Advertisement

ಕನ್ನಡ ಗಟ್ಟಿಗೊಳಿಸುವಲ್ಲಿ  ಬ್ರಿಟಿಷರ ಪಾತ್ರ ಮರೆಯುವಂತಿಲ್ಲ

02:31 PM Dec 06, 2017 | |

ವಾಪಿ: ವಾಪಿ ಕನ್ನಡ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇವರ ಜಂಟಿ ಆಯೋಜನೆಯಲ್ಲಿ  ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಸಾಂಸ್ಕೃತಿಕ ಸಂಧ್ಯಾ ಕಾರ್ಯಕ್ರಮವನ್ನು ನ. 18ರಂದು ಸಂಘದ ವಿವಿಧೋದ್ದೇಶ ಭವನದಲ್ಲಿ ಆಯೋಜಿಸಲಾಗಿತ್ತು.

Advertisement

ರಾಜ್ಯೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೈಸೂರು ಅಸೋಸಿಯೇಶನ್‌ ಮುಂಬಯಿ ಇದರ ವಿಶ್ವಸ್ತ ರಂಗಕರ್ಮಿ ಮಂಜುನಾಥಯ್ಯ ಅವರು ಆಗಮಿಸಿ ಮಾತನಾಡಿ, ನಮ್ಮ ದೇಶವು ಭಾಷೆಗಳ ಸಮೃದ್ಧ ದೇಶವಾಗಿದೆ. ಇದರಲ್ಲಿ ಕನ್ನಡ ಹಳೆಯ ಭಾಷೆ. ತಮಿಳು, ಕನ್ನಡ, ಸಂಸ್ಕೃತ ಅನಂತರ ಬಂದ ಭಾಷೆಗಳಾಗಿವೆ. ಭಾರತದ ಮೂಲ ಭಾಷೆಗಳಲ್ಲಿ ಒಂದಾಗಿರುವ ಕನ್ನಡವು ಸಂಸ್ಕೃತದ ಸದುಪಯೋಗ ಪಡೆದು ಹೆಚ್ಚಿನ ಸ್ಪಷ್ಟತೆ ಪಡೆಯಿತು. ಅತಿ ಹಳೆಯ ಮತ್ತು ಸ್ಪಷ್ಟ ಭಾಷೆ ಕನ್ನಡವು ಒಂದೋಮ್ಮೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪೇಶ್ವೆಯವರ ಆಡಳಿತಾವಧಿಯಲ್ಲಿ ಮರಾಠಿ ಭಾಷೆಯ ಎದುರು ಅವಸಾನದ ಹಾದಿ ಹಿಡಿಯುತ್ತಿದ್ದ ಸಂದರ್ಭದಲ್ಲಿ ಮತ್ತೆ ಕನ್ನಡಕ್ಕೆ ಜೀವ ತುಂಬಿದವರು ರೈಸ್‌ ಅಂತಹ ಬ್ರಿಟಿಷರು. ಕನ್ನಡವನ್ನು ಗಟ್ಟಿಗೊಳಿಸುವಲ್ಲಿ ಬ್ರಿಟಿಷರ ಪಾತ್ರವನ್ನು ಮರೆಯುವಂತಿಲ್ಲ. ಕಿಟ್ಟೆಲ್‌ ಅಂಥವರು ಕನ್ನಡಕ್ಕೆ ಬಹುದೊಡ್ಡ ಡಿಕ್ಷನರಿಯನ್ನು ನೀಡಿರುವುದನ್ನೂ ಮರೆಯಬಾರದು. ಆ ದಿನಗಳಲ್ಲಿ ಶಾಸನಗಳನ್ನು ಬ್ರಿಟಿಷರು ಹುಡುಕಿ ಹುಡುಕಿ ಬರೆದ ಪರಿಣಾಮ ಕನ್ನಡವನ್ನು ಗಟ್ಟಿಗೊಳಿಸಲು ನೆರವಾಯಿತು. ಗಂಗರು, ಚೋಳರು, ಬಾದಾಮಿ ಚಾಳುಕ್ಯರು ಇವರೆಲ್ಲರ ಇತಿಹಾಸ ಗಮನಿಸಿದರೆ, ಕನ್ನಡಿಗ ಅರಸರ ನಡುವೆ ಜಗಳ ಕಾಣಿಸುತ್ತಿದ್ದು, ಇಂತಹ ಜಗಳ ಕನ್ನಡಕ್ಕೆ ಮಾರಕವಾಯಿತು. ಇವರೆಲ್ಲರ ಒಮ್ಮತದಿಂದಿದ್ದರೆ ಇಂದು ಕನ್ನಡ ಇನ್ನಷ್ಟು ಬಲಶಾಲಿಯಾಗುತ್ತಿತ್ತು. ವಾಪಿಯಂತಹ ದೂರದ ಗುಜರಾತ್‌ನಲ್ಲಿ ಕಳೆದ 37 ವರ್ಷಗಳಿಂದ ಕನ್ನಡ ಸಂಘವೇ ಕನ್ನಡ ಕಾರ್ಯಕ್ರಮಗಳ ಮೂಲಕ ಕನ್ನಡತನ ಮರೆದಿರುವುದು ಅಭಿಮಾನದ ಸಂಗತಿ. ನಮ್ಮ ಮಕ್ಕಳಿಗೆ ಮುಂದಿನ ಪೀಳಿಗೆಗೆ ಕನ್ನಡದ ರುಚಿ ಹತ್ತಿಸೋಣ ಎಂದು ನುಡಿದು ಶುಭ ಹಾರೈಸಿದರು.

