ಚಿಕ್ಕಬಳ್ಳಾಪುರ: ಇತ್ತೀಚೆಗೆ ಮುಕ್ತಾಯಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಪ್ರಕ್ರಿಯೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ದಲ್ಲಿ ಒಟ್ಟು ಆರು ಕೇಂದ್ರಗಳಲ್ಲಿ ಗುರುವಾರ ದಿಂದ ಆರಂಭಗೊಂಡಿದ್ದು, ಸಾರ್ವಜನಿಕ ಶಿಕ್ಷಣ
ಇಲಾಖೆ ಅಧಿಕಾರಿಗಳು ಉಸ್ತುವಾರಿ ವಹಿಸಿದ್ದಾರೆ.
ನಗರದ ಪ್ರಶಾಂತಿ ಬಾಲ ಮಂದಿರ ಟ್ರಸ್ಟ್, ಸರ್ ಎಂ.ವಿ. ಪ್ರೌಢ ಶಾಲೆ, ನ್ಯೂಹೊರೈಜಾನ್, ಸೆಂಟ್ ಜೋಸೆಫ್ ಪ್ರೌಢ ಶಾಲೆ, ಕ್ವಾಯಟ್ ಕಾರ್ನರ್, ನ್ಯೂಟನ್ ಗ್ರಾಮರ್ ಪ್ರೌಢ ಶಾಲೆಗಳಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗೇಶ್ ಗುರುವಾರ ಉದಯವಾಣಿಗೆ ತಿಳಿಸಿದರು.
30 ಸಾವಿರ ಉತ್ತರ ಪತ್ರಿಕೆ: ಜಿಲ್ಲೆಗೆ ಈ ಬಾರಿ ಬೇರೆ ಜಿಲ್ಲೆಗಳಿಂದ ಒಟ್ಟು 30 ಸಾವಿರದಷ್ಟು ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳು ಬಂದಿದ್ದು, ಆ ಪೈಕಿ 20 ಸಾವಿರ ಐಚ್ಛಿಕ ವಿಷಯಗಳಾದರೆ ಉಳಿದ 10 ಸಾವಿರ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಾಗಿವೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ತ್ವರಿತವಾಗಿ ನೀಡ ಬೇಕೆಂಬ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಶೀಘ್ರವಾಗಿ ಕೈಗೆತ್ತಿಕೊಂಡಿದೆ. ಲೋಕಸಭಾ ಚುನಾವಣಾ ಕಾರ್ಯಕ್ಕೆ ಬಹಳಷ್ಟು ಶಿಕ್ಷಕರು ನಿಯೋಜನೆ ಗೊಂಡಿರುವುದರಿಂದ ಮೌಲ್ಯ ಮಾಪನ ಕಾರ್ಯ ಕ್ರಮವನ್ನು ಶಿಕ್ಷಣ ಇಲಾಖೆ ತ್ವರಿತವಾಗಿ ಕೈಗೆತ್ತಿ ಕೊಂಡಿದೆ.
ಪ್ರತಿ ದಿನ ಒಬ್ಬ ಮೌಲ್ಯಮಾಪಕರು 26 ಐಚ್ಚಿಕ ವಿಷಯಗಳ ಉತ್ತರ ಪತ್ರಿಕೆಗಳನ್ನು ಹಾಗೂ 20 ಕನ್ನಡ, ಹಿಂದಿ, ಇಂಗ್ಲಿಷ್ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಬೇಕಿದೆ. ಪ್ರತಿ ಮೌಲ್ಯಮಾಪನ ಕೇಂದ್ರಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದ್ದು, ಸಿಸಿ ಕ್ಯಾಮೆರಾ ಸೇರಿದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
900 ಮಂದಿ ಶಿಕ್ಷಕರು ಹಾಜರ್: ಈ ಬಾರಿ 3 ವರ್ಷ ಸೇವೆ ಸಲ್ಲಿಸಿದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ನೋಂದಾಯಿಸಿ ಕೊಂಡಿದ್ದು, ಪ್ರತಿ ಮೌಲ್ಯ ಮಾಪನಕ್ಕೆ ಬರುವ ಶಿಕ್ಷಕರ ಹಾಜರಾತಿ ಪಡೆದು ಪರೀಕ್ಷಾ ಮಂಡಳಿಗೆ ಕಳುಹಿಸಲಾಗುತ್ತಿದೆ. ಮೌಲ್ಯಮಾಪನ ಆರಂಭಗೊಂಡ ಮೊದಲ ದಿನ ಸಾವಿರ ಶಿಕ್ಷಕರನ್ನು ನಿರೀಕ್ಷಿಸಿದ್ದ ಇಲಾಖೆಗೆ 900 ಮಂದಿ ಶಿಕ್ಷಕರು ಹಾಜರಾಗಿದ್ದಾರೆ.
