Advertisement

ಕರಾವಳಿ ರೈಲು ಸಂಪರ್ಕದಲ್ಲಿ ಹೊಸ ನಿರೀಕ್ಷೆ 

04:33 AM Feb 25, 2019 | |

ಮಹಾನಗರ: ಬಹುಬೇಡಿಕೆ ಮಂಗಳೂರು-ಯಶವಂತಪುರ ರಾತ್ರಿ ರೈಲು ಆರಂಭಗೊಂಡ ಬೆನ್ನಲೇ ರೈಲ್ವೇ ಇಲಾಖೆಯಿಂದ ಮಂಗಳೂರಿಗೆ ‘ವಂದೇ ಭಾರತ್‌’ ಹೈಸ್ಪೀಡ್‌ ರೈಲು ಸಂಚಾರದ ಮೂರು ಪ್ರಸ್ತಾವನೆಗಳು ಕೊಡುಗೆಯಾಗಿ ಬಂದಿದೆ. ಇದು ರೈಲು ಸೇವೆಯಲ್ಲಿ ಶತಮಾನದ ಇತಿಹಾಸ ಇರುವ ಕರಾವಳಿ ಪ್ರದೇಶದ ರೈಲು ಸಂಪರ್ಕ ವ್ಯವಸ್ಥೆ ಗಟ್ಟಿಗೊಳ್ಳುವ ಆಶಾವಾದ ಮೂಡಿಸಿದೆ.

Advertisement

ಮಂಗಳೂರು- ಬೆಂಗಳೂರು, ಮಂಗಳೂರು-ಚೆನ್ನೈ ಹಾಗೂ ಮಂಗಳೂರು-ಹೈದರಾಬಾದ್‌ಗೆ ‘ವಂದೇ ಭಾರತ್‌’ ರೈಲು ಸಂಚಾರ ಆರಂಭಿಸುವುದಾಗಿ ಬೆಂಗಳೂರಿನಲ್ಲಿ ಕೇಂದ್ರ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಶುಕ್ರವಾರ ಘೋಷಿಸಿದ್ದಾರೆ. ಇದು ಸಾಕಾರಗೊಂಡರೆ ಮಂಗಳೂರು ಸಹಿತ ರಾಜ್ಯದ ಕರಾವಳಿ ಜಿಲ್ಲೆಗಳ ಜನರು ಈ ಪ್ರದೇಶಗಳನ್ನು ತಲುಪಲು ವ್ಯಯಿಸಬೇಕಾದ ಸುದೀರ್ಘ‌ ಪ್ರಯಾಣದ ಸಂಕಷ್ಟ ನಿವಾರಣೆಯಾಗಲಿದೆ. ಜತೆಗೆ ಈ ಭಾಗದ ವಾಣಿಜ್ಯ, ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆಗೆ ಹೆಚ್ಚಿನ ಉತ್ತೇಜನ ಲಭಿಸಬಹುದು.

