ಹೊಸದಿಲ್ಲಿ: ವಂದೇ ಭಾರತ್ ಏರ್‌ಲಿಫ್ಟ್ ಮಹಾಸಾಹಸದ 2ನೇ ದಿನವಾದ ಶುಕ್ರವಾರ, 6 ವಿಮಾನಗಳು ಭಾರತಕ್ಕೆ ಬಂದಿಳಿದಿವೆ. ಕೊಚ್ಚಿ, ಕಲ್ಲಿಕೋಟೆ ಬಳಿಕ 3ನೇ ವಿಮಾನವು ಹೊಸದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದ್ದು, 234 ಪ್ರಯಾಣಿಕರು ಮಾತೃಭೂಮಿಗೆ ಮರಳಿದ್ದಾರೆ.
“ಬಿ- 787′ ಏರ್ ಇಂಡಿಯಾ ವಿಮಾನ ಬೆಳಗ್ಗೆ 11.45ಕ್ಕೆ ದಿಲ್ಲಿಯಲ್ಲಿ ಇಳಿಯುತ್ತಿದ್ದಂತೆಯೇ, ಅನಿವಾಸಿ ಭಾರತೀಯರಿಗೆ ಆರೋಗ್ಯ ಪರೀಕ್ಷೆ, ಕ್ವಾರಂಟೈನ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.
4ನೇ ವಿಮಾನ ಶ್ರೀನಗರಕ್ಕೆ: ಭಾರತ ಕಾಶ್ಮೀರದ ಆದ್ಯತೆಯನ್ನು ಯಾವತ್ತಿಗೂ ಬಿಟ್ಟುಕೊಡುವುದಿಲ್ಲ ಎನ್ನುವುದಕ್ಕೂ ಶುಕ್ರವಾರದ ಏರ್‌ಲಿಫ್ಟ್ ಸಾಕ್ಷಿ ಆಗಿತ್ತು. ಬಾಂಗ್ಲಾದೇಶದ ವಿವಿಧೆಡೆ ಓದುತ್ತಿದ್ದ ಕಾಶ್ಮೀರದ 167 ಮೆಡಿಕಲ್ ವಿದ್ಯಾರ್ಥಿಗಳನ್ನು, ಢಾಕಾದಿಂದ ಶ್ರೀನಗರಕ್ಕೆ ಸ್ಥಳಾಂತರಿಸಲಾಯಿತು. ಅಪರಾಹ್ನ 1.30ಕ್ಕೆ ಶ್ರೀನಗರಕ್ಕೆ ತಲುಪಿದ ಎಲ್ಲ ವಿದ್ಯಾರ್ಥಿಗಳಿಗೂ ಸ್ಕ್ರೀನಿಂಗ್ ನಡೆದಿದ್ದು, ಕ್ವಾರಂಟೈನ್ ಜತೆಗೆ ಆರೋಗ್ಯ ಸಚಿ ವಾಲಯದ ಸೂಚನೆ ಪಾಲಿಸುವಂತೆ ತಿಳಿಸಲಾಗಿದೆ. “ಢಾಕಾದಲ್ಲಿರುವ ಭಾರತದ ಹೈಕಮಿಷನ್, ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಒಳ್ಳೆಯ ಕೆಲಸ ಮಾಡಿದೆ. ಕಾಶ್ಮೀರದ ಆಡಳಿತವೂ ಸೂಕ್ತ ಸಹಕಾರ ನೀಡಿ, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ನೆರವಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶ್ಲಾಘಿಸಿದ್ದಾರೆ. ಇನ್ನು 5 ದಿನಗಳಲ್ಲಿ ಬಾಂಗ್ಲಾದೇಶದಿಂದ 6 ವಿಮಾನಗಳು ಭಾರತವನ್ನು ತಲುಪಲಿವೆ.
ತಡರಾತ್ರಿ ಭಾರತಕ್ಕೆ: ಉಳಿದಂತೆ 4 ವಿಮಾನಗಳು ಶುಕ್ರವಾರ ತಡರಾತ್ರಿ ಭಾರತದ ವಿವಿಧ ವಿಮಾನ ನಿಲ್ದಾಣಗಳನ್ನು ತಲುಪಿವೆ. ರಿಯಾದ್- ಕಲ್ಲಿಕೋಟೆ ವಿಮಾನ ರಾ. 8.30, ಬಹ್ರೈನ್- ಕೊಚ್ಚಿನ್ ರಾ. 11.30, ದುಬಾೖ- ಚೆನ್ನೈ ರಾ.8.10 ಹಾಗೂ ದುಬಾೖಯಿಂದ ಹೊರಟ ಇನ್ನೊಂದು ವಿಮಾನ ಚೆನ್ನೈಯನ್ನು ಮಧ್ಯರಾತ್ರಿ 12.25ಕ್ಕೆ ತಲುಪಿದೆ.
15ರಿಂದ ಮತ್ತಷ್ಟು ವಿಸ್ತರಣೆ: “ವಂದೇ ಭಾರತ್ ಮಿಷನ್’ ಅನ್ನು 15ರಿಂದ ಕಜಕಿಸ್ಥಾನ, ಉಜ್ಬೆಕಿಸ್ಥಾನ, ರಷ್ಯಾ, ಜರ್ಮನಿ, ಸ್ಪೇನ್ ಮತ್ತು ಥೈಲ್ಯಾಂಡ್‌ಗಳಿಗೆ ವಿಸ್ತರಿಸಲಾಗುತ್ತದೆ.
“ನಿಮ್ಮನ್ನೆಲ್ಲ ಭಾರತಕ್ಕೆ ಕರೆತರಲು ಹೆಮ್ಮೆ ಆಗ್ತಿದೆ!’
ಗುರುವಾರ ರಾತ್ರಿ ಅಬುಧಾಬಿಯಲ್ಲಿ ಭಾರತೀಯರು ವಿಮಾನ ಏರುತ್ತಿದ್ದಂತೆಯೇ, “ಹಿಪ್ ಹಿಪ್ ಹುರ್ರೆ’ ಎಂದು ಸಂಭ್ರಮಿಸಿದರು. ಮತ್ತೆ ಕೆಲವರು ಚಪ್ಪಾಳೆ ತಟ್ಟಿ, ಪೈಲಟ್ ಅವರ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದರು. ಸಂಕಷ್ಟದ ಸಾಗರದಿಂದ ಎದ್ದುಬಂದಂತಿದ್ದ ಪ್ರಯಾಣಿಕರನ್ನು ನೋಡಿ ಪೈಲ ಟ್ ಅನುಲ್ ಶಿಯೊರಾನ್, “ನಿಮ್ಮನ್ನೆಲ್ಲ ಭಾರತಕ್ಕೆ ಕರೆತರಲು ಹೆಮ್ಮೆ ಆಗ್ತಿದೆ!’ ಎಂದು ಹೇಳಿದ್ದರು.