Advertisement

ಹೆಣ್ಣುಮಕ್ಕಳಿಗೆ ಹಾಡುಗಳ ವಂದನಾರ್ಪಣೆ!

06:43 PM Dec 21, 2017 | Sharanya Alva |

ಮಹಿಳಾ ಪ್ರಧಾನ ಚಿತ್ರಗಳು ಕನ್ನಡಕ್ಕೆ ಹೊಸತೇನಲ್ಲ. ಸಾಕಷ್ಟು ಚಿತ್ರಗಳು ಬಂದಿವೆ, ಬರುತ್ತಲೇ ಇವೆ. ಆ ಸಾಲಿಗೆ ಈಗ “ವಂದನ’ ಚಿತ್ರವೂ ಒಂದು. ಈ ಚಿತ್ರದ ಮೂಲಕ ವಿಜೇತ ನಿರ್ದೇಶಕರಾಗಿದ್ದಾರೆ. ಯಾವ ನಿರ್ದೇಶಕರ ಬಳಿ ಕೆಲಸ ಮಾಡದೆ, ಸಿನಿಮಾಗಳನ್ನು ನೋಡಿಕೊಂಡೇ ಒಂದು ಕಥೆ ರೆಡಿ  ಮಾಡಿ, ಅದನ್ನು ನಿರ್ದೇಶಿಸಿದ್ದಾರೆ ವಿಜೇತ. ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. 
“ಪ್ರಸ್ತುತ ಸಮಾಜದಲ್ಲಿ ಹೆಣ್ಣಿಗೆ ಗೌರವ ಸಿಗುತ್ತಿಲ್ಲ.  ಸೂಕ್ತ ಸ್ಥಾನ-ಮಾನವೂ ಇಲ್ಲ. ಪುರುಷ ಸಮಾಜ ಮಹಿಳೆಯನ್ನು ಕೀಳರಿಮೆಯಿಂದ ನೋಡುವ ಮೂಲಕ ಶೋಷಿಸುತ್ತಿದೆ. ಒಂದು ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದರೆ, ಆಕೆಯನ್ನು ಹೇಗೆಲ್ಲಾ ನೋಡಿಕೊಳ್ಳಬೇಕು, ಅವಳನ್ನು ಸಬಲೆಯನ್ನಾಗಿಸಬೇಕು ಎಂಬುದು ಕಥೆಯ ಸಾರಾಂಶ’ ಅನ್ನುತ್ತಾರೆ ನಿರ್ದೇಶಕರು.

Advertisement

ಶೋಭಿತಾ ಇಲ್ಲಿ ಗೃಹಿಣಿ ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ಇದು ಮೂರನೇ ಚಿತ್ರ. ಗಂಡ-ಹೆಂಡತಿ ಮಧ್ಯೆ ಸಾಮರಸ್ಯ ಇದ್ದರೆ, ಸಂಸಾರ ಎಷ್ಟೊಂದು ಸುಖಮಯವಾಗಿರುತ್ತೆ ಎಂಬುದನ್ನಿಲ್ಲಿ ಚೆನ್ನಾಗಿ ತೋರಿಸಲಾಗಿದೆ. ಕುಟುಂಬದಲ್ಲಿ ಸಣ್ಣಪುಟ್ಟ ಜಗಳವಿದ್ದರೂ, ಗಂಡ-ಹೆಂಡತಿ ಅದನ್ನು ಬಗೆಹರಿಸಿಕೊಂಡು, ಹೇಗೆ ಬದುಕಬೇಕು ಎಂಬುದು ಇಲ್ಲಿ ಹೈಲೈಟ್‌ ಅಂದರು ಶೋಭಿತಾ. ಅವರಿಗೆ ನಾಯಕನಾಗಿ ಕಿರುತೆರೆ ನಟ ಅರುಣ್‌ ಅಭಿನಯಿಸಿದ್ದಾರೆ. ಮೈಸೂರು, ಬೆಂಗಳೂರು, ಶಿವನಸಮುದ್ರದಲ್ಲಿ ಚಿತ್ರೀಕರಿಸಲಾಗಿದ್ದು, ಚಿತ್ರದಲ್ಲಿರುವ ಮೂರು ಹಾಡುಗಳ ಪೈಕಿ ಒಂದು ಗೀತೆ ರಚಿಸಿ ಸಂಗೀತ ಸಂಯೋಜಿಸಿದ್ದಾರೆ ಎಂ.ಎಸ್‌.ತ್ಯಾಗರಾಜ. 

ನಾಗೇಂದ್ರಪ್ರಸಾದ್‌ ಅವರಿಗೆ ಚಿತ್ರದ ತುಣುಕು ನೋಡಿದಾಗ, ನಿರ್ದೇಶಕರಿಗೆ ಯಾವುದೇ ಅನುಭವ ಇಲ್ಲದಿದ್ದರೂ, ಅನುಭವಿ ನಿರ್ದೇಶಕರಂತೆ ಮಾಡಿರುವ ಕೆಲಸ ಕಾಣುತ್ತದೆಯಂತೆ. ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರ ಕೊಡುವಂತಾಗಲಿ ಅಂದರು. ಆಡಿಯೋ ಬಿಡುಗಡೆ ವೇಳೆ ನಿರ್ಮಾಪಕರಾದ ಯೋಗೀಶ್‌ ನಾರಾಯಣ್‌, ಸಿಡಿ.ಬಸಪ್ಪ, ನಟಿ ಭಾವನಾರಾವ್‌ ಇತರರು ಇದ್ದರು. ಅಂದಹಾಗೆ, ಈ ಚಿತ್ರದ ಪೋಸ್ಟರ್‌ನಲ್ಲಿ ನಿರ್ಮಾಪಕರ ಹೆಸರು ಇರಲಿಲ್ಲ. ಹಾಗಾಗಿ ಅವರು ವೇದಿಕೆ ಮೇಲೂ ಕಾಣಸಿಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next