ಕಡ್ಡಾಯವಾಗಿ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಈಗಾಗಲೇ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೂ ಕೆಲ ಶಿಕ್ಷಕರು ಮೊದಲ ದಿನ ತಪ್ಪಿಸಿಕೊಂಡಿರುವುದು ಕಂಡು ಬಂದಿದೆ.
ಶಿಕ್ಷಕರಿಗೆ ಡಬಲ್ ಡ್ನೂಟಿ ಜಿಲ್ಲೆಯಲ್ಲಿ ಈಗಾಗಲೇ ಲೋಕಸಭಾ ಚುನಾವಣೆಗೆ ದಿನಗಣನೆ ಶುರವಾಗಿದೆ. ಏ.18 ರಂದು ಜಿಲ್ಲೆಯಲ್ಲಿ ಮತದಾನ ನಡೆಯಲಿದ್ದು, ಚುನಾವಣಾ ಕಾರ್ಯಕ್ಕೆ ಬಹುತೇಕ ಶಿಕ್ಷಕರು ನಿಯೋಜನೆ ಗೊಂಡಿದ್ದಾರೆ. ಇದರ ನಡುವೆ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಭಾರ ಕೂಡ ಶಿಕ್ಷಕರ ಮೇಲಿರುವುದರಿಂದ ಶಿಕ್ಷಕರು ಇತ್ತ ಮೌಲ್ಯ ಮಾಪನ ಕಾರ್ಯದಲ್ಲಿ ಭಾಗವಹಿಸಿ ಅತ್ತ ಏ.18 ರಂದು ನಡೆಯುವ ಮತದಾನ ಕಾರ್ಯ ಕ್ರಮಕ್ಕೂ ಹೋಗಬೇಕಿರುವುದರಿಂದ ಜಿಲ್ಲೆಯ ಪ್ರೌಢ ಶಾಲಾ ಶಿಕ್ಷಕರಿಗೆ ಡಬಲ್ ಡ್ನೂಟಿ ಮಾಡುವಂತಾಗಿದೆ.
ಜಿಲ್ಲೆಯ 6 ಕೇಂದ್ರಗಳಲ್ಲಿ 6 ವಿಷಯಗಳ ಮೌಲ್ಯಮಾಪನ ನಡೆಯಲಿದ್ದು, ಎಲ್ಲಾ ಮೂಲಭೂತ ಸೌಲಭ್ಯ ಮಾಡಿಕೊಳ್ಳಲಾಗಿದೆ. ಈ ಸಾಲಿನಲ್ಲಿ ಪ್ರತಿ ದಿನದ ಮೌಲ್ಯಮಾಪನದ ನಂತರ ಅದೇ ದಿನ ಆನ್‌ಲೈನ್‌ನಲ್ಲಿ ಅಂಕಗಳ ಮಾಹಿತಿಯನ್ನು ಬೋರ್ಡಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿ ಫಲಿತಾಂಶ ಶೀಘ್ರದಲ್ಲಿಯೇ ಹೊರಬೀಳುವ ನಿರೀಕ್ಷೆ ಇದೆ.
●ಎಸ್.ಜಿ.ನಾಗೇಶ್, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