Advertisement

ವನಿತಾ ಡಬಲ್ಸ್‌: ಮಕರೋವಾ-ವೆಸ್ನಿನಾಗೆ ಪ್ರಶಸ್ತಿ

03:45 AM Jul 17, 2017 | Harsha Rao |

ಲಂಡನ್‌: ರಶ್ಯದ ಏಕ್ತರೀನಾ ಮಕರೋವಾ ಮತ್ತು ಎಲೆನಾ ವೆಸ್ನಿನಾ ಅವರು ಮೊದಲ ಬಾರಿ ವಿಂಬಲ್ಡನ್‌ ಟೆನಿಸ್‌ ಕೂಟದ ವನಿತೆಯರ ಡಬಲ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 

Advertisement

ದ್ವಿತೀಯ ಶ್ರೇಯಾಂಕದ ಮಕರೋವಾ-ವೆಸ್ನಿನಾ ಅವರು ತೈವಾನಿನ ಹಾವೊ ಚಿಂಗ್‌ ಚಾನ್‌ ಮತ್ತು ರೊಮಾನಿಯಾದ ಮೊನಿಕಾ ನಿಕುಲೆಸ್ಕಾ ಅವರನ್ನು 6-0, 6-0 ನೇರ ಸೆಟ್‌ಗಳಿಂದ ಉರುಳಿಸಿ ತಮ್ಮ ಮೂರನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಪಡೆದರು. ಅವರಿಬ್ಬರು ಈ ಹಿಂದೆ 2013ರಲ್ಲಿ ಫ್ರೆಂಚ್‌ ಓಪನ್‌ ಮತ್ತು 2014ರಲ್ಲಿ ಯುಎಸ್‌ ಓಪನ್‌ನ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದರು.

54 ನಿಮಿಷಗಳಲ್ಲಿ ಮುಗಿದ ಫೈನಲ್‌ ಹೋರಾಟದಲ್ಲಿ ಅವರಿಬ್ಬರು ಕೇವಲ ಎರಡು ಬ್ರೇಕ್‌ ಪಾಯಿಂಟ್‌ ಉಳಿಸಿಕೊಂಡಿದ್ದರು. ಈ ಋತುವಿನಲ್ಲಿ ಅವರಿಬ್ಬರು ಜತೆಯಾಗಿ ಆಡಿರುವುದು ಇದೇ ಮೊದಲ ಸಲವಾಗಿದೆ. 
ಅಗ್ರ ಶ್ರೇಯಾಂಕದ ಅಮೆರಿಕದ ಬೆಥನಿ ಮಾಟೆಕ್‌ ಸ್ಯಾಂಡ್ಸ್‌ ಮತ್ತು ಜೆಕ್‌ನ ಲೂಸಿ ಸಫ‌ರೋವಾ ಅವರು ದ್ವಿತೀಯ ಸುತ್ತಿನ ಮೊದಲೇ ಪಂದ್ಯ ತ್ಯಜಿಸಬೇಕಾಗಿ ಬಂದಿತ್ತು. ಮಾಟೆಕ್‌ ಸ್ಯಾಂಡ್ಸ್‌ ಅವರು ಸಿಂಗಲ್ಸ್‌ ಪಂದ್ಯ ಆಡುತ್ತಿದ್ದ ವೇಳೆ ತೀವ್ರ ಸ್ವರೂಪದ ಗಾಯಗೊಂಡ ಕಾರಣ ಸಿಂಗಲ್ಸ್‌ ಪಂದ್ಯದ ಜತೆ ಡಬಲ್ಸ್‌ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಹೀಗಾಗಿ ಮಕರೋವಾ ಮತ್ತು ವಸ್ನಿನಾ ಅವರಿಗೆ ಪ್ರಶಸ್ತಿ ಗೆಲ್ಲಲು ಸಹಕಾರಿಯಾಯಿತು.

