Advertisement

ಜ್ಞಾನವಾಪಿಯೊಳಗೆ ಪೂಜೆಗೆ ಅವಕಾಶ: ಹೈಕೋರ್ಟ್‌ ಮೆಟ್ಟಿಲೇರಲು ಮುಸ್ಲಿಂ ಕಕ್ಷಿದಾರರ ಸಿದ್ಧತೆ

05:22 PM Jan 31, 2024 | Team Udayavani |

ಲಕ್ನೋ: ಜ್ಞಾನವಾಪಿ ಮಸೀದಿಯೊಳಗಿನ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ವಾರಾಣಸಿ ಜಿಲ್ಲಾ ಕೋರ್ಟ್‌ ಬುಧವಾರ(ಜನವರಿ 31) ಅವಕಾಶ ಕಲ್ಪಿಸಿಕೊಡುವ ಮೂಲಕ ಹಿಂದೂ ಪರ ಕಕ್ಷಿದಾರರಿಗೆ ಕಾನೂನು ಹೋರಾಟದಲ್ಲಿ ದೊಡ್ಡ ಜಯ ಸಿಕ್ಕಂತಾಗಿದೆ.

Advertisement

ಇದನ್ನೂ ಓದಿ:Tollywood: ಅನಾರೋಗ್ಯ ಕಾರಣದಿಂದ ಸಿನಿಮಾದಿಂದ ಬ್ರೇಕ್‌ ಪಡೆಯಲು ಪ್ರಭಾಸ್‌ ನಿರ್ಧಾರ?

ಏಳು ದಿನದೊಳಗೆ ಜಿಲ್ಲಾಡಳಿತ ಪೂಜೆ ನಡೆಸಲು ಅಗತ್ಯವಿರುವ ಸಿದ್ಧತೆ ಮಾಡಿಕೊಡಲಿದೆ. ಇನ್ನು ಏಳು ದಿನದಲ್ಲಿ ಜ್ಞಾನವಾಪಿ ನೆಲಮಾಳಿಗೆಯಲ್ಲಿ ಪೂಜೆ ಆರಂಭಗೊಳ್ಳಲಿದೆ. ಇಲ್ಲಿ ಪೂಜೆ ಸಲ್ಲಿಸಲು ಪ್ರತಿಯೊಬ್ಬರಿಗೂ ಅವಕಾಶ ಇದೆ ಎಂದು ಹಿಂದೂ ಪರ ವಕೀಲರಾದ ವಿಷ್ಣು ಶಂಕರ್‌ ಜೈನ್‌ ತಿಳಿಸಿರುವುದಾಗಿ ನ್ಯೂಸ್‌ ಏಜೆನ್ಸಿ ಎಎನ್‌ ಐ ತಿಳಿಸಿದೆ.

ಹೈಕೋರ್ಟ್‌ ಮೆಟ್ಟಿಲೇರಲು ಮುಸ್ಲಿಂ ಕಕ್ಷಿದಾರರ ಸಿದ್ಧತೆ:

ಜ್ಞಾನವಾಪಿ ಮಸೀದಿಯೊಳಗಿನ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ವಾರಾಣಸಿ ಕೋರ್ಟ್‌ ಅನುಮತಿ ನೀಡಿದ್ದು, ಮತ್ತೊಂದೆಡೆ ವಾರಾಣಸಿ ಜಿಲ್ಲಾ ಕೋರ್ಟ್‌ ನ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಲು ಮುಸ್ಲಿಂ ಕಕ್ಷಿದಾರರು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.

Advertisement

31 ವರ್ಷದ ಬಳಿಕ ಪೂಜೆಗೆ ಅವಕಾಶ:

ಮುಚ್ಚಿರುವ ಹತ್ತು ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು 31 ವರ್ಷಗಳ ಬಳಿಕ ಹಿಂದೂಗಳಿಗೆ ಅವಕಾಶ ಸಿಕ್ಕಂತಾಗಿದೆ. ಅರ್ಚಕ ಸೋಮನಾಥ್‌ ವ್ಯಾಸ್‌ ಅವರು 1993ರ ಡಿಸೆಂಬರ್‌ ವರೆಗೆ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸುತ್ತಿದ್ದರು. ನಂತರ ಅಧಿಕಾರಿಗಳು ನೆಲಮಹಡಿಯ ಹತ್ತು ಸೆಲ್ಲರ್‌ ಗಳನ್ನು ಮುಚ್ಚಿದ್ದ ಬಳಿಕ ಪೂಜೆ ನಿಂತಿತ್ತು. ಇದೀಗ 31 ವರ್ಷದ ನಂತರ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ದೊರಕಿದೆ.

ಏತನ್ಮಧ್ಯೆ ಕಾಶಿ ವಿಶ್ವನಾಥ್‌ ಟ್ರಸ್ಟ್‌ ಅರ್ಚಕರನ್ನು ನೇಮಿಸುವಂತೆ ಕೋರ್ಟ್‌ ಸೂಚನೆ ನೀಡಿದೆ. ಖಾಲಿ ಕೋಣೆಯಲ್ಲಿರುವ ಮೂರ್ತಿಗಳಿಗೆ ಪೂಜೆ ಸಲ್ಲಿಸಬಹುದಾಗಿದೆ ಎಂದು ಕೋರ್ಟ್‌ ತಿಳಿಸಿದೆ.

ಇತ್ತೀಚೆಗಷ್ಟೇ ಜ್ಞಾನವಾಪಿ ಮಸೀದಿಯ ಆವರಣದೊಳಗೆ ವೈಜ್ಞಾನಿಕ ಸಮೀಕ್ಷೆ ನಡೆಸಲು ಕೋರ್ಟ್‌ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ವೈಜ್ಞಾನಿಕ ಸಮೀಕ್ಷೆ ಕೈಗೊಂಡು ವರದಿಯನ್ನು ಸುಪ್ರೀಂಕೋರ್ಟ್‌ ಗೆ ಸಲ್ಲಿಸಿತ್ತು. ಹಿಂದೆ ಇದ್ದ ಹಿಂದೂ ದೇವಾಲಯವನ್ನು ಧ್ವಂಸಗೊಳಿಸದೇ ದೇವಾಲಯವನ್ನೇ ಮಸೀದಿಯನ್ನಾಗಿ ಪರಿವರ್ತಿಸಲಾಗಿತ್ತು ಎಂದು ಸಮೀಕ್ಷೆ ವೇಳೆ ಪುರಾತತ್ವ ಇಲಾಖೆ ಪತ್ತೆ ಹಚ್ಚಿರುವುದಾಗಿ ವರದಿಯ ಅಂಶಗಳು ಬಹಿರಂಗವಾಗಿತ್ತು. ಈ ನಿಟ್ಟಿನಲ್ಲಿ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ನೀಡಬೇಕೆಂದು ಕೋರಿ ಹಿಂದೂ ಪರ ಕಕ್ಷಿದಾರರು ಕೋರ್ಟ್‌ ಮೊರೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next