Advertisement

Valmiki:ಚಂದ್ರಶೇಖರ್‌ ಆ*ತ್ಮಹತ್ಯೆಗೆ ಅಧಿಕಾರಿಗಳಿಂದ ಒತ್ತಡವೇ ಕಾರಣ

02:29 AM Aug 23, 2024 | Team Udayavani |

ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಅಂದಿನ ವ್ಯವಸ್ಥಾಪಕ ಜೆ.ಬಿ. ಪದ್ಮನಾಭ್‌ ಮತ್ತು ಲೆಕ್ಕಾಧೀಕ್ಷಕ ಪರುಶರಾಮ್‌ ದುರ್ಗಣ್ಣನವರ್‌ ಅವರಿಂದ ತೀವ್ರ ಒತ್ತಡ ಹಾಗೂ ಇಡೀ ಪ್ರಕರಣದ ಹೊಣೆ ಹೊರಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿರುವುದೇ ನಿಗಮದ ಅಧೀಕ್ಷಕ ಪಿ. ಚಂದ್ರಶೇಖರ್‌ ಆತ್ಮಹತ್ಯೆಗೆ ಕಾರಣ ಎಂದು ಸಿಐಡಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಎಸ್‌ಐಟಿ ಗುರುವಾರ ಶಿವಮೊಗ್ಗದ ಸೆಶನ್ಸ್‌ ಕೋರ್ಟ್‌ಗೆ ಸಲ್ಲಿಸಿರುವ 300 ಪುಟಗಳ ಪ್ರಾಥಮಿಕ ಆರೋಪಪಟ್ಟಿಯಲ್ಲಿ ಈ ಅಂಶವನ್ನು ಉಲ್ಲೇಖೀಸಿದೆ. ಚಂದ್ರಶೇಖರ್‌ ಈ ಇಬ್ಬರು ಅಧಿಕಾರಿ ಗಳು ಹಾಗೂ ಇತರರ ವಿರುದ್ಧ 187.33 ಕೋಟಿ ರೂ. ವಂಚಿಸಿರುವ ಕುರಿತು ಆರೋಪಿಸಿ, ಮೇ 28ರಂದು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಧಿಕಾರಿಗಳಿಂದ ಒತ್ತಡವೇ ಕಾರಣ
ಈ ಸಂಬಂಧ ಶಿವಮೊಗ್ಗದ ವಿನೋಬಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ನಿಗಮದಲ್ಲಿ ನೂರಾರು ಕೋಟಿ ರೂ. ವಂಚನೆ ಸಂಬಂಧ ಬೆಂಗಳೂರು ಸೇರಿ ವಿವಿಧೆಡೆ 8 ಪ್ರಕರಣಗಳು ದಾಖಲಾಗಿದ್ದವು. ಈಗ ಈ 8 ಪ್ರಕರಣಗಳ ಪೈಕಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಸದ್ಯ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಸದ್ಯ ಈ ಇಬ್ಬರು ಆರೋಪಿ ಅಧಿಕಾರಿಗಳು ಬಂಧನಕ್ಕೊಳಗಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

300 ಪುಟ, 36 ಸಾಕ್ಷಿ, 67 ಸಾಕ್ಷ್ಯ ಸಂಗ್ರಹ: 300 ಪುಟಗಳ ಪ್ರಾಥಮಿಕ ಆರೋಪಪಟ್ಟಿಯಲ್ಲಿ ಚಂದ್ರಶೇಖರ್‌ ಅವರ ಪತ್ನಿ ಕವಿತಾ, ನಿಗಮದ ಎಲ್ಲ ಹಂತದ ಅಧಿಕಾರಿಗಳು, ಬ್ಯಾಂಕ್‌ನ ಅಧಿಕಾರಿಗಳ ಸಹಿತ ಸುಮಾರು 36 ಮಂದಿ ಸಾಕ್ಷಿಗಳ ಹೇಳಿಕೆ ಹಾಗೂ ಆರೋಪಿಗಳು ಅಕ್ರಮವಾಗಿ ಹಣ ವರ್ಗಾವಣೆಗೆ ಸೂಚಿಸಿರುವ ಕುರಿತ ದಾಖಲೆಗಳು, ಬ್ಯಾಂಕ್‌ನಲ್ಲಿ ದೊರೆತ ನಕಲಿ ಖಾತೆಗಳು ವಿವರ ಸೇರಿ ಸುಮಾರು 67 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಇತರ ಸಾಕ್ಷಿಗಳ ಹೇಳಿಕೆ ಹಾಗೂ ಸಾಕ್ಷ್ಯ ಸಂಗ್ರಹ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.
ಇದೇ ಹಗರಣ ಪ್ರಕರಣ ಸಂಬಂಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಂ.ಜಿ. ರಸ್ತೆಯಲ್ಲಿರುವ ಯೂನಿಯನ್‌ ಬ್ಯಾಂಕ್‌ನ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ ಬೇರೆ ಬೇರೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ ಇದುವರೆಗೆ 14ಕ್ಕೂ ಅಧಿಕ ಮಂದಿಯನ್ನು ಎಸ್‌ಐಟಿ ಬಂಧಿಸಿದೆ. ಇನ್ನು ಇ.ಡಿ. ಅಧಿಕಾರಿಗಳು ಸಚಿವರಾಗಿದ್ದ ನಾಗೇಂದ್ರ ಅವರನ್ನು ಬಂಧಿಸಿದ್ದಾರೆ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಗೋವಾಕ್ಕೆ ಕರೆದೊಯ್ದಿದ್ದ ಆರೋಪಿಗಳು?
ಚಂದ್ರಶೇಖರ್‌ ಆರೋಪಿಗಳ ಬೆದರಿಕೆಗೆ ಬಗ್ಗಿರಲಿಲ್ಲ. ಹೀಗಾಗಿ ಆರೋಪಿಗಳು ಕೆಲವು ಸಬೂಬು ಹೇಳಿ ಚಂದ್ರಶೇಖರ್‌ ಅವರನ್ನು ಗೋವಾಕ್ಕೆ ಕರೆದೊಯ್ದಿದ್ದರು ಎಂದು ಹೇಳಲಾಗಿದೆ. ಅಲ್ಲದೆ 5 ಲಕ್ಷ ರೂ.ಅಧಿಕ ಹಣ ನೀಡುವುದಾಗಿ ಆಮಿಷವೊಡ್ಡಿ, ಈ ವಿಚಾರವನ್ನು ಯಾರೊಂದಿಗೂ ಬಾಯಿ ಬಿಡದಂತೆ ಎಚ್ಚರಿಕೆ ನೀಡಿದ್ದರು. ಆದರೆ ಚಂದ್ರಶೇಖರ್‌ ಒಪ್ಪಿಕೊಂಡಿರಲಿಲ್ಲ. ಅನಂತರ ಆರೋಪಿಗಳು ಅಂದಿನ ಸಚಿವ ನಾಗೇಂದ್ರ ಅವರ ಆಪ್ತರು ಹಾಗೂ ಬೇರೆ ಬೇರೆ ಮಾರ್ಗಗಳ ಮೂಲಕ ಚಂದ್ರಶೇಖರ್‌ ಮೇಲೆ ಒತ್ತಡ ಹಾಕಿದ್ದರು ಎಂದು ಹೇಳಲಾಗಿದೆ. ಈ ಎಲ್ಲ ಕಾರಣಗಳಿಂದ ತೀವ್ರ ಮಾನಸಿಕ ಒತ್ತಡಕ್ಕೊಳಗಾದ ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next