ಸುಳ್ಯ: ದೇಶದ ಪರಂಪರೆ ಮತ್ತು ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಸ್ಕಾರಯುತ ವಾದ ಮತ್ತು ರಾಷ್ಟ್ರೋನ್ನತಿಯ ಚಿಂತನೆ ಬೆಳೆಸುವ ಶಿಕ್ಷಣ ಸಂಸ್ಥೆಗಳ ಅಗತ್ಯವಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲು ನುಡಿದರು. ದ.ಕ. ಗೌಡ ವಿದ್ಯಾ ಸಂಘದ ಆಡಳಿತಕ್ಕೊಳಪಟ್ಟ ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜಿನ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ, ಸ್ವೇಚ್ಛಚಾರ 2 ಬೇರೇಬೇರೆ. ದೇಶದಲ್ಲಿ ಸ್ತ್ರೀಯರಿಗೆ ಪೂಜ್ಯತೆಯ, ಆರಾಧನೆಯ ಸ್ಥಾನ, ಸ್ವಾತಂತ್ರ್ಯವನ್ನು ನೀಡಿದ್ದೇವೆ. ದೇಶದ ಸ್ವಾತಂತ್ರ್ಯವನ್ನು ಅನುಭವಿಸುವುದರೊಂದಿಗೆ ಮೌಲ್ಯಯುತ ಸಂಸ್ಕಾರಗಳನ್ನು ಬೆಳೆಸುವ ಕಾರ್ಯವಾಗಬೇಕು. ದ.ಕ. ಶಿಕ್ಷಣ ಕ್ಷೇತ್ರದ ಕಾಶಿಯಾಗಿದ್ದು ಶಿಕ್ಷಣಕ್ಕೇನೂ ಕೊರತೆಯಿಲ್ಲ , ಆದರೆ ನಗರಗಳಲ್ಲಿ ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವುದರಿಂದ ಸಂಸ್ಕಾರಯುತ ಶಿಕ್ಷಣ ನೀಡುವ ಸಂಸ್ಥೆಗಳ ಕೊರತೆಯಿದೆ ಎಂದರು.
ಡಾ| ಕುರುಂಜಿ ಪರಿವರ್ತನೆಯ ಹರಿಕಾರ. ದೇಶದಲ್ಲಿ ಈಗ ಏಕ ರೂಪ ಶಿಕ್ಷಣ, ಸಮಾನ ಶಿಕ್ಷಣ ಈಗ ದೇಶದಲ್ಲಿ ಜಾರಿಯಾಗುತ್ತಿದ್ದರೆ ಡಾ| ಕುರುಂಜಿ ವೆಂಕಟ್ರಮಣ ಗೌಡರ ನೇತೃತ್ವದಲ್ಲಿ 25 ವರ್ಷಗಳ ಹಿಂದೆ ಸುಳ್ಯದಲ್ಲಿ ಇದು ಜಾರಿಗೊಂಡಿದೆ. ಗ್ರಾಮೀಣ ಪ್ರದೇಶ ಸುಳ್ಯದಲ್ಲಿ ಹಿಂದೆಯೇ ಎಲ್ಲ ಸಮಾಜದ ಮಹಿಳೆಯರಿಗೆ ಶಾರದಾ ಮಹಿಳಾ ಶಿಕ್ಷಣ ಸಂಸ್ಥೆಗಳ ಮೂಲಕ ಸ್ವೇಚ್ಛಾಚಾರ ರಹಿತವಾದ ಮೌಲ್ಯಯುತ ಶಿಕ್ಷಣ ನೀಡಲು ಪ್ರಯತ್ನಿಸಿದ್ದು, ಗೌಡ ವಿದ್ಯಾ ಸಂಘದ ಹಿರಿಯರ ಶ್ರೇಷ್ಠ ಸಾಧನೆ ಎಂದರು.
