ವಾರಾಣಸಿ: ಉತ್ತರಪ್ರದೇಶದಲ್ಲಿ ಕೊನೆಯ ಹಂತದ ಮತದಾನ ಮಾ.7ಕ್ಕೆ ನಡೆಯಲಿದೆ. ವಾರಾಣಸಿ ಸೇರಿದಂತೆ 9 ಜಿಲ್ಲೆಗಳ 54 ವಿಧಾನಸಭಾ ಕ್ಷೇತ್ರಗಳಿಗೆ ಆ ದಿನ ಹಕ್ಕು ಚಲಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ರೋಡ್‌ಶೋ ನಡೆಸಿದರು.
ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅವರು ರೋಡ್‌ಶೋಗೆ ಚಾಲನೆ ನೀಡಿದರು.
ರೋಡ್ ಶೋ ಸಂದರ್ಭದಲ್ಲಿ ರಸ್ತೆಯ ಇಕ್ಕೆಲೆಗಳಲ್ಲಿಯೂ ನೆರೆದಿದ್ದ ಸಾರ್ವಜನಿಕರು “ಜೈ ಶ್ರೀರಾಮ್’ ಮತ್ತು “ಹರ ಹರ ಮಹಾದೇವ’ ಎಂಬ ಘೋಷಣೆ ಕೂಗಿದರು. ಸುಮಾರು ಮೂರು ಕಿಲೋಮಿಟರ್‌ಗಳ ಕಾಲ ಅವರು ರೋಡ್ ಶೋ ನಡೆಸಿದರು. ಕೇಸರಿ ಬಣ್ಣದ ಟೋಪಿ, ಮತ್ತು ಶಾಲು ಧರಿಸಿದ್ದ ಪ್ರಧಾನಿ, ವಾರಾಣಸಿ ನಗರ ವ್ಯಾಪ್ತಿಯ 3 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ದಾರೆ. ಶನಿವಾರ ಅವರು ತಮ್ಮ ಪ್ರಚಾರ ಮುಕ್ತಾಯಗೊಳಿಸಲಿದ್ದಾರೆ.
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಶುಕ್ರವಾರ ವಾರಾಣಸಿಗೆ ಭೇಟಿ ನೀಡಿದರು. ಅವರು ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಧಾನಿಯವರು ಸುಳ್ಳು ಹೇಳುವ ಮೂಲಕ ಮತಯಾಚಿಸುತ್ತಿದ್ದಾರೆ ಎಂದು ದೂರಿದರು.