ಬೆಂಗಳೂರು-ಕಾರವಾರ/ ಕಣ್ಣೂರು- ಬೆಂಗಳೂರು ರಾತ್ರಿ ರೈಲು ಮೈಸೂರು ಮೂಲಕ ಸಂಚರಿಸಿದರೆ ಒಟ್ಟು 447 ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ. ಕುಣಿಗಲ್‌- ಶ್ರವಣಬೆಳಗೊಳ ಮೂಲಕ ಸಂಚರಿಸಿದರೆ ದೂರ 357 ಕಿ.ಮೀ. ಆಗುತ್ತಿದೆ. ಪ್ರಸ್ತುತ ಬೆಂಗಳೂರಿಗೆ ಪ್ರಯಾಣಿಸಲು 10ರಿಂದ 12 ತಾಸು ಬೇಕು. ಇದರಲ್ಲಿ ಕುಕ್ಕೆ ಸುಬ್ರಹ್ಮಣ್ಯದಿಂದ ಸಕಲೇಶಪುರದವರೆಗೆ ಘಾಟ್‌ ಪ್ರದೇಶದಿಂದಾಗಿ ಕ್ರಮಿಸುವಾಗ ಮೂರು ತಾಸು ತಗಲುತ್ತದೆ. ವಂದೇ ಭಾರತ ರೈಲು ಗಂಟೆಗೆ 168 ಕಿ.ಮೀ. ವೇಗ ಹೊಂದಿದ್ದರೂ ಘಾಟ್‌ ಪ್ರದೇಶದಲ್ಲಿ 35 ಕಿ.ಮೀ.ಗಿಂತ ಅಧಿಕ ವೇಗದಲ್ಲಿ ಸಂಚರಿಸಲು ಸಾಧ್ಯವಿಲ್ಲ. ಆದರೂ ಉಳಿದ ಪ್ರದೇಶದಲ್ಲಿ ವೇಗವನ್ನು ಕಾಯ್ದುಕೊಂಡು 7ರಿಂದ 8 ತಾಸುಗಳಲ್ಲಿ ಬೆಂಗಳೂರು ತಲುಪಲು ಸಾಧ್ಯವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದೇ ವೇಳೆ ಬೆಂಗಳೂರು- ಮಂಗಳೂರು ರೈಲು ಮಾರ್ಗದಲ್ಲಿ ಘಾಟಿ ಪ್ರದೇಶದ ಸಮಸ್ಯೆ, ಹಳಿ ಸಮಸ್ಯೆಯಿಂದ ವಂದೇಭಾರತ್‌ ರೈಲು ಕೇರಳ ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆಯಿದೆ. ಆ ಮೂಲಕ ಬೆಂಗಳೂರಿಗೆ 834 ಕಿ.ಮೀ. ಪ್ರಯಾಣಿಸಬೇಕಾಗಿದ್ದು, 17 ತಾಸು ಬೇಕಾಗುತ್ತದೆ. ಈ ಹಾದಿಯಲ್ಲಿ ಸಂಚರಿಸಿದರೆ ಮಂಗಳೂರು ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗದು.

ಮಂಗಳೂರಿನಿಂದ ಹೈದರಾಬಾದ್‌ಗೆ ರೈಲು ಮಾರ್ಗದ ಮೂಲಕ ಪ್ರಯಾಣಿಸಬೇಕಾದರೆ ಸುಮಾರು 1,532 ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ. ಸುಮಾರು 27.40 ತಾಸು ತಗಲುತ್ತದೆ. ವಂದೇ ಭಾರತ್‌ ಆರಂಭಗೊಂಡರೆ ಪ್ರಯಾಣದ ಅವಧಿ 15ರಿಂದ 20 ತಾಸಿಗೆ ಇಳಿಯಬಹುದು. ಹಾಗೇ ಮಂಗಳೂರಿನಿಂದ ರೈಲು ಮೂಲಕ ಚೆನ್ನೈಗೆ ಸಾಗಲು 889 ಕಿ.ಮೀ. ದೂರ ಕ್ರಮಿಸಬೇಕಾಗಿದ್ದು, ಪ್ರಯಾಣದ ಅವಧಿ 15.32 ಕಿ.ಮೀ. ವಂದೇ ಭಾರತ ರೈಲು ಮೂಲಕ 8ರಿಂದ 10 ತಾಸುಗಳೊಳಗೆ ಚೆನ್ನೈ ತಲುಪಬಹುದು.

Advertisement

ಉತ್ತರ ಕರ್ನಾಟಕಕ್ಕೆ ನೇರ ಸಪರ್ಕ ಅಗತ್ಯ
ಮಂಗಳೂರಿನಿಂದ ಕಲ್ಬುರ್ಗಿಗೆ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಸಂಸದ ಪ್ರಹ್ಲಾದ ಜೋಶಿ, ಕರಾವಳಿ ಭಾಗದ ಪ್ರಯಾಣಿಕರ ಕಡೆಯಿಂದ ವ್ಯಕ್ತವಾಗಿದೆ . ಕಲ್ಬುರ್ಗಿಯಿಂದ ವಾಡಿ-ಯಾದಗಿರಿ-ರಾಯಚೂರು-ಗುಂತಕಲ್‌, ಬಳ್ಳಾರಿ, ಚಿಕ್ಕಮಗಳೂರು- ಬೀರೂರ, ಕಡೂರು, ಅರಸೀಕೆರೆ, ಹಾಸನ-ಸಕಲೇಶಪುರ -ಸುಬ್ರಹ್ಮಣ್ಯ ರಸ್ತೆ, ಪುತ್ತೂರು, ಬಂಟ್ವಾಳ ಮೂಲಕ ಮಂಗಳೂರಿಗೆ ಸಂಚಾರ ನಡೆಸಬಹುದಾಗಿದೆ ಎಂದು ಸಲಹೆ ನೀಡಲಾಗಿದೆ. ಇಲಾಖೆ ಇದನ್ನು ಪರಿಶೀಲಿಸಿ ಸಾಕಾರದ ನಿಟ್ಟಿನಲ್ಲಿ ಕಾರ್ಯೋನ್ಮುಖವಾದರೆ ಉತ್ತರ ಕರ್ನಾಟಕದ ನಗರಗಳಿಗೆ ಮಂಗಳೂರಿನಿಂದ ರೈಲ್ವೇ ಸಂಪರ್ಕ ವಿಸ್ತರಣೆಗೊಳ್ಳಲಿದೆ. 

