ಹೊಸದಿಲ್ಲಿ: ಬಾಂಗ್ಲಾದೇಶದ ವಿವಿಧೆಡೆ ಓದಲು ಹೋಗಿದ್ದ ಮತ್ತಷ್ಟು ಕಾಶ್ಮೀರ ವಿದ್ಯಾರ್ಥಿಗಳನ್ನು ವಂದೇ ಭಾರತ್ ವಿಮಾನ ಬುಧವಾರ ಕರೆತಂದಿದೆ. ಒಟ್ಟು 169 ವಿದ್ಯಾರ್ಥಿಗಳು ಕಾಶ್ಮೀರದಲ್ಲಿ ತಡರಾತ್ರಿ ಸುರಕ್ಷಿತವಾಗಿ ಇಳಿದಿದ್ದು, ಎಲ್ಲರಿಗೂ ಅಗತ್ಯ ಸ್ಕ್ರೀನಿಂಗ್ ನಡೆಸಲಾಗಿದೆ.
ಇದು ಢಾಕಾದಿಂದ ಭಾರತೀಯರನ್ನು ಕರೆತರುತ್ತಿರುವ 5ನೇ ವಿಮಾನವಾಗಿದೆ. ಮೇ 16ರಿಂದ ಶುರುವಾಗಲಿರುವ 2ನೇ ಏರ್‌ಲಿಫ್ಟ್ ನಲ್ಲೂ ಬಾಂಗ್ಲಾದಿಂದ ಇನ್ನಷ್ಟು ಭಾರತೀಯ ಪ್ರಜೆಗಳು ಮರಳಲಿದ್ದಾರೆ.
141 ಮಂದಿ ಚೆನ್ನೈಗೆ: ಅಮೆರಿಕದ ಷಿಕಾಗೋದಿಂದ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 141 ಮಂದಿಯನ್ನು ಮುಂಬೈ ಮಾರ್ಗವಾಗಿ ಚೆನ್ನೈಗೆ ಬುಧವಾರ ಮುಟ್ಟಿಸಿದೆ. ಪರೀಕ್ಷೆ ವೇಳೆ 11 ಮಂದಿ ಶಂಕಿತರು ಪತ್ತೆಯಾಗಿದ್ದು, ಅವರಿಗೆ ಐಸೋಲೇಶನ್ ವಾರ್ಡ್ ನ ವ್ಯವಸ್ಥೆ ಮಾಡಲಾಗಿದೆ. ಮಿಕ್ಕವರಿಗೆ ಕ್ವಾರಂಟೈನ್‌ಗೆ ಸೂಚಿಸಲಾಗಿದೆ.
28 ಸಾವಿರ ನೋಂದಣಿ: ಇನ್ನೊಂದೆಡೆ, ಅತ್ತ ಅಮೆರಿಕದ ಡಲ್ಲಾಸ್ ವಿಮಾನ ನಿಲ್ದಾಣದಿಂದ 240 ಮಂದಿ ಭಾರತಕ್ಕೆ ಮರಳುತ್ತಿದ್ದಾರೆ. ಒಟ್ಟಾರೆ ಅಮೆರಿಕದಿಂದ 28 ಸಾವಿರ ಮಂದಿ ಭಾರತಕ್ಕೆ ಬರಲು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಅಲ್ಲಿನ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಹೇಳಿದ್ದಾರೆ.
ಮೇ 21ರಿಂದ ಆಸೀಸ್: ಆಸ್ಟ್ರೇಲಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಮೇ 21ರಿಂದ 28ರವರೆಗೆ ಸ್ಥಳಾಂತರಿಸಲಾಗುತ್ತದೆ ಎಂದು ಅಲ್ಲಿನ ಭಾರತೀಯ ಹೈಕಮಿಷನ್ ಹೇಳಿದೆ. ಸೀಮಿತ ಟಿಕೆಟ್‌ಗಳಷ್ಟೇ ಲಭ್ಯವಿದ್ದು, ಗರ್ಭಿಣಿಯರು, ವೃದ್ಧರು, ವಿದ್ಯಾರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ.
30 ಸಾವಿರ ಗುರಿ: ಮೇ 16- 22ರ ವರೆಗೆ ನಡೆಯುವ 2ನೇ ಹಂತದ ವಂದೇ ಭಾರತ್ ಏರ್‌ಲಿಫ್ಟ್, 30 ಸಾವಿರ ಅನಿವಾಸಿ ಪ್ರಜೆಗಳನ್ನು ಕರೆತರುವ ಹೆಗ್ಗುರಿ ಹೊಂದಿದೆ ಎಂದು ನಾಗರಿಕ ವಿಮಾನ ಯಾನ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ. ಈ ಅವಧಿಯಲ್ಲಿ ಒಟ್ಟು 149 ವಿಮಾನಗಳು, ವಿಶ್ವದ 31 ವಿವಿಧ ದೇಶಗಳತ್ತ ಸಂಚರಿಸಲಿವೆೆ.