ನವದೆಹಲಿ: ದೇಶದ ರೈಲ್ವೇ ವಲಯದಲ್ಲಿ ಹೊಸ ಛಾಪು ಮೂಡಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಹಲವು ಹೊಸತನಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಸದ್ಯ ಹದಿನಾರು ಕೋಚ್‌ಗಳನ್ನು ಅದು ಹೊಂದಿದೆ. ಮುಂದಿನ ದಿನಗಳಲ್ಲಿ ಎಂಟು ಕೋಚ್‌ಗಳು ಇರುವ ರೈಲನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗುತ್ತಿದೆ.
ಚೆನ್ನೈನಲ್ಲಿ ಇರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಅದರ ಮಾದರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಸಂಚರಿಸುತ್ತಿರುವ ರೈಲು ಸೇರಿದಂತೆ 12 ರೈಲುಗಳು 16 ಕೋಚ್‌ಗಳನ್ನು ಒಳಗೊಂಡಿದೆ. ಮುಂದಿನ 2 ತಿಂಗಳಲ್ಲಿ ಎಂಟು ಕೋಚ್‌ಗಳು ಇರುವ ರೈಲಿನ ಮಾದರಿ ಸಿದ್ಧಗೊಳ್ಳುವ ಸಾಧ್ಯತೆ ಇದೆ. ಇಂಥ ಮಾದರಿಯ ರೈಲುಗಳನ್ನು ನಿರ್ವಹಿಸಲು ಮತ್ತು ದುರಸ್ತಿ ಮಾಡಲು ಸುಲಭವಾಗಲಿದೆ.
ಸಣ್ಣ ನಗರಗಳ ನಡುವೆ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಎಂಟು ಕೋಚ್‌ಗಳನ್ನು ಹೊಂದಿರುವ ರೈಲುಗಳನ್ನು ಅಭಿವೃದ್ಧಿಪಡಿಸಲು ಪ್ರಕ್ರಿಯೆ ನಡೆದಿದೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ದ ಹಿಂದುಸ್ತಾನ್ ಟೈಮ್ಸ್’ಗೆ ನೀಡಿದ ಮಾಹಿತಿ ಪ್ರಕಾರ “ಎಂಟು ಅಥವಾ ಹನ್ನೆರಡು ಕೋಚ್‌ಗಳು ಇರುವ ವಂದೇ ಭಾರತ್ ರೈಲು ಸಿದ್ಧಪಡಿಸಲು ಪ್ರಕ್ರಿಯೆಗಳು ನಡೆದಿವೆ. ಮುಂದಿನ ದಿನಗಳ ಬೇಡಿಕೆಗೆ ಅನುಗುಣವಾಗಿ ಅದನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.
ಜತೆಗೆ 12, 16, 20, 24 ಕೋಚ್‌ಗಳ ವರೆಗೆ ಉತ್ಪಾದನೆ ಮಾಡಲು ಅವಕಾಶಗಳೂ ಇವೆ. ಅವುಗಳು ಸಂಚರಿಸಲಿರುವ ಮಾರ್ಗಕ್ಕೆ ಅನುಗುಣವಾಗಿ ಕೋಚ್‌ಗಳ ಸಂಖ್ಯೆಯಲ್ಲಿ ಕೂಡ ವ್ಯತ್ಯಾಸವಾಗುತ್ತದೆ.