ಈಡೇರದ ಬೇಡಿಕೆ
ಮಂಗಳೂರಿನಿಂದ ಅರಸಿಕೆರೆ ಮಾರ್ಗವಾಗಿ ಮೀರಜ್‌ಗೆ 1990ರ ದಶಕದಲ್ಲಿ ಸಂಚರಿಸುತ್ತಿದ್ದ “ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌’ ರೈಲು ಸೇವೆಯನ್ನು ಮತ್ತೆ ಪ್ರಾರಂಭಿಸುವಂತೆ ಕರಾವಳಿ ಭಾಗದ ಜನರ ಬೇಡಿಕೆಗೆ ರೈಲ್ವೇ ಇಲಾಖೆ ಇನ್ನೂ ಸ್ಪಂದಿಸಿಲ್ಲ. ಮಂಗಳೂರು-ಹಾಸನ ನಡುವೆ ಮೀಟರ್‌ ಗೇಜ್‌ ರೈಲು ಮಾರ್ಗವಿದ್ದ ವೇಳೆ 1994ರ ವರೆಗೆ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ಮಂಗಳೂರಿಗೆ ಸಕಲೇಶಪುರ, ಅರಸಿಕೆರೆ, ಹುಬ್ಬಳ್ಳಿ , ಧಾರವಾಡ, ಬೆಳಗಾವಿ ಮಾರ್ಗವಾಗಿ ಸಂಚಾರ ನಡೆಸುತ್ತಿತ್ತು. ಅದನ್ನು ಮಂಗಳೂರು ಮೀರಜ್‌ ನಡುವೆ ಮರು ಆರಂಭಿಸುವುದರಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸಾಂಗ್ಲಿ , ಮೀರಜ್‌ ನಡುವೆ ನೇರ ರೈಲು ಸಂಪರ್ಕ ಸಾಧ್ಯವಾಗುತ್ತದೆ. ಜತೆಗೆ, ಮಂಗಳೂರು-ಧಾರವಾಡ ನಡುವೆಯೂ ರೈಲ್ವೇ ಪ್ರಯಾಣ ಜಾಲವೇರ್ಪಡುತ್ತದೆ. ಸುಮಾರು 14 ತಾಸಿನಲ್ಲಿ ಮಂಗಳೂರಿನಿಂದ ಮೀರಜ್‌ಗೆ ಪ್ರಯಾಣಿಸಬಹುದು.

ಜಿಲ್ಲೆಗೆ ಪ್ರಯೋಜನ 
ಮಂಗಳೂರಿನಿಂದ ವಂದೇ ಭಾರತ್‌ ರೈಲುಸಂಚಾರ ಆರಂಭಿಸುವುದರಿಂದ ಜಿಲ್ಲೆಯ ಜನರಿಗೆ ಪ್ರಯೋಜನವಾಗಲಿದೆ. ಆದರೆ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ ರೈಲು ಯಾವ ಮಾರ್ಗದಲ್ಲಿ
ಓಡಿಸಲಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಕೇರಳದ ಮೂಲಕ ಸಾಗಿದರೆ ಜಿಲ್ಲೆಗೆ ಪ್ರಯೋಜನವಾಗದು.
– ಅನಿಲ್‌ ಹೆಗ್ಡೆ,
ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿಕರ ಅಭಿವೃದ್ಧಿ ಸಂಘದ
ತಾಂತ್ರಿಕ ಸಲಹೆಗಾರ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next