗ. ಪಶ್ಚಿಮಘಟ್ಟದ ಹಸಿರ ಸೆರಗಿನ ಮಧ್ಯದಲ್ಲಿ ನಳನಳಿಸುತ್ತಿರುವ ಗದ್ದೆ ತೋಟಗಳ ನಡುವಲ್ಲೊಂದು ವಿಶಾಲ ಕೆರೆ, ಅದರಲ್ಲಿ ಪದ್ಮಾವತಿ ದೇವಿಯ ಬಸದಿ ಇದೆ. ಸುತ್ತಲೂ ಪ್ರಕೃತಿ ಪ್ರಿಯರ ಮನಸ್ಸನ್ನು ಸೊರೆಗೊಳಿಸುವಷ್ಟು ಚೆಲುವು. ಕೆರೆಯಲ್ಲಿ ತುಂಬಿರುವ ನೀರಿನ ಮಧ್ಯೆ ಬೆಳೆದಿರುವ ತಾವರೆಯ ಹೂವುಗಳ ಮೇಲೆಯೇ ಬಸದಿ ನಿಂತಿದೆಯೇನೋ ಎನಿಸುತ್ತದೆ. ಬಸದಿ ಸುಮಾರು ಹದಿನಾಲ್ಕರಿಂದ ಹದಿನೈದು ಎಕರೆ ವಿಸ್ತಾರದಲ್ಲಿದೆ. ಕೆರೆ, ನಕ್ಷತ್ರಾಕೃತಿಯ ಚತುರ್ಮುಖದಲ್ಲಿರುವುದೇ ವಿಶೇಷ.
ಈ ಬಸದಿಯನ್ನು ತಲುಪಬೇಕೆಂದರೆ ಇರುವ ಏಕೈಕ ವಾಹನ ದೋಣಿ. ಕೆರೆಯಲ್ಲಿ ಹರಡಿರುವ ಕಮಲದ ಹೂವುಗಳನ್ನು ಸೀಳಿಕೊಂಡು ಬಸದಿಯೆಡೆಗೆ ಸಾಗುವುದೇ ರೋಮಾಂಚನ ಅನುಭವ. ದೋಣಿಯಿಂದ ಇಳಿದು ಬಸದಿಯ ಕಟ್ಟೆಯನ್ನು ಹತ್ತಿ ನೋಡಿದರೆ ಸುತ್ತಲೂ ಅಗಾಧ ಜಲರಾಶಿ, ಸಮುದ್ರದ ಮಧ್ಯ ನಿಂತಾಗ ಕಾಡುವ ಏಕಾಂಗಿತನದ ಅನುಭವ, ಇಲ್ಲೂ ಆಗುತ್ತದೆ. ಐದು ಸೆಂಟ್ಸ್ ಜಾಗದಲ್ಲಿ ಮಂಟಪದಂತೆ ವಿಶಿಷ್ಟವಾಗಿ ನಿರ್ಮಿಸಿರುವ ಬಸದಿಯು ತನ್ನ ಒಡಲಾಳದಲ್ಲಿ ಹಲವಾರು ವೈಶಿಷ್ಟ್ಯಗಳನ್ನು ತುಂಬಿಕೊಂಡಿದೆ. ಜೈನ ಧರ್ಮದ ತೀರ್ಥಂಕರರಾದ ಪಾರ್ಶ್ವನಾಥ, ನೇಮಿನಾಥ, ಶಾಂತಿನಾಥ ಮತ್ತು ಅನಂತನಾಥರ ವಿಗ್ರಹಗಳು ಕರಿಶಿಲೆಯಲ್ಲಿ ಖಡ್ಗಾಸನ ಭಂಗಿಯಲ್ಲಿ ಕೆತ್ತಲ್ಪಟ್ಟಿದೆ.
