ಕನ್ನಡ ಚಿತ್ರರಂಗಕ್ಕೆ ವರದರಾಜು ಅವರ ಮೊಮ್ಮಗನ ಆಗಮನವಾಗಿದೆ. ಹೆಸರು ಪೃಥ್ವಿ. ಈಗಾಗಲೇ ಚಿತ್ರಕ್ಕೆ ಅದ್ಧೂರಿ ಮುಹೂರ್ತ ಸಮಾರಂಭವೂ ನೆರವೇರಿದೆ. ವರದಣ್ಣ ಅವರ ಮೊಮ್ಮಗ ಅಂದಮೇಲೆ ಅಲ್ಲಿ ಡಾ.ರಾಜ್ ಫ್ಯಾಮಿಲಿ ಇರದಿದ್ದರೆ ಹೇಗೆ? ಮುಹೂರ್ತ ಸಮಾರಂಭಕ್ಕೆ ರಾಜ್ ಕುಟುಂಬ ಸಾಕ್ಷಿಯಾಯಿತು. ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್‌ರಾಜಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಕ್ಯಾಮೆರಾಗೆ ಚಾಲನೆ ನೀಡಿ ಶುಭಹಾರೈಸಿದರು. ಇದಕ್ಕೂ ಮುನ್ನ, ಚಿತ್ರತಂಡದ ಜೊತೆಗೂಡಿದ ಶಿವರಾಜಕುಮಾರ್ ಸಹೋದರರು, ವರದರಾಜ್ ಮತ್ತು ಡಾ.ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ವರದಣ್ಣ ಅವರ ಶಿಸ್ತು, ಶ್ರದ್ಧೆ ಬಗ್ಗೆ ಕೊಂಡಾಡಿದರು. ಅವರ ಮೊಮ್ಮಗ ಸಿನಿಮಾಗೆ ಬರುತ್ತಿರುವುದು ನಮಗೆ ಖುಷಿಯಾಗುತ್ತಿದ್ದು, ನಮ್ಮಂತೆಯೇ
ಪೃಥ್ವಿಯನ್ನೂ ಆಶೀರ್ವದಿಸಿ, ಬೆಳೆಸಬೇಕು ಎಂಬ ಮನವಿ ಇಟ್ಟರು. ಆ ನಂತರ ಚಿತ್ರತಂಡ ಮಾಧ್ಯಮ ಮುಂದೆ ಮಾತುಕತೆಗೆ ಕುಳಿತುಕೊಂಡಿತು.
ಮೊದಲು ಮಾತಿಗಿಳಿದ ನಿರ್ದೇಶಕ ಕುಮಾರ್ ಮಹೇಶ್, “ಇದು ನನ್ನ ಮೂರನೇ ಚಿತ್ರ. ಇದೊಂದು ಮಕ್ಕಳ ಚಿತ್ರ. ಮಿಂಚು ಹುಳು ತನ್ನ ದಾರಿ ಕಂಡುಕೊಳ್ಳಲು ಬೆಳಕು ಹರಿಸಿ ಬದುಕು ಸವೆಸುತ್ತೆ. ಇಲ್ಲಿನ ಪಾತ್ರಕ್ಕೂ ಕೂಡ ಅಂಥದ್ದೇ ಹೋಲಿಕೆ ಇದೆ. ಹಾಗಾಗಿ “ಮಿಂಚು ಹುಳು’ ಶೀರ್ಷಿಕೆ ಇಟ್ಟಿದ್ದೇನೆ. ಪ್ರೀತಂ ಎಂಬ ಬಾಲ ನಟ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾನೆ. ಅವನ ಮನೆಯಲ್ಲಿ ಕರೆಂಟ್ ಇಲ್ಲದೆ ಕತ್ತಲಾವರಿಸಿರುತ್ತೆ. ವ್ಯಕ್ತಿಯೊಬ್ಬರ ಸಹಾಯದಿಂದ ಅವನೇ ಕೆಲ ಉಪಕರಣ ಬಳಸಿ, ವಿದ್ಯುತ್ ಕಂಡು ಹಿಡಿಯುತ್ತಾನೆ. ಆ ನಂತರ ಸಾಧಕನಾಗುತ್ತಾನೆ’ ಅದೇ ಚಿತ್ರದ ಕಥೆ. ಹಳೆಯ ಥಿಯರಿಯನ್ನೇ ಇಲ್ಲಿ ಬಳಸುವ ಮೂಲಕ ಕಥೆಗೊಂದು ಸ್ಪರ್ಶ ಕೊಡಲಾಗಿದೆ. ಅಕ್ಟೋಬರ್ 13 ರಿಂದ ಬೆಂಗಳೂರು, ಕೋಲಾರದಲ್ಲಿ 35 ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಸುವುದಾಗಿ ಹೇಳಿಕೊಂಡರು ನಿರ್ದೇಶಕರು.
