Advertisement

Valmiki Nigama Scam: ನಾಗೇಂದ್ರ ಮತ್ತೆ 5 ದಿನ ಇ.ಡಿ. ವಶಕ್ಕೆ

01:38 AM Jul 19, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಬಂಧಿತರಾಗಿ ರುವ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲ ಯವು ಮತ್ತೆ 5 ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇಡಿ) ವಶಕ್ಕೆ ನೀಡಿದೆ.

Advertisement

ನಾಗೇಂದ್ರ ಅವರನ್ನು ವಶಕ್ಕೆ ಪಡೆದ ಅವಧಿಯು ಗುರುವಾರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಇಡಿ ಪರ ವಕೀಲ ಪ್ರಸನ್ನಕುಮಾರ್‌ ಇನ್ನೂ ವಿಚಾರಣೆ ಬಾಕಿ ಇರುವುದರಿಂದ 8 ದಿನಗಳ ಕಾಲ ಇ.ಡಿ. ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ನ್ಯಾಯಾಲಯವು 5 ದಿನ (ಜುಲೈ 22) ಇ.ಡಿ. ವಶಕ್ಕೆ ಒಪ್ಪಿಸಿದೆ. ಈವರೆಗಿನ ತನಿಖಾ ಮಾಹಿತಿಯ ದಾಖಲೆಗಳನ್ನು ಇ.ಡಿ. ಅಧಿಕಾರಿಗಳು ನ್ಯಾಯಾಧೀಶರಿಗೆ ಸಲ್ಲಿಸಿದರು.

ಕೊನೆಗೂ ಇ.ಡಿ. ವಿಚಾರಣೆಗೆ ಹಾಜರಾದ ದದ್ದಲ್‌
ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳ ಮುಂದೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವನಗೌಡ ದದ್ದಲ್‌ ಗುರುವಾರ ಹಾಜರಾಗಿದ್ದಾರೆ.

ಅಧಿಕಾರಿಗಳು ಈ ಹಿಂದೆ ದದ್ದಲ್‌ ಮನೆಗೆ ದಾಳಿ ನಡೆಸಿದಾಗ ನಿಗಮಕ್ಕೆ ಸಂಬಂಧಿಸಿದ ಹಣವನ್ನು ಚುನಾವಣ ಅಕ್ರಮಕ್ಕೆ ಬಳಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದವು. ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಅಧಿಕಾರಿಗಳು ದದ್ದಲ್‌ಗೆ ನೋಟಿಸ್‌ ಜಾರಿ ಮಾಡಿದ್ದರು. ಆದರೆ ದದ್ದಲ್‌ ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಿ ಇ.ಡಿ. ವಿಚಾರಣೆಗೆ ಹಾಜರಾಗಿರಲಿಲ್ಲ.

ಬಳಿಕವೂ 2 ಬಾರಿ ಇ.ಡಿ. ನೋಟಿಸ್‌ ಜಾರಿ ಮಾಡಿತ್ತು. ಅದಕ್ಕೂ ಸ್ಪಂದಿಸದಿದ್ದರೆ ಬಂಧಿಸಬಹುದು ಎಂಬ ಭೀತಿಯಿಂದ ದದ್ದಲ್‌ ಗುರುವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗಿದ್ದಾರೆಂದು ತಿಳಿದು ಬಂದಿದೆ. ಅಕ್ರಮ ಹಣ ವರ್ಗಾವಣೆ ಮಾಡಿರುವ ಸಾಕ್ಷ್ಯ ಸಿಗುತ್ತಿದ್ದಂತೆ ಅವರನ್ನೂ ಬಂಧಿಸಲು ಇ.ಡಿ. ಸಿದ್ಧತೆ ನಡೆಸಿದೆ ಎನ್ನಲಾಗಿದೆ.

Advertisement

ವಾಲ್ಮೀಕಿ ಹಗರಣ: ಛತ್ತೀಸ್‌ಗಢದಲ್ಲೂ 14 ಕೋ.ರೂ. ವಂಚನೆ?
ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿಗಳಾದ ಸತ್ಯನಾರಾಯಣ ವರ್ಮ, ಕಾಕಿ ಶ್ರೀನಿವಾಸ್‌ ಛತ್ತೀಸ್‌ಗಢದಲ್ಲೂ ಇಂಥದ್ದೇ ಕೃತ್ಯ ಎಸಗಿರುವ ಅಂಶ ಬೆಳಕಿಗೆ ಬಂದಿದೆ.

ನಿಗಮದಲ್ಲಿ ನಡೆದಿರುವ 94 ಕೋಟಿ ರೂ.ಗಳ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ನಾಗೇಂದ್ರ ತಲೆದಂಡವಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನೆಕ್ಕಂಟಿ ನಾಗರಾಜ್‌, ಸತ್ಯನಾರಾಯಣ ವರ್ಮ, ಕಾಕಿ ಶ್ರೀನಿವಾಸ್‌ ಸೇರಿ ಹಲವರು ಕಂಬಿ ಎಣಿಸುತ್ತಿದ್ದಾರೆ.

ಬಂಧಿತ ಹೈದರಾಬಾದ್‌ ಮೂಲದ ಸತ್ಯನಾರಾಯಣ ವರ್ಮ ಮತ್ತು ಕಾಕಿ ಶ್ರೀನಿವಾಸ್‌ ಈ ಹಿಂದೆ 2022ರಲ್ಲಿ ಛತ್ತೀಸ್‌ಘಡದ ಕೃಷಿ ಮಂಡಳಿಯಲ್ಲೂ 14 ಕೋಟಿ ರೂ. ಹಣ ವಂಚಿಸಿದ್ದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿ ಸಿ ಸತ್ಯನಾರಾಯಣ ವರ್ಮ, ಕಾಕಿ ಶ್ರೀನಿವಾಸ್‌ ಸೇರಿದಂತೆ ಒಟ್ಟು 12 ಜನ ಆರೋಪಿಗಳು ಅಲ್ಲಿನ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next