Advertisement
ಹೀಗಿರುವಾಗ ಬ್ರಹ್ಮನು ಮನು ಮತ್ತು ಶತರೂಪಾದೇವಿಯರನ್ನು ಸೃಷ್ಟಿಸಿದನು. ಅವರು ವಿನಯದಿಂದ ಬ್ರಹ್ಮದೇವರನ್ನು ಸ್ತುತಿಸಲು ಬ್ರಹ್ಮದೇವರು ಅವರನ್ನು ಕುರಿತು “ತನಗೆ ಸಮಾನವಾದ ಸಂತಾನವನ್ನು ಪಡೆದು ಧರ್ಮದಿಂದ ಪೃಥ್ವಿಯನ್ನು ಪಾಲಿಸುತ್ತಾ, ಯಜ್ಞಗಳ ಮೂಲಕ ಶ್ರೀಹರಿಯನ್ನು ಆರಾಧಿಸಿ” ಎಂದು ಹೇಳಿದರು. ಮನುವು ತನಗೂ , ತನ್ನ ಪ್ರಜೆಗಳಿಗೂ ವಾಸಿಸಲು ಯೋಗ್ಯವಾದ, ಪ್ರಳಯಜಲದಲ್ಲಿ ಮುಳುಗಿರುವ ಭೂಮಿಯನ್ನು ಮೇಲಕ್ಕೆತ್ತಲು ತಾವು ಪ್ರಯತ್ನಿಸಬೇಕು ಎಂದು ಬೇಡಿಕೊಂಡನು.
Related Articles
Advertisement
ಇದನ್ನು ಕೇಳಿ ಭೂದೇವಿಯು ಭಯಗೊಂಡಿರುವುದನ್ನು ಮನಗಂಡ ಭಗವಂತನು ಭೂಮಿಯನ್ನು ಹೊರತಂದು ಅದರ ಕಕ್ಷೆಯಲ್ಲಿಟ್ಟು ಅದರಲ್ಲಿ ತನ್ನ ಆಧಾರಶಕ್ತಿಯನ್ನು ಸ್ಥಾಪಿಸಿದನು. ಆಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ಹಿರಣ್ಯಾಕ್ಷನು ನೋಡುತ್ತಿರುವಂತೆಯೇ ಬ್ರಹ್ಮದೇವನು ಮತ್ತು ದೇವತೆಗಳು ಪ್ರಕಟಗೊಂಡು ಭಗವಂತನನ್ನು ಸ್ತುತಿಸಿ ಪುಷ್ಪವೃಷ್ಟಿಗೈದರು. ಇದರಿಂದ ಸಂತುಷ್ಟನಾದ ವರಾಹರೂಪಿ ಭಗವಂತನು ಶಂಖಚಕ್ರಗದಾಧಾರಿಯಾಗಿ ಶೋಭಿಸುತ್ತಾ, ತನ್ನನ್ನು ಕಟುವಾಕ್ಯಗಳಿಂದ ನಿಂದಿಸುತ್ತಿರುವ ಹಿರಣ್ಯಾಕ್ಷನನ್ನು ಕಂಡು ನಗುತ್ತಾ ” ಎಲವೋ ದೈತ್ಯನೇ, ರಸಾತಳ ನಿವಾಸಿಗಳ ನಿಕ್ಷೇಪದ ಸಂಪತ್ತನ್ನು ಕಸಿದುಕೊಂಡು ನಾಚಿಗೆಗೆಟ್ಟು ನಿನ್ನ ಗದೆಯ ಭಯದಿಂದ ಇಲ್ಲಿಗೆ ಬಂದಿದ್ದೇನೆ ಎಂದು ನೀನು ಹೇಳಿರುವುದು ನಿಜವೇ ! ನಿನ್ನಂತಹ ಅದ್ವಿತೀಯನಾದ ವೀರನ ಮುಂದೆ ಯುದ್ಧದಲ್ಲಿ ಸೆಣಸುವ ಸಾಮರ್ಥ್ಯವು ನನಗೆಲ್ಲಿದೆ ? ಆದರೂ ನಿನ್ನಮುಂದೆ ನಿಂತಿರುವೆನು. ನಿನ್ನಂತಹ ಬಲಶಾಲಿಗಳೊಂದಿಗೆ ವೈರವನ್ನು ಕಟ್ಟಿಕೊಂಡು ಹೋಗುವುದಾದರೂ ಎಲ್ಲಿಗೆ ? ನೀನು ಮಹಾನಾಯಕನಾಗಿರುವೆ…. ಆದ್ದರಿಂದ ಈಗ ಯಾವ ಶಂಕೆಯೂ ಇಲ್ಲದೆ ನನಗೆ ಅನಿಷ್ಟವನ್ನು ಮಾಡಿ ನಿನ್ನ ಪ್ರತಿಜ್ಞೆಯನ್ನು ನೆರವೇರಿಸು ಎಂದು ಯುದ್ಧಕ್ಕೆ ಪರೋಕ್ಷವಾಗಿ ಆಹ್ವಾನಿಸಿದನು.