ರಜತ ಮಹೋತ್ಸವದ ನೆನಪಿನ ಸಂಚಿಕೆಯನ್ನು ಸಂಸದರು ಬಿಡುಗಡೆಗೊಳಿ ಸಿದರು. ಶಾಲಾ ಕೊಠಡಿಯೊಂದಕ್ಕೆಸಂಸದರ ನಿಧಿಯಿಂದ ಅನುದಾನ ನೀಡುವುದಾಗಿ ಘೋಷಿಸಿದರು. ಶಾಸಕ ಎಸ್. ಅಂಗಾರ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ ಮುಖ್ಯ ಅತಿಥಿಗಳಾಗಿದ್ದರು.
ರಜತಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಉಮೇಶ್ ಎಂ.ಪಿ., ಪ್ರ. ಕಾರ್ಯದರ್ಶಿ ಭವಾನಿಶಂಕರ ಅಡ್ತಲೆ, ದ.ಕ. ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ| ಬಿ. ರೇವತಿ ನಂದನ್, ನಿರ್ದೇಶಕ ಎಸ್. ಆರ್. ಸೂರಯ್ಯ, ಖಜಾಂಜಿ ಮಾಧವ ಗೌಡ ಎಂ.ಬೆಳ್ಳಾರೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಶಿತಾ ಕೇಶವ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಬಂಗ್ಲೆಗುಡ್ಡೆ, ಗೌಡ ವಿದ್ಯಾ ಸಂಘದ ಪದಾಧಿಕಾರಿಗಳಾದ ಎ.ವಿ.ತೀರ್ಥರಾಮ, ನಳಿನಿ ಲೋಕಪ್ಪ ಗೌಡ, ತೇಜಕುಮಾರ್ ಬಡ್ಡಡ್ಕ, ಕಾಳಿಕಾ ಪ್ರಸಾದ್, ಡಾ| ಸಾಯಿಗೀತಾ, ಲೋಕೇಶ್ವರಿ ವಿನಯಚಂದ್ರ, ಧನಂಜಯ ಮದುವೆಗದ್ದೆ, ಪದ್ಮ ಕೋಲ್ಚಾರ್, ಡಿ.ಎಂ.ಗೌಡ, ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಸವಿತಾ ಜಯದೇವ್, ಪದವಿ ಕಾಲೇಜು ಪ್ರಾಂಶುಪಾಲೆ ಜ್ಯೋತ್ಸ್ನಾ, ತಂಗಮ್ಮ ಮೊದಲಾದವರು ವೇದಿಕೆಯಲ್ಲಿದ್ದರು.
ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಧ್ಯಕ್ಷತೆ ವಹಿಸಿದ್ದರು. ದ.ಕ. ಗೌಡ ವಿದ್ಯಾ ಸಂಘದ ಮಾಜಿ ಅಧ್ಯಕ್ಷ ಲೋಕಯ್ಯ ಗೌಡ ಸ್ವಾಗತಿಸಿ, ಪ್ರಾಂಶುಪಾಲೆ ದಯಾಮಣಿ ಪ್ರಾಸ್ತಾವಿಸಿದರು. ಸ್ವರ್ಣಲತಾ, ದಾಮೋದರ, ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.
ಸಮ್ಮಾನ
ನಿವೃತ್ತ ಪ್ರಾಂಶುಪಾಲರಾದ ಪಿ. ಕಮಲಾ ಬಾಲಚಂದ್ರ, ಪ್ರೇಮಾ ಎಂ., ಪ.ಪೂ. ಕಾಲೇಜಿನ ಪ್ರಾಂಶುಪಾಲೆ ದಯಾಮಣಿ ಕೆ. ಅವರನ್ನು ಸಮ್ಮಾನಿಸಲಾಯಿತು. ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢ ಶಾಲೆ, ಶ್ರೀ ಶಾರದಾ ಮಳಾ ಕಾಲೇಜು, ಶ್ರೀಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬಂದಿಗೆ ಗೌರವಾರ್ಪಣೆ ನಡೆಯಿತು.