ಡಾ.ರಾಜಕುಮಾರ್ ಅವರ ಸಹೋದರ ವರದರಾಜು ಅವರ ಮೊಮ್ಮಗ ಪೃಥ್ವಿ ಈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಯಾಗಿದ್ದಾರೆ. ಸಹಜವಾಗಿಯೇ ಅವರಿಗೆ ಖುಷಿ, ಭಯ ಎರಡೂ ಇದೆ. “ನನಗೆ ಒಳ್ಳೆಯ ಪಾತ್ರ ಮತ್ತು ಕಥೆ ಎನಿಸಿದ್ದರಿಂದ ಚಿತ್ರ ಒಪ್ಪಿಕೊಂಡೆ. ನಾನಿಲ್ಲಿ ಪೇಪರ್ ಏಜೆಂಟ್ ಪಾತ್ರ ಮಾಡುತ್ತಿದ್ದೇನೆ. ಚಿಕ್ಕ ಹುಡುಗನ ಪ್ರತಿಭೆಗೆ ಸಹಕರಿಸುವ ಪಾತ್ರವದು. ಚಿತ್ರರಂಗಕ್ಕೆ ಬರುವ ಮುನ್ನ ಸಾಕಷ್ಟು ತಯಾರಿ ಪಡೆದು ಕೊಂಡು ಬಂದಿದ್ದಾಗಿ’ ಹೇಳಿಕೊಂಡರು ಪೃಥ್ವಿ.
ಚಿತ್ರಕ್ಕೆ ರಾಜ್‌ಗೊಪಾಲ್ ದೊಡ್ಡ ಹುಲ್ಲೂರು ನಿರ್ಮಾಪಕರು. ಅವರಿಗೆ ಒಂದು ಮಕ್ಕಳ ಚಿತ್ರ ಮಾಡುವ ಆಸೆ “ಮಿಂಚು ಹುಳು’ ಮೂಲಕ ಈಡೇರಿದ ಖುಷಿ. ರಾಜ್‌ಭಾಸ್ಕರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎರಡು ಹಾಡುಗಳನ್ನು ಸಂಯೋಜಿಸಿದ್ದು, ಅವು ಕಥೆಗೆ ಪೂರಕವಾಗಿವೆ ಎನ್ನುತ್ತಾರೆ ರಾಜ್‌ಭಾಸ್ಕರ್.
ಬಾಲನಟ ಪ್ರೀತಮ್ ಮೊದಲ ಸಲ ನಟಿಸುತ್ತಿರುವ ಬಗ್ಗೆ ಖುಷಿಪಟ್ಟರು. ಉಳಿದಂತೆ ರಶ್ಮಿ ಶಿಕ್ಷಕಿಯಾದರೆ, ಇಸಾಕ್ ಆಟೋ ಗ್ಯಾರೇಜ್ ಮಾಲೀಕನಾಗಿ, ಪರಶುಮೂರ್ತಿ ಆಟೋ ಚಾಲಕನಾಗಿ ನಟಿಸುತ್ತಿದ್ದಾರೆ. ರಾಘವೇಂದ್ರ ಶಾಸ್ತ್ರಿ ಛಾಯಾಗ್ರಹಣವಿದೆ. ಪುಷ್ಪರಾಜ್ ಸಂಭಾಷಣೆ ಬರೆದಿದ್ದಾರೆ. ಪೃಥ್ವಿ ತಂದೆ ವಿಜಯಕುಮಾರ್ ಸಹ ನಿರ್ಮಾಣವಿದೆ.