Advertisement
ಲಕ್ಷ್ಮೀದೇವಿ ಅಂದರೆ ಸಿರಿಯ ಅಧಿದೇವಿ. ಆಕೆಯ ಅರ್ಚನೆ, ಪೂಜೆಗಳಿಂದ ಸಕಲ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ ಸಾರ್ವತ್ರಿಕವಾಗಿದೆ. ವಿಜೃಂಭಣೆಯಿಂದ ಉಳ್ಳವರು ಆಚರಿಸಿದರೆ, ಸರಳವಾಗಿ, ಸಾಮೂಹಿಕವಾಗಿ ಆಚರಿಸಿ ದೇವಿಯ ಕೃಪೆಗೆ ಭಾಜನರಾಗುವವರು ಧಾರಾಳವಾಗಿದ್ದಾರೆ.
Related Articles
Advertisement
ಲೋಕದ ಭಕ್ತರ ಸುಖ-ಸಂತೋಷ ಹೆಚ್ಚಿಸಲು ಒಳ್ಳೆಯ ವ್ರತವೊಂದನ್ನು ತಿಳಿಸಬೇಕು ಎಂದು ಪಾರ್ವತೀದೇವಿ ಪರಮೇಶ್ವರನಲ್ಲಿ ಬೇಡಿಕೊಂಡಾಗ ಶಿವನು ಉಪದೇಶಿಸಿದ ವ್ರತ ಇದೇ ವರಮಹಾಲಕ್ಷ್ಮೀವ್ರತ. ಸ್ತ್ರೀ-ಪುರುಷರೆಂಬ ಭೇದ, ಬಡವ ಬಲ್ಲಿದರೆಂಬ ಅಂತರ ಮೇಲು, ಕೀಳು ಎಂಬ ಭಾವನೆ ಇಲ್ಲದೆ ಸರ್ವ ಭಕ್ತರೂ ಆಚರಿಸಬಹುದಾದ ಈ ವ್ರತ ಭಕ್ತರ ಮನೋಭಿಷ್ಟವನ್ನು ಈಡೇರಿಸುತ್ತದೆ. ಮುಂದೆ ಶೌನಕಾದಿ ಮುನಿಗಳು, ಸೂತ ಪುರಾಣಿಕರ ಮೂಲಕ ನಾಡಿನ ಎಲ್ಲೆಡೆ ವರಮಹಾಲಕ್ಷ್ಮೀ ವ್ರತವನ್ನು ಭಕ್ತಿಭಾವದಿಂದ ಆಚರಿಸತೊಡಗಿದರು.
ಸಾಮೂಹಿಕವಾಗಿ ಮಾಡುವ ಪೂಜೆ, ಅರ್ಚನೆಗಳಲ್ಲಿ ವಿಶೇಷವಾದ ಶಕ್ತಿ ಇದೆ. ಅಲ್ಲಿ ದೇವತಾ ಸಾನ್ನಿಧ್ಯವಿರುತ್ತದೆ. ಯಾವುದೇ ಭೇದ-ಭಾವಗಳಿಲ್ಲದೆ ಎಲ್ಲರೂ ಒಟ್ಟಾಗಿ ನಿಜಭಕ್ತಿಯಿಂದ ಮಾಡುವ ದೇವತಾಕಾರ್ಯಗಳಲ್ಲಿ ದೇವತಾನುಗ್ರಹವಾಗುತ್ತದೆ. ಅದ್ದೂರಿ, ಆಡಂಬರ, ವೈಭವದ ಪ್ರದರ್ಶನಕ್ಕಿಂತಲೂ ಭಕ್ತಿಪೂರ್ವಕವಾಗಿ ಭಗವಂತನಿಗೆ ಒಂದು ತುಳಸೀದಳ ಅರ್ಪಿಸಿದರೆ ಅವನು ಪ್ರಸನ್ನವಾಗಿ ಒಲಿಯುತ್ತಾನೆ. ಸಂತತಿಯೇ ಇಲ್ಲದ ದಂಪತಿ ಒಂದು ಸಂತಾನಕ್ಕಾಗಿ ತಮ್ಮೆಲ್ಲ ಆರ್ಥಿಕ ಸಂಪತ್ತನ್ನು ಸಮರ್ಪಿಸಲು ಹಿಂದೆಮುಂದೆ ನೋಡುವುದಿಲ್ಲ. ಹಾಸಿಗೆ ಹಿಡಿದ ರೋಗಿ ತನಗೆ ನಡೆದಾಡುವಂತಾಗಲು ಅದೆಷ್ಟು ವೆಚ್ಚ ಮಾಡಲೂ ಹಿಂಜರಿಯಲಾರ. ಕೋಟಿ ಹೊನ್ನಿಗಿಂತ ಮಿಗಿಲು ಉತ್ತಮ ಸಂತಾನ- ಅದು ಹೆಣ್ಣು ಮಗು ಅಥವಾ ಗಂಡು ಮಗುವೇ ಇರಲಿ. ಅದೇ ಮನೆಯ ಮಾಣಿಕ್ಯ. ಮತಿ ವಿಕಲ್ಪತೆ, ಅಂಗ ವೈಕಲ್ಯ, ಕಾಡುವ ಅನಾರೋಗ್ಯದಿಂದ ಬಸವಳಿದ ಜನರಲ್ಲಿ ವಿಚಾರಿಸಿದರೆ ಉತ್ತಮ ಆರೋಗ್ಯವೇ ದೊಡ್ಡ ಸಂಪತ್ತು. ಮನೆ ಮನೆಗಳಲ್ಲಿ ಬಂಧುಗಳು ಕಳೆದುಕೊಂಡ ಪ್ರೀತಿಪಾತ್ರರು ಮರಳಿ ಸಿಗುವುದಾದರೆ ತಮ್ಮೆಲ್ಲ ಧನ ಸಂಪತ್ತು ವೆಚ್ಚ ಮಾಡಲೂ ಹಿಂಜರಿಯುವುದಿಲ್ಲ. ಬರಿದೇ ಹಣ, ಒಡವೆ, ಮನೆ, ಮಹಲು, ಭೂಮಿಗಾಗಿ ಹಾತೊರೆಯುವ ಬದಲಾಗಿ ಅದಕ್ಕಿಂತ ಸಹಸ್ರ ಪಟ್ಟು ಹೆಚ್ಚಿನ ಮೌಲ್ಯದ ನೆಮ್ಮದಿ, ಆರೋಗ್ಯ ಪೂರ್ಣ, ಸಂತೋಷದ ಕುಟುಂಬ ಜೀವನಕ್ಕಾಗಿ ದೇವರಲ್ಲಿ ಕೈ ಜೋಡಿಸಬಹುದು. ಎಲ್ಲದಕ್ಕಿಂತ ಹೆಚ್ಚಿನ ಮೌಲ್ಯದ ಸಂಪತ್ತು-ದುಡ್ಡು, ಕಾಸು, ಆಭರಣ, ಭೂಮಿಗಿಂತ ಮಿಗಿಲಾಗಿ ಶಾರೀರಿಕ, ಮಾನಸಿಕ ಆರೋಗ್ಯ ಭಾಗ್ಯದ ಬದುಕು, ಕೋಟಿ ಹೊನ್ನಿಗೂ ಹೆಚ್ಚಿನ ಉತ್ತಮ ಸಂಸ್ಕಾರವಂತ ಸಂತಾನ- ಲಕ್ಷ್ಮೀದೇವಿಯ ಅನುಗ್ರಹದಿಂದ ಅದು ಚೆನ್ನಾಗಿದ್ದರೆ ಹಣ, ಒಡವೆ, ಆಸ್ತಿ ಎಲ್ಲ ತಾನಾಗೇ ಹಿಂಬಾಲಿಸುತ್ತದೆ.
– ಕೃಷ್ಣವೇಣಿ ಎಂ.