ವಾಪಿ ಕನ್ನಡ ಸಂಘದ ಅಧ್ಯಕ್ಷ ಪಿ. ಎಸ್‌. ಕಾರಂತ್‌ ಅವರು ಕನ್ನಡ ಸಂಘದ ಆರಂಭದ ದಿನಗಳನ್ನು ನೆನಪಿಸಿ ಕರ್ನಾಟಕ ಎನ್ನುವುದಕ್ಕಿಂತ ಕನ್ನಡ ಎನ್ನುವುದಕ್ಕೆ ಹೆಚ್ಚು ಬೆಂಬಲ ಸಿಕ್ಕಿದ್ದರಿಂದ ಇದು ವಾಪಿ ಕನ್ನಡ ಸಂಘ ಎನಿಸಿಕೊಂಡಿದೆ. ಇಂಗ್ಲಿಷ್‌ನಲ್ಲಿ ಮಾತನಾಡಿದ್ರೆ ವಿಶಿಷ್ಟ ಅಂತ ಕೆಲವರಿಗೆ ಭಾವನೆಯಿದೆ. ಇದು ತಪ್ಪು. ನಾವು ಕನಿಷ್ಠ ನಮ್ಮ ಮನೆಯಲ್ಲಾದರೂ ಕನ್ನಡ ಮಾತನಾಡೋಣ. ಕನ್ನಡದ ಅಸ್ಮಿತೆ ಇರುವುದರಿಂದಲೇ ವಾಪಿಯಲ್ಲಿ ಕನ್ನಡ ಸಂಘ ಕೆಲಸ ಮಾಡುತ್ತಿದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ವಿಶ್ವನಾಥ ಭಂಡಾರಿ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಕನ್ನಡ ರಾಜ್ಯಕ್ಕಾಗಿ ತ್ಯಾಗ ಮಾಡಿದವರ ಶ್ರಮ ನೆನಪಿಸುವುದೇ ಈ ರಾಜ್ಯೋತ್ಸವ ಆಚರಣೆಯಾಗಿದೆ. ನಾವು ನಮ್ಮ ದಿನನಿತ್ಯದ ಮಾತಿನಲ್ಲಿ ಕನ್ನಡ ಶಬ್ದಗಳನ್ನು ಆದಷ್ಟು ಹೆಚ್ಚು ಉಪಯೋಗಿಸೋಣ. ಕನ್ನಡದ ಅಭಿಮಾನ ಹೆಚ್ಚಿಸೋಣ. ಈ ಸಂಘದ ಸದಸ್ಯರಲ್ಲಿ ಭಾಷಾಭಿಮಾನವಿದೆ. ಭಾಷೆ ಉಳಿಯಲಿ. ಗಡಿನಾಡು ಹೊರನಾಡು ಕನ್ನಡಿಗರು ಎಲ್ಲೇ ಇದ್ದರೂ, ಕನ್ನಡದ ಕಂಪು ಪಸರಿಸುತ್ತಿರಲಿ ಎಂದು ಹೇಳಿದರು.

ಆರಂಭದಲ್ಲಿ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ

Advertisement

ಯನ್ನು ವಿಶ್ವನಾಥ ಭಂಡಾರಿ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಂಜುನಾಥಯ್ಯ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜೀವ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಮಮತಾ ಮಲ್ಹಾರ ಸ್ವಾಗತಿಸಿದರು. ಮಲ್ಹಾರ್‌ ನಿಂಬರಗಿ ಕಾರ್ಯಕ್ರಮ ನಿರ್ವಹಿಸಿದರು.

ವಸುಂಧರಾ ಕುಲಕರ್ಣಿ ಅವರು ಪ್ರಾರ್ಥನೆಗೈದರು.  ಗಣ್ಯರು ಮಂಜುನಾಥಯ್ಯ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಫಲ-ತಾಂಬೂಲವನ್ನಿತ್ತು ಸಮ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ವಿಶ್ವಸ್ತರಾದ ಎನ್‌. ಎಂ. ಶೆಟ್ಟಿ, ಮಹಿಳಾ ವಿಭಾಗದ ಮುಖ್ಯಸ್ಥೆ ಪ್ರಫುಲ್ಲಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಇನ್ನೋರ್ವ ಕಾರ್ಯಾಧ್ಯಕ್ಷ ಸಂಜಯ್‌ ಮರ್ಬಳ್ಳಿ, ಕೋಶಾಧಿಕಾರಿ ಉದಯ ಸೊಗಲಿ, ನಾಗರಾಜ್‌ ಶೆಟ್ಟಿ, ಹರ್ಷವರ್ಧನ್‌ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಧಾರವಾಡದ ಸೀತಾ ಛಪ್ಪರ ಅವರ ನಿರ್ದೇಶನದಲ್ಲಿ ಅಭಿವ್ಯಕ್ತಿ ಕಲಾ ತಂಡದವರಿಂದ ಸಾಂಸ್ಕೃತಿಕ ನೃತ್ಯ ವೈವಿಧ್ಯ ನಡೆಯಿತು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next