ಬೀದರ: ಈ ನೆಲದ ಭಾಷಾ ಸೊಗಡನ್ನು ಕಾವ್ಯಕ್ಕೆ ತಂದ ಅಪ್ಪಟ ದೇಸಿ ಕವಿಯೆಂದರೆ ಬೇಂದ್ರೆ. ಅವರ ಕಾವ್ಯದಲ್ಲಿ ಅದಮ್ಯ ಜೀವನ ಪ್ರೀತಿ ಇತ್ತು. ಸಮರಸ ದಾಂಪತ್ಯಕ್ಕೆ ಬೇಂದ್ರೆ ಕಾವ್ಯ ಆದರ್ಶ ಎಂದು ಸಾಹಿತಿ ಡಾ| ಭತಮುರ್ಗೆ ಚಂದ್ರಪ್ಪ ಹೇಳಿದರು.
ನಗರದ ಕರ್ನಾಟಕ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ವರಕವಿ ಡಾ| ದ.ರಾ ಬೇಂದ್ರೆ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯವೆಂದರೆ ನವೋದಯ, ಕವಿ ಎಂದರೆ ಬೇಂದ್ರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಬೇಂದ್ರೆ ಅವರ ಬದುಕು ಬರಹ ಸಾರ್ವಕಾಲೀಕವಾಗಿದ್ದು, ನಮಗೆ ಸದಾ ಸತ್ಪ್ರೇರಣೆಯಾಗಿದೆ. ಸರಳ ಜೀವನಕ್ಕೆ ಹೆಸರಾದ ಬೇಂದ್ರೆಯವರ ಚಿಂತನೆ ನಮ್ಮ ಬದುಕಲ್ಲಿ ಅಳವಡಿಸಿಕೊಂಡರೆ ಇಂಥ ಜಯಂತಿ ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದರು.
ಸಾಹಿತಿ ಸುನಿತಾ ದಾಡಗೆ ಮಾತನಾಡಿ, ಬೇಂದ್ರೆಯವರ ಕವಿತೆ ಅರ್ಥವಾದರೆ ಸರಳ ಬದುಕು ಅರ್ಥವಾಗುತ್ತದೆ. ನಾಕು ತಂತಿ ಎಂಬ ಕಾವ್ಯದ ಮೂಲಕ ಜ್ಞಾನ ಪೀಠ ತಂದುಕೊಟ್ಟ ಕವಿ ಎಂದು ಹೇಳಿದರು.
ಸಾಹಿತಿ ರಮೇಶ ಬಿರಾದಾರ ವೇದಿಕೆಯಲ್ಲಿದ್ದರು. ಸಚಿನ ವಿಶ್ವಕರ್ಮ, ನೆಹರು ಪವಾರ, ಎಂ. ರಾಸೂರ, ವೀರಶೆಟ್ಟಿ ಪಾಟೀಲ, ಗಣೇಶ ಘಂಟಿ ಮೊದಲಾದವರು ಭಾಗವಹಿಸಿದ್ದರು.