Related Articles
Advertisement
ಹನ್ನೆರಡನೆ ಶತಮಾನದ್ದುಈ ಬಸದಿ ನಿರ್ಮಾಣವಾಗಿದ್ದು 12ನೇ ಶತಮಾನದಲ್ಲಿ. ಕೆರೆಯನ್ನು ಆಳುಪ ಮನೆತನದ ರಾಣಿ ಜಾಕಲೀದೇವಿ ನಿರ್ಮಿಸಿದ್ದಾಳೆ ಎಂದು ಇತಿಹಾಸ ಹೇಳುತ್ತದೆ. ಇದು ಜೈನರ ಪವಿತ್ರ ಕ್ಷೇತ್ರವಾಗಿದ್ದರೂ, ಅನ್ಯಧರ್ಮಿಯರೂ ಪೂಜೆ, ಸೇವೆಯನ್ನು ಸಲ್ಲಿಸುತ್ತಾರೆ. ಅಪಾರ ಜಲರಾಶಿಯ ಮಧ್ಯೆ ವಿರಾಜಮಾನಳಾಗಿರುವ ಪದ್ಮಾವತಿ ದೇವಿಯು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆ ಇದೆ. ಮದುವೆಯಾಗಲು ಹರಕೆ ಕಟ್ಟಿಕೊಳ್ಳಲು, ಮದುವೆಯಾದ ಹೊಸ ಜೋಡಿ ಮೊದಲ ಪೂಜೆ ಸಲ್ಲಿಸಲು ಈ ಬಸದಿಗೆ ಬರುತ್ತಾರೆ. ಇಲ್ಲಿನ ಇನ್ನೊಂದು ವಿಶೇಷ ಎಂದರೆ, ಹರಕೆಯಿಂದ ಸಂಗ್ರಹಿಸುವ ಅಷ್ಟೂ ಅಕ್ಕಿ, ಹುರುಳಿಗಳನ್ನು ಈ ಕೆರೆಯ ಮೀನುಗಳಿಗೆ ಆಹಾರವಾಗಿ ನೀಡುತ್ತಾರೆ. ಅಕ್ಕಿ, ಹುರುಳಿಗಳನ್ನು ಹಾಕಿದಾಗ ಆಹಾರಕ್ಕಾಗಿ ನಡೆಯುವ ಮೀನುಗಳ ಪೈಪೋಟಿಯನ್ನು ನೋಡುವುದೇ ಅಂದ. ಬಸದಿಯು ಪಕ್ಕದಲ್ಲೆ ವರಂಗ ತೀರ್ಥವೆಂಬ ನೀರಿನ ಸೆಲೆ ಇದೆ. ಇದುವೇ ಕೆರೆಯ ನೀರಿನ ಮೂಲ. ಪ್ರತಿದಿನ ಬಸದಿಯಲ್ಲಿ ಬೆಳಗ್ಗೆ 5.30 ರಿಂದ ಸಂಜೆಯೊಳಗೆ ಮೂರು ಪೂಜೆಗಳು ನಡೆಯುತ್ತವೆ. ಜೈನ ವಾಸ್ತುಶಿಲ್ಪದಲ್ಲಿ ಒಟ್ಟು ನಾಲ್ಕು ಪ್ರಕಾರಗಳಿವೆ. ಇವುಗಳಲ್ಲಿ ಏಕಶಿಲಾ ವಿಗ್ರಹಗಳು, ಮಾನಸ್ತಂಭ, ಬಸದಿಗಳು, ಸಮಾಧಿಗಳ ಪೈಕಿ ಮಾನಸ್ತಂಭ, ಬಸದಿಗಳು ಮತ್ತು ಸಮಾಧಿಗಳು ವರಂಗದಲ್ಲೇ ಇದೆ. ಬಸದಿಯೊಳಗೆ ನಾಲ್ಕು ಅಡಿ ಎತ್ತರದ ಧ್ಯಾನಸ್ಥ ನೇಮಿನಾಥ ಹಾಗೂ ಚಂದ್ರನಾಥ ಸ್ವಾಮಿಯ ವಿಗ್ರಹಗಳಿವೆ. ಪೂರ್ತಿ ಬಸದಿಯನ್ನು ಕಲ್ಲಿನಿಂದಲೇ ನಿರ್ಮಿಸಿದ್ದು, ಕಪ್ಪು ಕಲ್ಲಿನ ಚಿತ್ತಾರ ಮತ್ತು ಬೆಳಕಿನ ಸಂಯೋಜನೆಯು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಪ್ರವೇಶದ್ವಾರದಲ್ಲಿ 45 ಅಡಿ ಎತ್ತರದ ಮಾನಸ್ತಂಭವಿದ್ದು, ಇದು ಕರಾವಳಿಯ ಅತಿ ಪ್ರಾಚೀನ ಮಾನಸ್ಥಂಭಗಳ ಪೈಕಿ ಮೂರನೇ ಅತಿದೊಡ್ಡ ಸ್ತಂಭ ಎನ್ನುವ ಹೆಗ್ಗಳಿಕೆ ಪಡೆದಿದೆ. ಸಂತೋಷ್ ರಾವ್ ಪೆರ್ಮುಡ ಅರ್ಚಕರೇ ಅಂಬಿಗರು
ಕೆರೆಯ ದಡ ಹಾಗೂ ಬಸದಿಯ ಮಧ್ಯೆ ಸಂಪರ್ಕ ಸೇತುವಾಗಿ ಇರುವ ಏಕೈಕ ಆಸರೆಯೆಂದರೆ ದೋಣಿ ಏನೋ ನಿಜ. ಆದರೆ ದೋಣಿಯನ್ನು ನಡೆಸಲು ಇಲ್ಲಿ ಪ್ರತ್ಯೇಕ ಅಂಬಿಗನಿಲ್ಲ. ಹಾಗಾಗಿ ಬಸದಿಯು ಇಂದ್ರರೇ (ಅರ್ಚಕರು) ಪ್ರಯಾಣಿಕರಿಗೆ ಅಂಬಿಗನಾಗುತ್ತಾರೆ. ಒಬ್ಬರಿರಲಿ, ನೂರು ಜನ ಬರಲಿ ಬೇಸರಿಸಿಕೊಳ್ಳದೇ ಇಂದ್ರರು ಭಕ್ತರನ್ನು ಬಸದಿಗೆ ಕರೆದುಕೊಂಡುಬಂದು, ಪೂಜೆ ಮಾಡಿ, ಪ್ರಸಾದ ನೀಡಿ ವಾಪಸ್ಸು ಕರೆದುಕೊಂಡು ಬಂದು ಬಿಡುತ್ತಾರೆ. ಮಳೆ, ಗಾಳಿ, ಬಿಸಿಲು ಚಳಿ ಎನ್ನದೇ, ಬೇಸರಿಸದೇ ನಗುಮುಖದೊಂದಿಗೆ ದೋಣಿಯನ್ನು ಮುನ್ನಡೆಸುತ್ತಾರೆ. ಮಧ್ಯಪ್ರದೇಶದಲ್ಲಿ ಬಿಟ್ಟರೆ ಇಂಥ ಎರಡನೆಯ ಕೆರೆ ಬಸದಿ ಇರುವುದು ಕರ್ನಾಟಕದ ಈ ವರಂಗದಲ್ಲಿ ಮಾತ್ರ. ಈ ಬಸದಿಗೆ ಪ್ರಾರಂಭದಲ್ಲಿ ಸೇತುವೆಯನ್ನು ನಿರ್ಮಿಸುವ ಪ್ರಸ್ತಾವನೆ ಇತ್ತಾದರೂ, ಇದರ ಮೂಲ
ಸೌಂದರ್ಯಕ್ಕೆ ಧಕ್ಕೆಯಾಗುವುದೆಂಬ ಕಾರಣಕ್ಕೆ ಆ ಪ್ರಸ್ತಾವನೆಯನ್ನು ಕೈಬಿಟ್ಟಿದ್ದಾರೆ. ಬೆಟ್ಟಕ್ಕೆ ಚಾರಣ
ಕೆರೆಯ ಸಮೀಪದಲ್ಲೇ ಬೆಟ್ಟವಿದೆ. ಅಲ್ಲಿ ಬೇಡ ರಾಜನ ಅರಮನೆಯ ಅವಶೇಷಗಳಿವೆ. ಇದನ್ನು ನೋಡಲು ಚಾರಣ ಮಾಡಬೇಕಾಗುತ್ತದೆ. ಪ್ರತಿ ಎಳ್ಳಮವಾಸ್ಯೆಯ ದಿನ ಇಲ್ಲಿನ ಕುಂದಾದ್ರಿ ತೀರ್ಥದಲ್ಲಿ ತಲೆಯೊಡ್ಡಿ ತೀರ್ಥಸ್ನಾನ ಮಾಡಬಹುದು. ಸಂತೋಷ್ ರಾವ್ ಪೆರ್ಮುಡ ಚಿತ್ರ : ಆಸ್ಟ್ರೋ ಮೋಹನ್