ಇದನ್ನು ಕೇಳಿದ ಹಿರಣ್ಯಾಕ್ಷನು ಕ್ರೋಧದಿಂದ ವರಾಹರೂಪಿ ಭಗವಂತನಮೇಲೆ ಗದಾಪ್ರಹಾರವನ್ನು ಮಾಡಲು, ಭಗವಂತನು ಅದನ್ನು ತಡೆದು ಹಿರಣ್ಯಾಕ್ಷನಿಗೆ ಪ್ರತಿ ಪ್ರಹಾರವನ್ನು ಮಾಡಿದನು. ಈ ರೀತಿಯಾಗಿ ಇಬ್ಬರ ನಡುವೆ ಭಯಂಕರವಾದ ಯುದ್ಧವು ಪ್ರಾರಂಭವಾಯಿತು. ಇಬ್ಬರು ಬಗೆ ಬಗೆಯ ವರಸೆಗಳನ್ನು ತೋರಿಸತೊಡಗಿದರು. ಅಲ್ಲಿಯೇ ಇದ್ದ ಬ್ರಹ್ಮ ದೇವರು ತಾನು ಹಿರಣ್ಯಾಕ್ಷನಿಗೆ ಕೊಟ್ಟ ವರದ ವಿಚಾರವನ್ನು ತಿಳಿಸುತ್ತಾ, “ಪ್ರಭುವೇ ಲೋಕಕಂಟಕನನ್ನು ಸಂಹಾರಮಾಡುವ ಭಯಂಕರವಾದ ಸಂಧ್ಯಾಕಾಲವು ಬರುವುದರಲ್ಲಿದೆ. ಆ ಸಂಧ್ಯಾಕಾಲದಲ್ಲಿ ಈತನನ್ನು ಸಂಹರಿಸಿ ದೇವತೆಗಳಿಗೆ ಹಾಗೂ ಋಷಿಗಳಿಗೆ ನೆಮ್ಮದಿಯನ್ನು ಕರುಣಿಸು ” ಎಂದು ಬೇಡಿದನು.
ಅದೇ ಸಮಯಕ್ಕೆ ಮಹಾ ಮಾಯಾವಿಯಾದ ಹಿರಣ್ಯಾಕ್ಷನು ಮಾಯೆಗೆ ಅಧಿಪತಿಯಾದ ಶ್ರೀಹರಿಯಮೇಲೆ ಅನೇಕರೀತಿಯ ಮಾಯೆಯನ್ನು ಪ್ರಯೋಗಿಸತೊಡಗಿದನು. ಅದಕ್ಕೆ ಪ್ರತಿಯಾಗಿ ಶ್ರೀಹರಿಯು ತನ್ನದೇ ಪ್ರತಿರೂಪವಾದ ಸುದರ್ಶನ ಚಕ್ರವನ್ನು ಪ್ರಯೋಗಿಸಿ ಆಸುರೀ ಮಾಯೆಯನ್ನು ಅಂತ್ಯಗೊಳಿಸಿದನು. ತನ್ನ ಮಾಯೆಯು ನಾಶವಾದಾಗ ದೈತ್ಯನು ಪುನಃ ಭಗವಂತನ ಬಳಿಗೆ ಬಂದನು. ಇದನ್ನು ಕಂಡು ಕೋಪದಿಂದ ಕೆರಳಿದ ಭಗವಂತನು, ದೇವೇಂದ್ರನು ವೃತ್ರಾಸುರನನ್ನು ಬಡಿದಂತೆ ಹಿರಣ್ಯಾಕ್ಷನ ಕೆನ್ನೆಗೆ ಒಂದು ಪೆಟ್ಟುಕೊಟ್ಟನು. ಸರ್ವಶಕ್ತನಾದ ಭಗವಂತನೇನೋ ಉಪೇಕ್ಷೆಯಿಂದ ಹೊಡೆದಿದ್ದರೂ ಹಿರಣ್ಯಾಕ್ಷನು ಗಿರಗಿರನೆ ಬುಗುರಿಯಂತೆ ತಿರುಗಿ, ಕಣ್ಣಾಲಿಗಳು ಹೊರಬಂದು, ಕೈ ಕಾಲು ಕೂದಲುಗಳು ಛಿನ್ನ ಭಿನ್ನವಾಗಿ ಗತಪ್ರಾಣನಾಗಿ, ಬಿರುಗಾಳಿಯಿಂದ ಬುಡಸಮೇತವಾಗಿ ಉರುಳಿದ ಮಹಾವೃಕ್ಷದಂತೆ ನೆಲಕ್ಕುರುಳಿದನು.
ಇದನ್ನು ಕಂಡ ಬ್ರಹ್ಮಾದಿ ದೇವತೆಗಳು ಪ್ರಭುವೇ , ಜಗತ್ತಿಗೆ ಕಷ್ಟಕೊಡುತ್ತಿದ್ದ ಈ ದೈತ್ಯನ ಸಂಹಾರದಿಂದ ಯಜ್ಞ ಯಾಗಾದಿಗಳನ್ನು ನಿಶ್ಚಿಂತೆಯಿಂದ ಮಾಡಲು ಅನುಕೂಲವಾಯಿತು ಎಂದು ಮತ್ತೊಮ್ಮೆ ಭಗವಂತನ ಲೀಲೆಗಳನ್ನು ಕೊಂಡಾಡಿದರು.
ಪಲ್ಲವಿ