Advertisement

Women Ashes: ಆಸೀಸ್‌ ವಿಕ್ರಮ- ಆ್ಯಶ್ಲೀ ಗಾರ್ಡನರ್‌ ಘಾತಕ ಬೌಲಿಂಗ್‌

11:48 PM Jun 26, 2023 | Team Udayavani |

ನಾಟಿಂಗ್‌ಹ್ಯಾಮ್‌: ಏಕೈಕ ವನಿತಾ ಆ್ಯಶಸ್‌ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯ ಜಯಭೇರಿ ಮೊಳಗಿಸಿದೆ. ಆತಿಥೇಯ ಇಂಗ್ಲೆಂಡನ್ನು 89 ರನ್ನುಗಳಿಂದ ಕೆಡವಿದೆ.

Advertisement

ಗೆಲುವಿಗೆ 268 ರನ್‌ ಸವಾಲು ಪಡೆದಿದ್ದ ಇಂಗ್ಲೆಂಡ್‌, ಪಂದ್ಯದ ಅಂತಿಮ ದಿನವಾದ ಸೋಮವಾರ 178ಕ್ಕೆ ಕುಸಿಯಿತು. ಆಸ್ಟ್ರೇಲಿಯ ಆ್ಯಶಸ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು. ಆಸ್ಟ್ರೇಲಿಯದ ಪುರುಷರ ತಂಡ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್‌ ಪಡೆಯನ್ನು ಕೆಡವಿದರೆ, ವನಿತಾ ತಂಡ ನಾಟಿಂಗ್‌ಹ್ಯಾಮ್‌ನಲ್ಲಿ ಆಂಗ್ಲರಿಗೆ ಆಘಾತವಿಕ್ಕಿತು.

ಗಾರ್ಡನರ್‌ಗೆ 12 ವಿಕೆಟ್‌
ಬಲಗೈ ಆಫ್ಸ್ಪಿನ್ನರ್‌ ಆ್ಯಶ್ಲೀ ಗಾರ್ಡನರ್‌ ಆಸ್ಟ್ರೇಲಿಯದ ಗೆಲುವಿನ ರೂವಾರಿಯಾಗಿ ಮೂಡಿಬಂದರು. ಅವರು 66ಕ್ಕೆ 8 ವಿಕೆಟ್‌ ಉಡಾಯಿಸಿ ಇಂಗ್ಲೆಂಡಿಗೆ ಏಳYತಿ ಇಲ್ಲದಂತೆ ಮಾಡಿದರು. ಗಾರ್ಡನರ್‌ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ 8 ವಿಕೆಟ್‌ ಕೆಡವಿದ ಕೇವಲ 2ನೇ ಬೌಲರ್‌. ಭಾರತದ ನೀತು ಡೇವಿಡ್‌ ಇಂಗ್ಲೆಂಡ್‌ ಎದುರಿನ 1995ರ ಜಮ್ಶೆಡ್‌ಪುರ ಟೆಸ್ಟ್‌ನಲ್ಲಿ

53 ರನ್ನಿಗೆ 8 ವಿಕೆಟ್‌ ಉಡಾಯಿಸಿದ್ದರು.
ಈ ಪಂದ್ಯದಲ್ಲಿ ಆ್ಯಶ್ಲೀ ಗಾರ್ಡನರ್‌ 165 ರನ್‌ ವೆಚ್ಚದಲ್ಲಿ 12 ವಿಕೆಟ್‌ ಕಿತ್ತರು. ಇದು ವನಿತಾ ಟೆಸ್ಟ್‌ ಪಂದ್ಯದಲ್ಲಿ ದಾಖಲಾದ 2ನೇ ಅತ್ಯುತ್ತಮ ಬೌಲಿಂಗ್‌ ಸಾಧನೆ. ವೆಸ್ಟ್‌ ಇಂಡೀಸ್‌ ಎದುರಿನ 2004ರ ಕರಾಚಿ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನದ ಶಾಜಿಯಾ ಖಾನ್‌ 226ಕ್ಕೆ 13 ವಿಕೆಟ್‌ ಉರುಳಿಸಿದ್ದು ದಾಖಲೆಯಾಗಿದೆ.

ಇದೇ ವೇಳೆ ಇಂಗ್ಲೆಂಡ್‌ನ‌ ಸೋಫಿ ಎಕ್‌ಸ್ಟೋನ್‌ ಕೂಡ ದಾಖಲೆಯೊಂದನ್ನು ಸ್ಥಾಪಿಸಿದರು. ಎರಡೂ ಇನ್ನಿಂಗ್ಸ್‌ಗಳಲ್ಲಿ 5 ವಿಕೆಟ್‌ ಹಾರಿಸಿದ ವಿಶ್ವದ 5ನೇ ಹಾಗೂ ಇಂಗ್ಲೆಂಡ್‌ನ‌ ಮೊದಲ ಬೌಲರ್‌ ಎನಿಸಿದರು (129ಕ್ಕೆ 5 ಮತ್ತು 63ಕ್ಕೆ 5). ಆದರೆ ಇದರಿಂದ ಇಂಗ್ಲೆಂಡ್‌ಗೆ ಯಾವುದೇ ಪ್ರಯೋಜನವಾಗಲಿಲ್ಲ. ಹಾಗೆಯೇ ಇಂಗ್ಲೆಂಡ್‌ ಓಪನರ್‌ ಟಾಮಿ ಬ್ಯೂಮಾಂಟ್‌ ಬಾರಿಸಿದ ದ್ವಿಶತಕ (208) ಕೂಡ ವ್ಯರ್ಥವಾಯಿತು.

Advertisement

ಇತ್ತಂಡಗಳಿನ್ನು 3 ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖೀ ಆಗಲಿವೆ.

 

Advertisement

Udayavani is now on Telegram. Click here to join our channel and stay updated with the latest news.

Next