ಕುಬೋಟ್‌-ಮೆಲೊಗೆ ಪ್ರಶಸ್ತಿ
ಪೋಲೆಂಡಿನ ಲುಕಾಸ್‌ ಕುಬೋಟ್‌ ಮತ್ತು ಬ್ರಝಿಲ್‌ನ ಮಾರ್ಸೆಲೊ ಮೆಲೊ ಅವರು ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಐದು ಸೆಟ್‌ಗಳ ಮ್ಯಾರಥಾನ್‌ ಹೋರಾಟದಲ್ಲಿ ಅವರಿಬ್ಬರು ಆಲಿವರ್‌ ಮರಾಚ್‌ ಮತ್ತು ಮ್ಯಾಟ್‌ ಪಾವಿಕ್‌ ಅವರನ್ನು 5-7, 7-5, 7-6 (7-2), 3-6, 13-11 ಸೆಟ್‌ಗಳಿಂದ ಕೆಡಹಿದರು. 

ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಈ ಪಂದ್ಯ ಹೊನಲು ಬೆಳಕಿನಲ್ಲಿ ಅಂತ್ಯಗೊಂಡಿತ್ತು. ಈ ಮೊದಲು ಮೇಲ್ಛಾವಣಿ ತೆರೆದಿದ್ದ ವೇಳೆ ಸಂಜೆ ಸಾಕಷ್ಟು ಬೆಳಕು ಇಲ್ಲದಾಗ ಪಂದ್ಯ ಸ್ಥಗಿತಗೊಂಡಾಗ ಅಂತಿಮ ಸೆಟ್‌ 11-11ರಿಂದ ಸಮಬಲದಲ್ಲಿತ್ತು. ಆಬಳಿಕ ಮೇಲ್ಛಾವಣಿ ಮುಚ್ಚಿ ಹೊನಲು ಬೆಳಕಿನಲ್ಲಿ ಪಂದ್ಯ ಪುನರಾರಂಭಗೊಂಡಿತು. 13-11ರಿಂದ ಅಂತಿಮ ಸೆಟ್‌ ಗೆದ್ದ ಖುಷಿಯಲ್ಲಿ ಕುಬೋಟ್‌ ಮತ್ತು ಮೆಲೊ ಅಂಗಣದಲ್ಲಿ ನಲಿದಾಡಿದರು. ಈ ಹೋರಾಟ ನಾಲ್ಕು ತಾಸು ಮತ್ತು 39 ನಿಮಿಷಗಳವರೆಗೆ ಸಾಗಿತ್ತು.

Advertisement

ಕುಬೋಟ್‌ ಮತ್ತು ಮೆಲೊ ಹಾಗೂ ಮರಾಚ್‌ ಮತ್ತು ಪಾವಿಕ್‌ ಸೆಮಿಫೈನಲ್‌ನಲ್ಲೂ ಐದು ಸೆಟ್‌ಗಳ ಸಂಘರ್ಷಪೂರ್ಣ ಹೋರಾಟ ನಡೆಸಿ ಗೆಲುವು ಸಾಧಿಸಿದ್ದರು. ಕ್ರೊವೇಶಿಯದ ನಿಕೋಲಾ ಮಾಕ್ತಿಕ್‌ ಮತ್ತು ಫ್ರ್ಯಾಂಕೊ ಸುಗೋರ್‌ ವಿರುದ್ಧ ನಡೆದ ಸೆಮಿಫೈನಲ್‌ನ ನಿರ್ಣಾಯಕ ಐದನೇ ಸೆಟ್‌ ಅನ್ನು ಮರಾಚ್‌ ಮತ್ತು ಪಾವಿಕ್‌ 17-15ರಿಂದ ಜಯಿಸಿ ಪ್ರಶಸ್ತಿ ಸುತ್ತಿಗೇರಿದ್ದರು. ಈ ಪಂದ್ಯ ಕೂಡ ನಾಲ್ಕೂವರೆ ತಾಸುಗಳವರೆಗೆ ಸಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next